ಗುರುರಾಜ ದೇಸಾಯಿ
“ಗಾಯ” ಕಥಾ ಸರಣಿಯು ಮೂರು ವಾರಗಳಿಂದ ಆರಂಭಗೊಂಡಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ ನೈಜ ಘಟನೆಯನ್ನು ಅಕ್ಷರರೂಪಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದು. ಸಲಹೆ ಸೂಚನೆಗಳಿಗೂ ಸ್ವಾಗತ.
(ಇಲ್ಲಿಯವರೆಗೆ … ಕೆಂಚ ಮತ್ತು ಬಸ್ಯಾರನ್ನು ಪೊಲೀಸ್‌ರಿಗೆ ಒಪ್ಪಿಸುವುದಾಗಿ ಊರ ಹಿರಿಯರು ನಿಶ್ಚಿಯಿಸಿದ್ದರು. ಇದು ಶ್ರೀಧರನ್ನು ತೀವ್ರ ವೇದನೆಗೆ ತಳ್ಳಿತ್ತು. ತಿಂಡಿ, ಊಟ ಸೇರದಂತಾಗಿತ್ತು. ಊರ ಹಿರಿಯರು ಯಾಕೆ ಹೀಗೆ ನಿರ್ಧಾರ ಮಾಡಿದರು ಎಂದು ಅವನ ಮನಸ್ಸು ಚಟಪಟಿಸಿತ್ತು. ಡಂಗುರದ ಸದ್ದು ಅವನ ಸಂಕಟವನ್ನುಮತ್ತಷ್ಟು ಹೆಚ್ಚಿಸಿತ್ತು. ಮುಂದೆ ಓದಿ …….. )
ಕೆಂಚ ಮತ್ತು ಬಸ್ಯಾರನ್ನು ಪೊಲೀಸರಿಗೆ ಒಪ್ಪಿಸುವ ವಿಚಾರ ಊರ ತುಂಬೆಲ್ಲಾ ಹರಡಿ ಅಗಸಿಕಟ್ಟೆ ಮುಂದೆ ಜನ ಸೇರಿದರು. ರಾತ್ರಿ ಸಮಯ 8 ಗಂಟೆ ಸುಮಾರಿಗೆ ಅವರಿಬ್ಬರನ್ನು ಕರೆದುಕೊಂಡು ಹೋಗಲು ಊರ ಹಿರಿಯರು ಸಿದ್ದತೆ ನಡೆಸಿದ್ದರು.
ಊರ ಹಿರಿಯನೊಬ್ಬ, ಇವರನ್ನ ಕೆಳಗಿಳಿಸ್ರಿ ಎಂದು ಆಜ್ಞೆ ಮಾಡಿದ.
ಆತ್ರಿ ಧಣ್ಯಾರ! ಎಂದು ನಾಗ್ಯಾ ಮತ್ತು ಚೆಲ್ವ್ಯಾ ಇಬ್ಬರೂ ಸೇರಿ ಕೆಂಚ ಮತ್ತು ಬಸ್ಯಾರನ್ನು ಅಗಸಿಕಟ್ಟಿಯಿಂದ ಕೆಳಗಿಳಿಸಿದರು,
ನೀರು…. ನೀರು… ನೀರು…. ನೀರು… ಎಂದು ಕೆಂಚ ಬಸ್ಯಾ ಹೆಬ್ಬೆರಳು ತೋರಿಸಿ ಕೇಳುತ್ತಿದ್ದರು.
ಯಪ್ಪಾ, ಧಣ್ಯಾರ. ನೀರ ಕೇಳಕತ್ತರ್ರಿ, ಕೊಡ್ಲೇನ್ರಿ …… ಎಂದು, ಚೆಲ್ವ್ಯಾ ಧಣಿಯತ್ತ ನೋಡಿದ.
