ಗುರುರಾಜ ದೇಸಾಯಿ
“ಗಾಯ” ಕಥಾ ಸರಣಿಯು ಎರಡು ವಾರಗಳಿಂದ ಆರಂಭಗೊಂಡಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ ನೈಜ ಘಟನೆಯನ್ನು ಅಕ್ಷರರೂಪಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದು. ಸಲಹೆ ಸೂಚನೆಗಳಿಗೂ ಸ್ವಾಗತ.
(ಇಲ್ಲಿಯವರೆಗೆ … ಶ್ರೀಧರನಿಗೆ ಆ ಅಳು ಯಾರದ್ದು? ಅದಕ್ಕೇನು ಕಾರಣ ಎಂಬುತು ಗೊತ್ತಾಯಿತು, ಅವನಿಗೆ ನಿತ್ಯ ಪೇಪರ್‌ಮೆಂಟು ಕೊಡುತ್ತಿದ್ದ ಕೆಂಚ, ಬಸ್ಯಾರನ್ನು ಊರ ಹಿರಿಯರು ಕಟ್ಟಿ ಹಾಕಿ, ಬಾರ್ಕೊಲು, ಬರ್ಲಿನಿಂದ ಹೊಡೆದಿದ್ದರು, ಹೊಲದಲ್ಲಿನ ಸಾಮಾನು ಕದ್ದಿದ್ದಾರೆ ಎಂದು ಅವರಿಬ್ಬರಿಗೆ ಈ ಶಿಕ್ಷೆಯನ್ನು ನೀಡಿ, ಮೈತುಂಬ ಖಾರದಪುಡಿ ನೀರು ಸುರಿವಿದ್ದರು. ಇವರಿಗೆ ಮುಂದೆ ಏನು ಮಾಡಬೇಕು ಎಂದು ತಿಳಿಸುತ್ತೇವೆ ಎಂದು ನೆರೆದಿದ್ದ ಜನರನ್ನು ವಾಪಸ್ಸ ಮನೆಗ ಕಳುಹಿಸಿದ್ದರು. ಮುಂದೆ ಓದಿ……)
ಕೆಂಚ ಮತ್ತು ಬಸ್ಯಾರಿಗೆ ಊರ ಪ್ರಮುಖರು ನೀಡಿದ ಶಿಕ್ಷೆ, ಕೊಟ್ಟ ಹಿಂಸೆ, ಶ್ರೀಧರನ ಸಂಕಟವನ್ನು ಮತ್ತಷ್ಟು ಹೆಚ್ಚಿಸಿತು. ಅವನ ಮನಸ್ಸು ಸಂಪೂರ್ಣವಾಗಿ ಮಂಕಾಗಿತ್ತು, ಸಪ್ಪೆ ಮೋರೆ ಹಾಕಿ ಮನೆಯ ಒಳಗೆ ನಡೆದ.
“ ಎಲ್ರೂ ಲಗೂ ಸ್ನಾನ ಮಾಡಿ ಬರ್ರಿ, ನಾಷ್ಟ ರಡಿ ಮಾಡೀನಿ “ ಎಂದು ಶ್ರೀಧರನ ಅಮ್ಮ ಕೂಗಿದಳು,
ಸ್ನಾನ ಮಾಡಿ, ಬಟ್ಟೆ ಹಾಕಿಕೊಂಡು ಶ್ರೀಧರ ಮೂಲಿಯಲ್ಲಿ ಯೋಚಿಸುತ್ತಾ ಕುಳಿತ! “ಹೊಲ್ದಾಗಿನ ಸಾಮಾನು ಕದ್ರ ಹಿಂಗೆಲ್ಲ ಹೊಡೀತಾರಾ? ಅವರ ಮೈಯಾಗಿಂದ ಎಷ್ಟು ರಕ್ತ ಬರ್ತಿತ್ತು. ಮತ್ತ, ಮ್ಯಾಲೆ ಖಾರದ ಪುಡಿ ನೀರು ಸುರೀತಿದ್ದರು. ಊರಿಗೆ ದೊಡ್ಡವರಂತ ಇವ್ರು! ಇನ್ನೂ ಏನ್ ಶಿಕ್ಷೆ ಕೊಡ್ತಾರೋ ಏನೊ? ಊರು ಬಿಟ್ಟು ಆಚೆ ಕಡೆ ಕಳ್ಸಿದ್ರ… ಕೆಂಚಪ್ಪಣ್ಣ ಮತ್ತು ಬಸ್ಸಣ್ಣಗೆ ಊಟ ಕೊಡೊರು ಯಾರು? ಪಾಪ ಊಟ ಇಲ್ದೆ ಸತ್ತ ಹೋಗ್ತಾರ ಅನ್ಸುತ್ತೆ”. ಎಂದೆಲ್ಲ ಅವನು ಮನಸ್ಸು ಒದ್ದಾಡತೊಡಗಿತು. ಎದುರಿಗಿದ್ದ ಗಡಿಯಾರವನ್ನು ದಿಟ್ಟಿಸುತ್ತಲೇ ಇದ್ದ.
