ಕುಕನೂರು: ಕೊಪ್ಪಳದ ಗವಿಮಠ ಸ್ವಾಮೀಜಿ, ಕುಕನೂರು ತಾಲೂಕಿನ ಬಾನಾಪುರದಲ್ಲಿ ಶನಿವಾರ ಮಸೀದಿ ಉದ್ಘಾಟನೆ ಮಾಡಿದ್ದಾರೆ.
ಬಾನಾಪುರ ಗ್ರಾಮದಲ್ಲಿ ಕೇವಲ ಐದು ಮುಸ್ಲಿಂ ಕುಟುಂಬಗಳಿದ್ದು, ಎಲ್ಲಾ ಧರ್ಮದವರು ಸೇರಿ ಮಸೀದಿ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ಮಸೀದಿಯನ್ನು ಸ್ವಾಮೀಜಿಗಳು ಉದ್ಘಾಟನೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಮಸೀದಿ ಉದ್ಘಾಟನೆ ಬಳಿಕ ಮಾತನಾಡಿದ ಸ್ವಾಮೀಜಿಗಳು, ರಸ್ತೆಯಲ್ಲಿ ಧರ್ಮಕ್ಕಾಗಿ ರಕ್ತ ಹರಿಸೋದು ಧರ್ಮವಲ್ಲ, ರಸ್ತೆಯಲ್ಲಿ ಒದ್ದಾಡುವವನಿಗೆ ರಕ್ತ ನೀಡುವುದು ಧರ್ಮ. ಪ್ರಕೃತಿಯಲ್ಲಿ ಸೂರ್ಯನ ಬೆಳಕು. ಗಾಳಿಗೆ ಇಲ್ಲ ಬೇಧ ಭಾವ ಮನುಷ್ಯನಿಗೆ ಯಾಕೆ? ನಿಜವಾಗಿ ಒಬ್ಬೊಬ್ಬರು ಸೌಹಾರ್ದಯುತವಾಗಿ ಬಾಳುವುದು ಧರ್ಮ. ಗುಡಿ, ಮಂದಿರಕ್ಕೆ ಹೋಗಿ ಬಾಳೆ ನೈವೇದ್ಯ ಮಾಡಿ ಹಣ್ಣು ತಿಂದು ಸಿಪ್ಪೆ ಬೀಸಾಡುವುದು ಧರ್ಮವಲ್ಲ. ಬೀಸಾಡಿರುವ ಸಿಪ್ಪೆ ಸ್ವಚ್ಛಗೊಳಿಸುವುದು ಧರ್ಮ. ಇನ್ನೊಬ್ಬರ ಮನಸ್ಸಿಗೆ ನೋವು ಮಾಡದೆ ಇರೋದು ಧರ್ಮ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ಧರ್ಮ ಎಂದರೆ ಎಲ್ಲರನ್ನು ನೋಡಿ ಸಂತೋಷ ಪಡಬೇಕು. ಪುಟ್ಟ ಗ್ರಾಮದಲ್ಲಿ ಕೇವಲ ಐದು ಮನೆಗಳಿದ್ದರೂ ಸಮನ್ವಯದಿಂದ ಬದುಕು ಸಾಗಿಸುತ್ತಿರುವುದು ಧರ್ಮದ ಸಮನ್ವಯದ ಸಂಕೇತ ಎಂದು ಸ್ವಾಮೀಜಿ ಹೇಳಿದರು. ಮಸೀದಿ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.