ಲೇ ಚೆಲ್ವ್ಯಾ ಧಿಮಾಕ ಕಿಸಿತಿ, ಅವ್ರು ನೀರ ಕೇಳಿದ್ರಂತ, ಇವ ಕೊಡ್ತಾನಂತ, ಬೇಕೇನ್ಲೆ, ನಿಂಗೂ ಬಾರ್ಕೋಲ್ ಏಟು , ಎಂದು ಧಣಿ ಬಿಟ್ಟ ಕೆಂಗಣ್ಣ ನೋಟಕ್ಕೆ ನಾಗ್ಯಾ ಮತ್ತು ಚೆಲ್ವ್ಯಾ ಅವರಿಬ್ಬರನ್ನು ಕೆಳಗಿಳಿಸಿದರು.
ಧಣಿ ನಿಮ್ಮ ಕಾಲ ಬೀಳ್ತಿನ್ರಿ, ದಂಡ ಹಾಕ್ರಿ ಬೇಕಾದ್ರೆ, ಎಷ್ಟ ಹಾಕಿದ್ರು ಕೊಡ್ತಿವಿ ಎಂದು ಕೆಂಚನ ಅಪ್ಪ ಧಣಿಯ ಕಾಲಿಗೆ ಬೀಳಲು ಮುಂದಾದ.
“ರೊಕ್ಕ ಕೊಡಕ ಆಗಲಿಲ್ಲ ಅಂದ್ರ ನಾವು ಸಾಯೋ ತನಕ ನಿಮ್ಮ ಹೊಲ್ದಾಗ ಜೀತ ಮಾಡ್ತೀವ್ರಿ ಯಪ್ಪ, ಎಂದು ಬಸ್ಯಾನ ಅಪ್ಪನೂ, ಧಣಿಯ ಕಾಲಿಗೆ ಬಿದ್ದ.
ಲೇ ದೇವ್ಯಾ… ಮತ್ತ ಮಲ್ಯಾ… ಸಾಕು ನಿಲ್ಲಸ್ರಲೇ ನಿಮ್ಮ ನಾಟ್ಕನ. ಊರ ಪಂಚಾಯತಿ ಸೇರಿ ಇವರ್ನ ಪೊಲೀಸರ್ಗೆ ಒಪ್ಸೋದು ಅಂತ ತೀರ್ಮಾನ ತೊಗೊಂಡಾರ. ಪಂಚಾಯ್ತಿ ತೀರ್ಮಾನ ರದ್ದು ಮಾಡಾಕ ಅಕ್ಕೈತೇನ, ಹುಚ್ಚ. ಬಿಡ್ರಿ… ಬಿಡ್ರಿ… ದಾರಿ ಬಿಡ್ರಿ. ಲೇಟಾದ್ರ ಸಾಹೆಬ್ರು ಸಿಗಂಗಿಲ್ಲ, ಎಂದು ದೇವ್ಯಾ ಮತ್ತು ಮಲ್ಯಾರನ್ನು ಧಣಿ ಹಿಂದಕ್ಕೆ ತಳ್ಳಿದ.
ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 02
ಧಣಿ, ಬಸ್ಯಾ ಮತ್ತು ಕೆಂಚನ ಹೊಟ್ಟೆಗೆ ಹಗ್ಗ ಬಿಗಿದು, ಕಾಲಿಗೆ, ಕೈಗೆ ಹಗ್ಗ ಕಟ್ಟೀನ್ರಿ, ನೀವು ಹೇಳ್ದಂಗ ಕೈಗೆ ಕಟ್ಟಿದ ಹಗ್ಗ ಒಂಚೂರ ಉದ್ದಕ ಬಿಟ್ಟಿನ್ರಿ ಎಂದ ಬರ್ಮಣ್ಣ.
ನಡ್ರಿ…. ನಡ್ರಿ…. ಹೊಂಡಾನ, ಹುಣ್ವಿ ಬೆಳ್ದಂಗಳ ಐತಿ, ಬ್ಯಾರೆ ಊರಗ ಇವರನ್ನ ನೋಡಕ ಜನ ಕಾಯಕತ್ತಾರ ಎಂದು ಊರು ಹಿರಿಯರು ಮುಂದಾದರು.