ಬಚ್ಚಲು ಮನೆಯಿಂದ ಸ್ನಾನ ಮಾಡಿ ತಲೆ ಒರಿಸಿಕೊಳ್ಳುತ್ತ ಶ್ರೀಧರನ ಅಪ್ಪ ನಡುಮನಿಗೆ ಬಂದು ಶ್ರೀಧರನನ್ನು ಕೂಗಿದರು.
ಯೇ ಅಪ್ಪಿ, ಶ್ರೀಧರ ಎದ್ದೇಳು, ಹಂಗ್ಯಾಕ ಕೂತಿ, ನಿಮ್ಮಮ್ಮ ನಾಷ್ಟಾ ಮಾಡ್ಯಾಳ ಎದ್ದೇಳು ತಿಂದು ಸಾಲಿಗೆ ಹೋಗು.
ಯೇ ಶ್ರೀಧರ ! ಶ್ರೀಧರ , ನಿನ್ನ ಕರಿಲಿಕತ್ತೀನಿ ನಾನು, ಹೀಗೆ ನಾಲ್ಕಾರು ಬಾರಿ ಅವರಪ್ಪ ಕೂಗಿದ.
ಶ್ರೀಧರ ಗಡಿಯಾರ ನೋಡುತ್ತಲೇ ಇದ್ದ. ಅರೇ!!! ಏನಾತು ಇವಂಗ, “ಯೇ…… ಹಿಂಗ್ಯಾಕ ಕೂತಿಯೋ, ಗರ ಬಡ್ದರಗತಿ!, ಎದ್ದೇಳು” ಎಂದು ಅವರಪ್ಪ ಅವನ ಭುಜವನ್ನು ತಟ್ಟಿದ.
ಕೆಂಚಪ್ಪಣ್ಣನ, ಬಸ್ಸಪ್ಪಣ್ಣನ ಕೊಲ್ಲಬ್ಯಾಡ್ರಿ, ಕೊಲ್ಲಬ್ಯಾಡ್ರಿ ಎಂದು ಶ್ರೀಧರ ಬಡಬಡಿಸಿದ, ಜೋರಾಗಿ ಅಳತೊಡಗಿದ.
ಶ್ರೀಧರನನ್ನು ಅವರಪ್ಪ ಎದೆಗೆ ಬಿಗಿದಪ್ಪಿಕೊಂಡು ತಲೆ ಸವರಿದ. ಹಂಗೇನು ಆಗಲ್ಲ ಮಗನೇ.. ಅವರನ್ನ ವಾಪಸ್ಸ ಮನೆಗೆ ಕಳಸ್ತಾರ. ನೀನು ನಾಷ್ಟ ತಿನ್ನು. ಇದನ್ನ ಮನಸಿಗೆ ಹಚ್ಕೋತ ಕೂಡಬೇಡ. ಆತೂ…… ಎದ್ದೇಳು ಎಂದು ಕೈ ಹಿಡಿದು ಮೇಲೆತ್ತಿದ. ಒಲ್ಲದ ಮನಸ್ಸಿನಿಂದಲೆ “ಆಯ್ತು”, ಆದ್ರೆ ನಾನು ಸಾಲಿಗೆ ಹೋಗಲ್ಲ ನೋಡು ಎಂದ, ಅವರಪ್ಪ ತಲೆ ಅಲ್ಲಾಡಿಸಿದ.
