ಗುರುರಾಜ ದೇಸಾಯಿ
“ಗಾಯ” ಕಥಾ ಸರಣಿಯು ಈ ವಾರದಿಂದ ಆರಂಭವಾಗುತ್ತಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ ನೈಜ ಘಟನೆಯನ್ನು ಅಕ್ಷರರೂಪಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದು. ಸಲಹೆ ಸೂಚನೆಗಳಿಗೂ ಸ್ವಾಗತ.
ಅಲರಾಂ ಗಂಟೆ 12 ಬಾರಿ ಬಾರಿಸಿಕೊಂಡಿತು, ಅಪ್ಪಾ ಅದ್ಯಾರೋ, ಅತ್ತ ಹಾಗೇ ಆಗ್ತಿದೆ ಎಂದು ಶ್ರೀಧರ್ ತನ್ನಪ್ಪನನ್ನು ಎಬ್ಬಿಸಿದ.
ಸುಮ್ನೆ ಮಲ್ಕೊ ಮಗನೇ ಯಾರು ಇಲ್ಲ, ರಾತ್ರಿ 12 ಆಗ್ಯದ. ಇಷ್ಟೊತ್ತಲ್ಲಿ ಯಾರು ಅಳ್ತಾರ? ಎಂದು ಶ್ರೀಧರನನ್ನು ಅವರಪ್ಪ ಗದರಿದ.
ಯಾರಿಗೋ ಏನೋ ತೊಂದ್ರಿ ಆಗ್ಯದ ಅನ್ಸುತ್ತ, ಇಲ್ಲಾ ಯಾರೋ ಸತ್ತಿರಬೇಕು, ಬಾಗಿಲ ಅಗಳಿ ತೆಗೆದು ಹೊರಗೆ ಹೋಗಿ ನೋಡ್ಲಾ ಅಪ್ಪ ಎಂದ ಶ್ರೀಧರ
ಯೇ ಶ್ರೀಧರ, ನಿಂದು ಜಾಸ್ತಿ ಆಯ್ತು, 6 ವರ್ಷದ ಮಕ್ಕಳು ಇಷ್ಟೊತ್ತಲ್ಲಿ ಹೊರಗೆ ಹೋಗಬಾರದು, ಸುಮ್ನೆ ಬಿದ್ಕೊತೀಯಾ ಇಲ್ಲ ನಾಲ್ಕು ಬಾರಸ್ಲಾ… ಎಂದು ಅವರಮ್ಮ ಬೈದಾದ ಮೇಲೆ ಶ್ರೀಧರ ಸಪ್ಪೆ ಮೋರೆ ಹಾಕಿ ಸರಿ ಅಮ್ಮ, ನೀರಾದ್ರು ಕುಡಿತೀನಿ ಎಂದು ಅಡುಗೆ ಮನೆ ಬಾಗಿಲು ತೆರೆದ.
ನೀರು ಕುಡಿದು ಬಂದ ಹಾಸಿಗೆಯ ಮೇಲೆ ಶ್ರೀಧರ ಮಲಗಿದ. ಆ ಕಡೆಗೊಮ್ಮೆ, ಈ ಕಡೆಗೊಮ್ಮೆ, ಅಂಗಾತ, ನೇರವಾಗಿ ಒದ್ದಾಡುತ್ತಲೇ ಕಣ್ಣುಬಿಟ್ಟುಕೊಂಡು ಏನದು?, ಯಾರದು? ಹಾಗೇ ಚೀರುತ್ತಿರುವುದು ಎಂದು ಯೋಚಿಸತೊಡಗಿದ.
ಅಯ್ಯೋ… ಯವ್ವಾ… ಅಯ್ಯೋ… ಯಪ್ಪಾ… ಯಾರಾದ್ರು ಕುಡಿಯಾಕ ನೀರ್ ಕೊಟ್ಟು ಪುಣ್ಯ ಕಟ್ಕೋರಿ…. ಎಂಬ ಅಳು ಮಾತ್ರ ನಿಲ್ಲಲೇ ಇಲ್ಲ.
ಯಾವಾಗ ಬೆಳಗಾಗುತ್ತೆ, ಆ ಅಳು ಯಾರದ್ದು?, ಯಾಕೆ ಹೀಗೆ ಅಳ್ತಾ ಇದ್ದಾರೆ ಎಂಬ ಪ್ರಶ್ನೆಗಳು ಶ್ರೀಧರನನ್ನು ಕಾಡತೊಡಗಿದವು. ಆ ಅಳು ಅವನ ಮನವನ್ನು ಕಲಕಿಬಿಟ್ಟಿತ್ತು. ಕಂಬಕ್ಕೆ ತೂಗು ಹಾಕಿದ್ದ ಗಡಿಯಾರ ನೋಡುತ್ತಲೆ ಇದ್ದ. ಬಹಳ ಹೊತ್ತಿನ ನಂತರ ಒದ್ದಾಡುತ್ತಲೆ ನಿದ್ರೆಗೆ ಜಾರಿದ.