ಅಲ್ಲೋ ಬರ್ಮಣ್ಣ!, ಇವರ ಕೈಗೆ ಹಗ್ಗ ಕಟ್ಟು ಅಂತ ಹೇಳಿದ್ದೆ, ಹಂಗೆ ಹಗ್ಗ ಕಟ್ಟಿದ್ದೇನೋ ಖರೇ. ಆದರ… ಇವರನ್ನ ದನ ಹೊಡ್ಕೊಂಡು ಹೋದಂಗ ಹೋದ್ರಾ ಕಿಮ್ಮತ್ತ ಇರಂಗಿಲ್ಲ ಎಂದ ಧಣಿ.
ಮತ್ತ ಹ್ಯಾಂಗ ಮಾಡನ್ರಿ? ನೀವು ಹೆಂಗ ಹೇಳ್ತಿರಿ ಹಂಗ ಮಾಡ್ತಿನ್ರಿ ಧಣಿ ಎಂದ ಬರ್ಮಣ್ಣ.
ನೋಡು, ಬರ್ಮಣ್ಣ, ಕೈಗೆ ಹಗ್ಗ ದೊಡ್ಡದಾಗಿ ಕಟ್ಟೀರಿ, ಆ ಹಗ್ಗದ ತುದಿನ ನನ್ನ ನನ್ನ ಪಟಪಟಿಗೆ ಕಟ್ರಿ, ನಾ ಮುಂದ ಗಾಡಿ ಓಡಸ್ತೀನಿ, ಹಿಂದಿಂದ ಓಡಿ ಬರ್ಲಿ, ಈ ಮಕ್ಳೀಗೆ ಕೊಟ್ಟ ಶಿಕ್ಷೆ ನೋಡಿ ಸುತ್ತಮುತ್ತ ಊರಾಗ ಯಾರು ಹಿಂಗ ಮಾಡಿರ್ಬಾರ್ದು ಎಂದು ಧಣಿ ಎಡಗೈಯಿಂದ ತಲೆ ಕೂದಲನ್ನು ಸರಿಮಾಡಿಕೊಂಡ.
ಅಲ್ರಿ ಧಣಿ, ನೀವು ಗಾಡಿ ಓಡ್ಸೋ ವ್ಯಾಳೆಲಿ ಬ್ರೇಕ್ ಹಾಕಿದ್ರ ಇವರ ಗತಿ ಏನ್ರಿ? ಎಂದೊಬ್ಬ ಹಿರಿಯ ಕೇಳಿದ.
ಏನ್ ಅಕ್ಕೈತಿ ಅಂತ ಕೇಳ್ತಿಯಲ್ಲೊ ಅಣ್ಣ. ಕೆಳಗ ಬಿದ್ದು ಮಣಕಾಲು ಕೆತ್ತಿ ಬಾಯಾಗಿನ ಹಲ್ಲ ಉದ್ರರ್ತವ ಎಂದು ನಾಗ್ಯಾ ಹೇಳಿದಾಗ ಎಲ್ಲರೂ ವಿಕೃತವಾದ ನಗು ಬೀರುತ್ತಾರೆ, ಕೇಕೆ ಹಾಕುತ್ತಾರೆ.
ಊರ ಹಿರಿಯರು ಆಡಿದ ಮಾತುಗಳ ಕೇಳಿಸಿಕೊಂಡ ಜನರ ಎದೆ ಝಲ್ ಎನ್ನುತ್ತದೆ.
“ಶಿಕ್ಷೆ ಕೊಡಬೇಕು ಖರೇ ಆದ್ರ ಇಂತ ಶಿಕ್ಷೆ ಕೊಟ್ರ ಹೆಂಗ,ಇವರ್ಗೆ ಕಾಳಜಿ, ಕನಿಕರ ಅನ್ನೊದು ಇದ್ದಂಗ ಕಾಣ್ತಿಲ್ಲ ಎಂದು ಮನಸೊಳಗೆ ಜನ ಮಾತನಾಡತೊಡಗಿದರು.
ಕೆಂಚ ಮತ್ತು ಬಸ್ಯಾರ ಕುಟುಂಬ ಜೋರಾಗಿ ಅಳುತ್ತಿತ್ತು ಬಿಟ್ಟುಬಿಡಿ ಎಂದು ಅಂಗಲಾಚಿ ಬೇಡಿಕೊಂಡಿತು. ವಿಕೃತವನ್ನೇ ತಲೆಗೇರಿಸಿಕೊಂಡಿದ್ದ ಊರ ಹಿರಿಯರಿಗೆ ಇವರ ಅಳು ತಮಾಷೆಯಾಗಿ ಕಂಡಿತು.