ನಾಲ್ಕು ಗಂಟೆ ಯಾವಾಗ ಆಗುತ್ತೆ? ಕೆಂಚಪ್ಪಣ್ಣ, ಬಸ್ಸಪ್ಪಣ್ಣನ ಯಾವಾಗ ಮನೀಗೆ ಕಳಸ್ತಾರೆ ಎಂದು ಮನಸ್ಸಿನಲ್ಲಿಯೇ ಶ್ರೀಧರ ಯೋಚಿಸತೊಡಗಿದೆ. ಮನೆಯಲ್ಲಿ ಮತ್ತೆ ಬೈದಾರು ಎಂದು ಹೆದರಿ, ಹಿತ್ತಲಮನಿ ಕಡೆ ಆಟ ಆಡಲು ಹೊರಟ.
ಇದನ್ನೂ ಓದಿ : ಗಾಯ |ಕಥಾ ಸರಣಿ – ಸಂಚಿಕೆ 01
ಕೇಳ್ರೋಪ್ಪೋ……… ಕೇಳಿ……, ಕೇಳ್ರಪ್ಪೋ……… ಕೇಳಿ…… ತಪಗಲೂರು ಮಂದಿಯೆಲ್ಲ ಕೇಳಿ ತಳವಾರ ನಾಗ್ಯಾ ಡಂಗೂರ ಸಾರಕತ್ತನ ಕೇಳ್ರೊಪ್ಪೋ……… ಕೇಳಿ……
ಡಂಗೂರ ಸಾರುವುದು ಕೇಳಿ… ಓಣಿಯ ಜನರೆಲ್ಲ ಮನೆಗಳ ಮುಂದೆ ಬಂದು ನಿಂತರು. ತಳವಾರ ನಾಗ್ಯಾ ಎಲ್ಲರಿಗೂ ಕೇಳುವಂತೆ, ಕಾಣುವಂತ ದೊಡ್ಡ ಕಟ್ಟೆಯ ಮೇಲೆ ನಿಂತು ಜೋರಾಗಿ ಡಂಗೂರ ಬಾರಿಸುತ್ತಾ… ಕೇಳ್ರಪ್ಪೋ……… ಕೇಳಿ…… ಓಣ್ಯಾಗಿನ ಮಂದಿಯೆಲ್ಲ ಬಂದಿರೆನ್ರಪ್ಪ. ಯಾಕ ಡಂಗೂರ ಹೊಡ್ಯಾಕತ್ತೀನಿ ಅಂತ ಹೇಳ್ತಿನಿ ಕೇಳ್ರಪ್ಪೋ…… ಕೇಳಿ ………
“ಇವನ್ನ ಮತ್ತ ಹೊರಗ ಕರ್ಕೊಂಡು ಹೋಗಬ್ಯಾಡ್ರಿ, ಅನಾಹುತ ಸುದ್ದಿ ಕೇಳಿ ಎದಿ ಒಡ್ಕೊಂಡಾನು ಎಂದು ಶ್ರೀಧರನ ಅಮ್ಮ ಅವರಪ್ಪನಿಗೆ ಕಣ್ಸನ್ನೆಯಲ್ಲಿ ಹೇಳಿದಳು.
ಶ್ರೀಧರನನ್ನು ಒಳಗಡೆ ಕೂಡಿಹಾಕಿ, ಅವನ ಮನೆಯವರೆಲ್ಲ ಹೊರ ಬಂದು, ಏನು ಡಂಗೂರ ಸುದ್ದಿ ಎಂದು ಕೇಳುತ್ತಾ ನಿಂತರು.
ನಾಗ್ಯಾ ಜೋರಾಗಿ ಡಂಗೂರ ಬಡಿಯುತ್ತಲೇ ಇದ್ದ. ಒಂದೆರಡು ನಿಮಿಷದ ನಂತರ ಸದ್ದು… ಸದ್ದು… ಎಂದು ಕೂಗಿದ.
ಸೂಜಿ ಬಿದ್ದರು ಅದರ ಸಪ್ಪಳ ಕೇಳುವಂತ ಮೌನ ಆವರಿಸಿತು. ನಾಗ್ಯಾ ಏನು ಹೇಳುತ್ತಾನೆ ಎಂದು ಜನ ಅವನನ್ನೆ ದಿಟ್ಟಿಸಿ ನೋಡುತ್ತಾ ನಿಂತರು.