ಕರ್ರ್ ಎಂದು ಬಾಗಿಲು ತೆಗೆದು ಶಬ್ದ ಕೇಳುತ್ತಲೆ ಶ್ರೀಧರ್ ದಿಢೀರನೆ ಎದ್ದು ಹೊರ ಬಂದ. ಆ ಅಳುವಿನ ಧ್ವನಿ ಮಾತ್ರ ಜೋರಾಗಿಯೇ ಇತ್ತು. ಇಬ್ಬರು ಅಳುತ್ತಿದ್ದ ಧ್ವನಿ ಅವನನ್ನು ಮತ್ತಷ್ಟು ಹಿಂಸಿಸತೊಡಗಿತು. ಆ ಕಡೆ ಈ ಕಡೆ ನೋಡಿದ ಅಮ್ಮ ಹಿತ್ತಲ ಮನಿಕಡಿ ಇರುವುದನ್ನು ಖಚಿತ ಪಡಿಸಿಕೊಂಡು ಹೊಸ್ತಿಲು ದಾಟಲು ಮುಂದಾದ.
ಇದನ್ನೂ ಓದಿ : ಅರ್ಜಿ ಬರೆಯುವವರ ಬದುಕಿನ ನೋವಿನ ಕಥೆ…!
ಏಯ್… ಶ್ರೀಯಾ ಎಲ್ಲಿಗೆ ಹೊಂಟಿ?, ನಿಮ್ಮಮ್ಮ ಈಗ ಕಸಗುಡ್ಸಿ ರಂಗೋಲಿ ಹಾಕ್ಯಾಳ, ಹಲ್ಗಿಲ್ಲ ತಿಕ್ಕದ ಬಿಟ್ಟು ಎಲ್ಲಿ ಹೊಂಟಿ?, ನಡೀ ಬಚ್ಚಲಮನಿ ಕಡೆ, ಅಂಗಳದಲ್ಲಿ ನಿಂತಿದ್ದ ಶ್ರೀಧರನನ್ನು ಅವರಜ್ಜಿ ಕೂಗಿದಳು.
ಅಜ್ಜಿಗಾದ್ರು ಗೊತ್ತಿರುತ್ತೇನೋ ಎಂದುಕೊಂಡು ಭಯದಿಂದಲೇ ಶ್ರೀಧರ ಅಜ್ಜಿಯನ್ನು ಕೇಳಿದ “ ಅಜ್ಜೀ ರಾತ್ರಿಯೆಲ್ಲ ಯಾರೋ ಅಳ್ತಾ ಇದ್ರು, ಕೇಳಸ್ತಾ ನಿಂಗೆ? ಇಲ್ಲ… ಎಂದು ಅಜ್ಜಿ ತಲೆ ಆಡಿಸಿದಳು.
ಹಲ್ಲು ತಿಕ್ಕಿ, ನೀರೋಲಿ ಹಚ್ಚುತ್ತಿದ್ದ ಅಜ್ಜಿಯ ಪಕ್ಕ ಕುಳಿತ, ಬೆಳಕು ಹೆಚ್ಚಾಯಿತು, ಜನರ ಓಡಾಟದ ಸದ್ದು ಹೆಚ್ಚಾಗತೊಡಗಿತು, ಕ್ರಮೇಣ ಆ ಅಳುವಿನ ಧ್ವನಿ ಕೇಳಿಸದಂತಾಯ್ತು.
ಅಪ್ಪ, ಅಮ್ಮ, ಅಜ್ಜಿ, ಅಣ್ಣ, ಅಕ್ಕನೊಂದಿಗೆ ಚಹ ಕುಡಿಯುತ್ತ ಕುಳಿತಿದ್ದ ಶ್ರೀಧರನಿಗೆ ಆ ಅಳುವಿನದ್ದೆ ಚಿಂತೆಯಾಗಿತ್ತು. ಅಪ್ಪ ಕೊಟ್ಟಿದ್ದ ಬಿಸ್ಕತ್ ತಿನ್ನದೆ ಚಹ ಕುಡಿದು ಬಿಟ್ಟಿದ್ದ, “ಲೇ ಬಿಸ್ಕೀಟ್ ತಿಂದೆ ಇಲ್ಲಲ್ಲೆ, ಪಾಕೇಟ್ ಪುಡಕ ಬೇಕು ಅಂತ ಗಲಾಟೆ ಮಾಡ್ತಿದ್ದವ ಇವತ್ತು ಒಂದ್ ಬಿಸ್ಕೀಟ್ನು ತಿಂದಿಲ್ಲ”. ಎಂದು ಶ್ರೀಧರನ ಅಣ್ಣ, ಅಕ್ಕ ಅವನನ್ನು ಚೇಡಿಸತೊಡಗಿದರು.