ಧಣ್ಯಾರ ಹೊಂಡನ ನಡ್ರಿ, ತಡ ಆದ್ರ ಪೊಲೀಸ್ ಸಾಹೇಬ್ರು ಸಿಗಲ್ಲ, ಮತ್ತ ನಾವಲ್ಲಿ ಹೋಗಿ ಕಾಯೋ ಸ್ಥಿತಿ ಬರತೈತಿ ಎಂದು ಬರ್ಮಣ್ಣ , ಕೆಂಚ ಮತ್ತು ಬಸ್ಯಾರ ಕೈಗೆ ಕಟ್ಟಲಾಗಿದ್ದ ಹಗ್ಗವನ್ನು ಪಟಪಟಿಗೆ ಕಟ್ಟಿದ.
ಧಣಿ ಪಟಪಟಿಯ ಮೇಲೆ ಕುಳಿತು, ತಲೆ ಕೂದಲನ್ನು ಮತ್ತೊಮ್ಮೆ ಸರಿ ಮಾಡಿಕೊಂಡ, ಪಟಪಟಿ ಸ್ಟಾರ್ಟ್ ಮಾಡಿದ. ಪಟಪಟಿ ಬುಡ್ ಬುಡ್ ಬುಡ್ ಬುಡ್ ಅಂತ ಜೋರಾಗಿ ಶಬ್ದ ಮಾಡಿತು. ಹಿಂದೆ ನಿಂತಿದ್ದ ಕೆಂಚ ಬಸ್ಯಾರ ಮುಖ ಕಾಣದಷ್ಟು ಹೊಗೆ ಆವರಿಸಿತು. ಧಣಿ ಪಟಪಟಿಯ ಎಕ್ಸಸಲೇಟರ್ ಜಾಸ್ತಿ ಮಾಡಿದಷ್ಟು ಊರ ಜನರ ಎದೆ ಡಬ್ ಡಬ್ ಅಂತ ಹೊಡೆದುಕೊಳ್ಳುತ್ತಿತ್ತು.
ಧಣಿ ಬ್ಯಾಡ್ರಿ ಯಪ್ಪಾ, ನಮ್ಮ ಮಕ್ಕಳ್ನ ಬಿಟ್ಟು ಬಿಡ್ರಿ ಎಂದು ಅವರಿಬ್ಬರ ಕುಟುಂಬ ಅಳುತ್ತಲೇ ಇತ್ತು. ಬುಡ್ ಬುಡ್ ಬುಡ್ ಬುಡ್ ಶಬ್ದದ ನಡುವೆ ಆ ಕುಟುಂಬದ ಅಳು ಕೇಳುತ್ತಲೇ ಇರಲಿಲ್ಲ.
ಈ ಎಲ್ಲ ದೃಶ್ಯಗಳನ್ನು ನೋಡುತ್ತ ಗಾಬರಿಯಾಗಿದ್ದ ಶ್ರೀಧರನನ್ನು, ಅವರಪ್ಪ ಹೆಗಲಿಗೆ ಹಾಕಿಕೊಂಡು ಬೆನ್ನು ಸವರುತ್ತಲೇ ಇದ್ದ. ಶ್ರೀಧರ ಕಣ್ಮುಚ್ಚಿ ಆ ಆಕ್ರಂದನವನ್ನು ಕೇಳುತ್ತ ಹಲ್ಲು ಕಚ್ಚುತ್ತಿದ್ದ.
ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 03
ಪಟಪಟಿಯ ಸದ್ದು ಮತ್ತಷ್ಟು ಜೋರಾಯಿತು. ಜನ ಅಯ್ಯೋ… ಪಾಪ… ಎಂದು ಮರುಗುತ್ತಿದ್ದರು. ನಾಗ್ಯಾ ಜೋರಾಗಿ ಡಂಗೂರ ಬಡಿಯುತ್ತಿದ್ದ, ಕೆಂಚ, ಬಸ್ಯಾ ಊರ ಜನರಿಗೆ ಕೈ ಮುಗಿದು, ಕಣ್ಣು ಮುಚ್ಚಿ ಅಳತೊಡಗಿದರು.