ಕೆಂಚ ಮತ್ತು ಬಸ್ಯಾನ “ಪೊಲೀಸರಿಗೆ ಒಪ್ಪಿಸಬೇಕು” ಎಂದು ಊರ ಹಿರೇರು ತೀರ್ಮಾನ ಮಾಡ್ಯಾರ. ಪೊಲೀಸ್ ಸಾಹೆಬ್ರ ಕೂಡ ಆಗ್ಲೆ ಮಾತಾಡ್ಯಾರ, “ಸ್ಟೇಷನ್ಗೆ ಕರ್ಕಂಡು ಬರ್ರಿ ಆ ಮಕ್ಕಳನ್ನ ಒದ್ದ ಒಳಗ ಹಾಕ್ತೀವಿ” ಅಂತ ಹೇಳ್ಯಾರ ಎಂದು ಹೇಳುತ್ತಿದ್ದಾಗ ನೆರದಿದ್ದ ಜನ ಕಣ್ಣೀರು ಹಾಕತೊಡಗಿದರು.
ನಾಗ್ಯಾ ಸಾರಿದ ಡಂಗೂರದ ಮಾತುಗಳನ್ನು ಶ್ರೀಧರ್ ಕಿಟಕಿಯಲ್ಲಿ ನಿಂತು ಕೇಳಿಸಿಕೊಂಡ!
ಕೇಳ್ರಪ್ಪೊ…… ಕೇಳ್ರಿ…… ಕೆಂಚ ಮತ್ತು ಬಸ್ಯಾನ ಪೊಲೀಸರಿಗೆ ಒಪ್ಪಸ್ತಾರಪ್ಪೋ……… ಕೇಳ್ರಪ್ಪೊ…… ಕೇಳಿ…… ಎಂದು ಡಂಗೂರ ಸಾರುತ್ತಾ ನಾಗ್ಯಾ ಮತ್ತೊಂದು ಓಣಿಯ ಕಡೆ ಸಾಗಿದ.
ಶ್ರೀಧರನ ಅಪ್ಪ ಬಾಗೀಲು ತೆಗೆಯುತ್ತಿದ್ದಂತೆ ಶ್ರೀಧರ ಅಳುತ್ತ ಬಂದು ಅವರಪ್ಪನನ್ನು ತಬ್ಬಿಕೊಂಡ. ಏ! ಮಗನ, ಹಿಂಗೆಲ್ಲ ಅಳಬಾರ್ದು, ನಾನು… ನೀನು… ಏನ್ ಮಾಡ್ಲಿಕ್ಕೆ ಆಗ್ತದ ಹೇಳು? ಊರಿನ ಹಿರಿಯರ ಅವರಿಗೆ ಶಿಕ್ಷೆ ಕೊಟ್ಟಾರ, ಅದನ್ನ ತಡಿಯೋ ಶಕ್ತಿ ಈ ಊರಾಗ ಯಾರ್ಗೂ ಇಲ್ಲಪ್ಪ ನಡೀ… ನಡೀ…
ಸ್ವಲ್ಪ ಹೊತ್ತಿನ ನಂತರ ಓಣಿಯ ಮಂದಿಯೆಲ್ಲ ಅಗಸಿಕಟ್ಟಿ ಕಡೆ ಓಡಿ ಹೊರಟ್ರು, ಕೆಂಚನ್ನ, ಬಸ್ಯಾನ ಪ್ಯಾಟಿ ಪೊಲೀಸರ ಹತ್ರ ಕರ್ಕೊಂಡು ಹೊಂಟಾರಂತ, ಅಂತ ಗುಸು ಗುಸು ಮಾತನಾಡುತ್ತ ಓಡೋಡಿ ಸಾಗುತ್ತಿದ್ದರು.
“ಏ! ಶ್ರೀಧರ ನಾವು ಅಲ್ಗೆ ಹೋಗಿ ಬರ್ತಿವಿ, ಏನ್ ಆಗ್ತದ ಅಂತ ನಿಂಗ ಆಮೇಲೆ ಬಂದು ಹೇಳ್ತಿವಿ. ಮತ್ತ ನೀ ಅಲ್ಲಿ ಬಂದ್ರ ಅಳದು, ಒದ್ದ್ಯಾಡೋದು ಮಾಡ್ತಿ, ಅದ್ಕ ನೀ ಇಲ್ಲೆ ಅಜ್ಜಿ ಜೊತೆ ಇರು”, ಆಯ್ತ… ಎಂದು ಅವರಪ್ಪ ಶ್ರೀಧರನಿಗೆ ಹೇಳಿದ.