ಅವನಿಗೆ ರಾತ್ರಿಯಿಂದ ಹುಚ್ಚು ಹಿಡದದ ಅಂತ ಅನ್ಸುತ್ತ, ಅದ್ಯಾರೊ ಅಳ್ತಿದ್ರು ಅಂತೆಲ್ಲ ನನ್ನ, ನಿಮ್ಮ ಅಪ್ಪನ ಪ್ರಾಣ ತಿಂದಾನ, ಹೌದು! ನಂಗೂ ಆ ಅಳು ಕೇಳಿಸ್ತು!!, ನಿಮ್ಮಪ್ಪ ಬೈತಾರ ಅಂತ ಸುಮ್ನಿದ್ದೆ ಎಂದು ಅಮ್ಮ ಶ್ರೀಧರನ ತಲೆ ಸವರಿದಾಗ ಅವನಿಗೊಂದಿಷ್ಟು ಸಮಧಾನ ಆಯ್ತು,
ಹೌದು, ಯಾರೋ ಅಳ್ತಾ ಇರೋದ್ನ ನಾನು ಕೇಳಿಸಿಕೊಂಡೆ, ಏನು ಅಂತ ಗೊತ್ತಾಗಿಲ್ಲ, ಯಾರಾದ್ರು ಸತ್ತಿದ್ರ ಇಷ್ಟೊತ್ತಿಗೆ ಸುದ್ದಿ ಗೊತ್ತಾಕ್ಕಿತ್ತು, ಏನು ಅಂತ ನನಗ ಇನ್ನೂ ಗೊತ್ತಾಗವಲ್ದು ಎಂದ ಶ್ರೀಧರನ ಅಪ್ಪ!
ಇಷ್ಟು ಮಾತುಗಳು ಮುಗಿಯುವುದರಲ್ಲಿ ಜನ ಮನೆಗಳಿಂದ ಬರತೊಡಗಿದರು, ಓಣ್ಯಾಗಿನ ಮಂದಿಯೆಲ್ಲ ಓಡ ತೊಡಗಿದರು.
ಯೇ ಬರ್ಮ್ಯಾ, ಯಾಕ ಓಡಿ ಹೊಂಟಿರ್ಲೇ, ಏನಾಗೈತಿ ಅಂತದ್ದು, ಎಂದು ಶ್ರೀಧರನ ಅಪ್ಪ ಕುಂಟುತ್ತ ಓಡುತ್ತಿದ್ದ ಬರ್ಮ್ಯಾನನ್ನು ಕೇಳಿದ.
ಧಣ್ಯಾರ ಅದು, ಮಾದರ ಕೆಂಚ ಮತ್ತು ಕುರಬರ ಬಸ್ಯಾನ ಊರಮಂದಿ ಸೇರಿ ಹೊಡ್ದಾರಂತ್ರಿ, ಮೈತುಂಬ ರಕ್ತ ಇಳ್ಯಕತ್ತತಂತ್ರಿ, ಬಾರ್ಕೋಲು, ಬರ್ಲು ತೊಗೊಂಡು ಹೊಡ್ದಾರಂತ್ರಿ ಬಾರೆಲ್ಲ ಮೂಡ್ಯಾವಂತ್ರಿ, ಅವರನ್ನ ಕಂಬಕ್ಕ ಕಟ್ಟಿ ಹಾಕ್ಯಾರಂತ್ರಿ, ಪೊಲೀಸರಿಗೆ ಹಿಡಿದುಕೊಡ್ತಾರಂತ್ರಿ ಎಂದು ಬರ್ಮ್ಯಾ ಓಡತೊಡಗಿದ.
ಶ್ರೀಧರನನ್ನು ಹೆಗಲಮೇಲೆ ಕೂಡಿಸಿಕೊಂಡು ಅವರಪ್ಪ ಬಿರಬಿರನೆ ಅಗಸಿಕಟ್ಟಿ ಹತ್ತಿರ ಹೊರಟ, ಶ್ರೀಧರನ ಅಣ್ಣಂದಿರು ಇವರ ಹಿಂದೆ ಹೆಜ್ಜೆ ಹಾಕಿದರು.
(ಮುಂದುವರಿಯುವುದು………)
ಈ ವಿಡಿಯೋ ನೋಡಿ : ಧರಣಿ ಮಂಡಲ ಮಧ್ಯದೊಳಗೆ ಸುರತ್ಕಲ್ ಟೋಲ್‌ನ ಕತೆಯ ಕೇಳಿ