ಧಣಿ ಗಾಡಿಯನ್ನು ಮುಂದೆ ಚಲಿಸಿದ, ಕೆಂಚ, ಬಸ್ಯಾ ಓಡೋಡಿ ಹೊರಟರು,
ಧಣಿ ಒಂದ್ಸಾರಿ ಬ್ರೇಕ್ ಹಾಕ್ರಿ, ಇವರಿಬ್ರು ಹೆಂಗ ಬೀಳ್ತಾರ ಅಂತ ಊರ ಮಂದಿಗೂ ಗೊತ್ತಾಗ್ಲಿ ಎಂದು ಬರ್ಮಣ್ಣ ಧಣಿಗೆ ಜೋರಾಗಿ ಹೇಳಿದ.
ಬರ್ಮಣ್ಣನ ಈ ಮಾತು ಕಿವಿಗೆ ಬೀಳುತ್ತಿದ್ದಂತೆ, ಧಣಿ ಬ್ರೇಕ್ ಹಾಕಿದ, ದೊಪ್ಪನೇ ಬಿದ್ದೇ ಬಿಟ್ಟರು. ಊರ ಜನ ತಿರುಗಿ ನೋಡುವಷ್ಟರಲ್ಲಿ ಪಟಪಟಿಯ ವೇಗ ಜೋರಾಯಿತು. ಮತ್ತಷ್ಟು ಜೋರಾಯಿತು. ಒಂದು ಕೈಯಲ್ಲಿ ತಲೆ ಕೂದಲು ಸರಿ ಮಾಡಿಕೊಳ್ಳುತ್ತ, ವಿಕೃತವಾಗಿ ಧಣಿ ನಗುತ್ತ ಜೋರಾಗಿ ಓಡಿಸ ತೊಡಗಿದ. ಪಟಪಟಿ ಇವರಿಬ್ಬರನ್ನು ಧರ ಧರನೆ ಎಳೆದುಕೊಂಡು ಹೋಯಿತು.
ಪಟಪಟಿ ಕಣ್ಮರೆಯಾಗುವವರೆಗೂ ಊರ ಜನ ನೋಡುತ್ತಾ ನಿಂತರು. ಮಹಿಳೆಯರು ಲಟಿಕೆ ಮುರಿದು ಈ ಧಣಿಗೂ ಸಾವು ಹಿಂಗಾ ಬರಬೇಕು ನೋಡು ಅಂತೆಲ್ಲ ಅನ್ನ ತೊಡಗಿದರು.
ಶ್ರೀಧರ ನಿದ್ರಗೆ ಜಾರಿದ್ದ, ಈ ಕೆಟ್ಟ ದೃಶ್ಯ ಇವನು ನೋಡಲಿಲ್ಲ ಎಂದು ಅವರಪ್ಪ ಸಮಾಧಾನಗೊಂಡ. ಊರ ಜನರೆಲ್ಲ ಮನೆಯತ್ತ ಹೆಜ್ಜೆ ಹಾಕಿದರು. ಪಟಪಟಿಯ ಸದ್ದು ಕೇಳದಾಯ್ತು. ಊರಲ್ಲಿ ಸಂಪೂರ್ಣ ಮೌನ ಆವರಿಸಿತು. ನಿಧಾನಕ್ಕೆ ಮೋಡದೊಳಗೆ ಸೇರಿಕೊಂಡ ಬೆಳದಿಂಗಳ ಚಂದ್ರ, ಈ ಭಯಾನಕ ದೃಶ್ಯಕ್ಕೆ ಕಣ್ಣು ಮುಚ್ಚಿದ್ದ. ಗಾಯ
(ಮುಂದುವರೆಯುವುದು……)
ಈ ವಿಡಿಯೋ ನೋಡಿ : “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು? ಮಂಜುನಾಥ್, ಗುರುರಾಜ ಮಾತುಕತೆ