ಇಲ್ಲಾ..! ನಾ ಬರಾವ… ಅವರನ್ನ ಹೆಂಗ ಕರ್ಕೊಂಡು ಹೋಗ್ತಾರ? ನೋಡ್ತಿನಿ. ಸಾಧ್ಯ ಆದ್ರ ಊರ ಹಿರೇರ ಹತ್ರ ನಾನ ಕೇಳ್ತಿನಿ. ಸಣ್ಣ ಹುಡುಗ್ರು ಮಾತ್ನ ಎಲ್ಲರೂ ಕೇಳ್ತಾರ ಅಂತ ನೀನ ಹೇಳಿದೆ. ಹೌದಿಲ್ಲೋ? ಅದಕ್ಕ ನಾನ ಮಾತಾಡಿ, ಅವರಿಬ್ಬರನ್ನ ಪೊಲೀಸರ್ಗೆ ಕೊಡಬ್ಯಾಡ್ರಿ ಅಂತ ಕೇಳ್ತಿನಿ… ಎಂದು ಶ್ರೀಧರ ಅವರಪ್ಪನಿಗೆ ಮಾರುತ್ತರ ಕೊಟ್ಟ.
ಆಯ್ತು, ನೀ ಬರುವಂತಿ, ಆದ್ರೆ ಅಲ್ಲಿ ಏನೂ ಮಾತಾಡಬಾರ್ದು ಹಂಗಿದ್ರೆ ಕರ್ಕೊಂಡು ಹೋಗ್ತಿವಿ. ದೊಡ್ಡವರ ಅಂತ ಅನ್ಸಕೊಂಡಾರಲ ಅವರಿಗೆ ಸಣ್ಣವರ ಮಾತಾಡಿದ್ದು ಕೇಳಲ್ಲ, ಅದಕ್ಕ ನೀ ಏನು ಮಾತಾಡಬಾರ್ದು ತಿಳಿತಾ. ಹುಂ… ಎಂದು ತಲೆ ಅಲ್ಲಾಡಿಸಿದ. ಎಲ್ಲರೂ ಅಗಸಿಕಟ್ಟಿಕಡೆ ಸಾಗಿದರು.
ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 02
ಬೆಳಗ್ಗೆ ಸೇರಿದ್ದ ಜನಕ್ಕಿಂತ ಸಂಜೆ ಹೊತ್ತು ಅಗಸಿಕಟ್ಟಿ ಹತ್ರ ಬಾಳ ಮಂದಿ ಸೇರಿದ್ರು.
ಕಟ್ಟೆಯ ಮೇಲೆ ಊರ ಹಿರಿಯರು ಖುರ್ಚಿಯ ಮೇಲೆ ಕುಳಿತು, ಕಾಲಮೇಲೆ ಕಾಲು ಹಾಕಿ, ಮೀಸಿಹುರಿ ತೀರುವುತ್ತಾ ಇದ್ದರು. ಬಾರ್ಕೋಲು, ಬರಲಿನ ಏಟು ತಿಂದಿದ್ದ ಅ ಎರಡು ದೇಹ ,ಖಾರದಪುಡಿ ನೀರು ಎರಚಿದ್ದಕ್ಕೆ ಮೈ ತುಂಬ ಬಾವು ಬಂದಿತ್ತು, ಕೆಂಚ, ಬಸ್ಯಾ ಊಟ ನೀರು ಇಲ್ಲದೆ ಏಟು ತಿಂದು ಸಂಪೂರ್ಣವಾಗಿ ನಿತ್ರಾಣಗೊಂಡಿದ್ದರು.
ಅಯ್ಯೋ ಪಾಪ! ಇವ್ರು ಪ್ಯಾಟಿ ಮುಟ್ಟಲ್ಲ ಅನ್ಸತೈತಿ, ನಡದಾರ್ಯಾಗ ಸತ್ತಹೋಕ್ಕವ ಅನ್ಸತ್ತ ಎಂದು ಮಂದಿ ಗುಸು ಗುಸು ಮಾತನಾಡುತ್ತಿದ್ದರು.
ಸದ್ದು… ಸದ್ದು… ಇವರಿಗೆ ಏನು ಶಿಕ್ಷೆ ಅಂತ ತಳವಾರ ನಾಗ್ಯಾ ಡಂಗೂರ ಸಾರಿದ್ನ ಎಲ್ರೂ ಕೇಳಿರಿ. ಈಗ ಇವರ್ನ ಪ್ಯಾಟಿಗೆ ಕರ್ಕೊಂಡೊಗಿ ಪೊಲೀಸರಿಗೆ ಒಪ್ಪಸ್ತೀವಿ. ಆಗ್ಲೆ ಸಾಹುಕಾರು ಪೊಲೀಸ್ ಸಾಹೇಬ್ರ ಹತ್ರ ಎಲ್ಲ ಮಾತಾಡಿ ಮುಗ್ಸ್ಯಾರ. ಮುಂದ ಏನ್ ಮಾಡೋದು, ಬಿಡೋದು ಪೊಲೀಸರ್ಗೆ ಬಿಟ್ಟದ್ದು ಎಂದು ಜೋರಾಗಿ ಕೂಗಿದ.
ಖುರ್ಚಿಯ ಮೇಲೆ ಕುಳಿತದ್ದ ಊರ ಹಿರಿಯನೊಬ್ಬ, ಸಾಹುಕಾರ, ಇವರನ್ನ ಕೆಳಗೆ ಇಳಸ್ತಿನ್ರಿ, 9 ಕಿಮಿ ನಡಿಬೇಕಲ್ರ, ಶಕ್ತಿ ಇಲ್ದ ಸತ್ತಗಿತ್ತಾರು, ತಿನ್ನಾಕ ಒಂಚೂರು ಏನಾದ್ರೂ ಕೊಡನ್ರಿ.
ಸಾಹುಕಾರ ಆ ವ್ಯಕ್ತಿಯನ್ನು ಕೆಂಪುಕಣ್ನಿಂದ ದಿಟ್ಟಿಸಿ ನೋಡಿದ. ಹೂಂ, ಒಂಚೂರು ಒಣ ರೊಟ್ಟಿ ತಿನ್ನಸ್ರಿ. ನಡದಾರ್ಯಾಗ ಸತ್ರ ಏನೂ ಮಾಡಕ ಆಗಲ್ಲ. ಇಬ್ಬರಿಗೂ ಒಂದು ರೊಟ್ಟಿಗಿಂತ ಹೆಚ್ಚಕೊಡಬ್ಯಾಡ್ರಿ. ಅಂದಂಗ ದಾರಿಗುಂಟ ಬರೋ ಊರಿನ ಮಂದಿಗೆಲ್ಲ ತಿಳಿಸಿರಿಲ್ಲೊ!, ಈ ಮಕ್ಕಳ ಯೋಗ್ಯತೆ ಏನು ಅಂತ ಅವರಿಗೂ ಗೊತ್ತಾಗ್ಲಿ ಎಂದು ಸಾಹುಕಾರ ಕಟ್ಟೆಯಿಂದ ಕೆಳಗಿಳಿಂದ.
ಕೆಂಚ, ಬಸ್ಯನಿಗೆ ಒಂದೊಂದು ರೊಟ್ಟಿ ತಿನ್ನಿಸಿ, ಪೊಲೀಸ್ ಠಾಣಿಗೆ ಕರೆದುಕೊಂಡು ಹೋಗಲು ಊರ ಹಿರಿಯರು ಮುಂದಾದರು.
(ಮುಂದುವರಿಯುವುದು …….)
ಈ ವಿಡಿಯೋ ನೋಡಿ : ʼಹೊರಗುತ್ತಿಗೆʼ ಎಂಬ ಜೀತ ಪದ್ದತಿಯಿಂದ ಮುಕ್ತಿಗೊಳಿಸಿ ಹಾಸ್ಟೆಲ್ ಅಡುಗೆದಾರರಿಂದ ಅನಿರ್ದಿಷ್ಟ ಮುಷ್ಕರ