ಪ್ರಧಾನಿಯ ಪಟ್ಟಕ್ಕೆ ಮೋದಿ ಘನತೆ ತರುತ್ತಿಲ್ಲ!

ಟಿ. ಸುರೇಂದ್ರರಾವ್

ಭಾರತದ ಪ್ರಧಾನಿಯ ಪಟ್ಟಕ್ಕೆ ಅದರದ್ದೇ ಆದ ಘನತೆ, ಗೌರವ ಮತ್ತು ಮರ್ಯಾದೆ ಇದೆ. ಆದರೆ ಈಗಿನ ನಮ್ಮ ಪ್ರಧಾನಿ ಮೋದಿಯವರು ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ತೀರಾ ಸಾಮಾನ್ಯ ರಾಜಕಾರಣಿಯಂತೆ ಮಾತನಾಡುತ್ತಿರುವುದು ಆ ಸ್ಥಾನಕ್ಕೆ ಶೋಭೆ ತರುವುದಿಲ್ಲ.

2014 ರಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಮಾನ್ಯ ಮೋದಿಯವರು ಭಾರತದ ಜನರಿಗೆ ನೀಡಿದ್ದ ಆಶ್ವಾಸನೆಗಳೇನೇನು ಮತ್ತು ಅವರು ಪ್ರಧಾನಿ ಪಟ್ಟ ಅಲಂಕರಿಸಿದ ನಂತರ ಕಳೆದ 9 ವರ್ಷಗಳಲ್ಲಿ ಈಡೇರಿಸಿದ ಭರವಸೆಗಳು ಏನೇನು ಎಂಬ ಸತ್ಯ ಇವತ್ತು ನಾಡಿನ ಪ್ರತಿಯೊಬ್ಬರಿಗೂ ಗೊತ್ತೇ ಇದೆ. ಅದನ್ನು ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ.

ಈ ಕೆಳಗಿನ ಪತ್ರಿಕೆಗಳಲ್ಲಿ ಪ್ರಕಟವಾದ ಮೋದಿಯವರ ಹೇಳಿಕೆಯನ್ನು ಗಮನಿಸಿದರೆ ಸಾಮಾನ್ಯ ಜನ ಕೂಡ ಅವರ ಮಾತಿನಲ್ಲಿರುವ ‘ಕಾಳೆಷ್ಟು ಮತ್ತು ಜೊಳ್ಳೆಷ್ಟು’ ಎನ್ನುವುದನ್ನು ಹೇಳುತ್ತಾರೆ.

ಮೋದಿಯವರ ಹೇಳಿಕೆ ನೋಡಿ ” . .ಇತರ ಪಕ್ಷಗಳು ಸುಳ್ಳು ಗ್ಯಾರಂಟಿಗಳ ಭರವಸೆಗಳನ್ನು ಜನರಿಗೆ ನೀಡಿವೆ. ಇಂತಹ ಗ್ಯಾರಂಟಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಈ ಪಕ್ಷಗಳಿಗೆ ತಮ್ಮದೇ ಆದ ರಾಜಕೀಯ ಖಾತ್ರಿ (ಗ್ಯಾರಂಟಿ) ಇಲ್ಲದಿದ್ದರೂ ಜನರಿಗೆ ಗ್ಯಾರಂಟಿ ಯೋಜನೆಗಳ ಬರವಸೆ ನೀಡುತ್ತಾರೆ. ಈ ಭರವಸೆಗಳ ಹಿಂದಿನ ಗುಪ್ತ ವಂಚನೆಗಳನ್ನು ಜನರು ಗುರುತಿಸಬೇಕಿದೆ.”

ಮುಂದುವರಿದು, ” . .ಉಚಿತ ವಿದ್ಯುತ್ ಗ್ಯಾರಂಟಿ ನೀಡಿದಾಗ ಅವರು ವಿದ್ಯುತ್ ದರವನ್ನು ಹೆಚ್ಚಿಸಲು ಹೊರಟಿದ್ದಾರೆ ಎಂದರ್ಥ . . .” ಎಂದೂ ಮಾತನಾಡಿದರು.

ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಅವರು ಉಲ್ಲೇಖ ಮಾಡಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮೇ 20, 2023 ರಂದು. ವಿದ್ಯುತ್ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ದಿನಾಂಕ ಮೇ 13. ಅಂದರೆ ಬಿಜೆಪಿಯ ಬಸವರಾಜ ಬೊಮ್ಮಾಯಿಯವರು ಆಗ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. ಸತ್ಯ ಇದಿರಬೇಕಾದರೆ, ಮಾನ್ಯ ಪ್ರಧಾನಿ ಮೋದಿಯವರು ಯಾರನ್ನು ವಂಚಿಸಲು ಈ ಮೇಲಿನಂತೆ ವಿದ್ಯುತ್ ದರ ಏರಿಕೆಯ ಮಾತನಾಡಿರಬಹುದು ?

ಇನ್ನುಳಿದಿರುವ ಕೆಲವೇ ತಿಂಗಳ ಅಧಿಕಾರದಲ್ಲಾದರೂ ಅವರು ಸುಳ್ಳಾಡುವುದನ್ನು ನಿಲ್ಲಿಸಿ, ಅವರು ಅಲಂಕರಿಸಿರುವ ಸ್ಥಾನದ ಘನತೆ, ಗೌರವ ಮತ್ತು ಮರ್ಯಾದೆಯನ್ನು ಕಾಪಾಡಲಿ ಎಂದು ಬೇಡುತ್ತೇವೆ !

Donate Janashakthi Media

Leave a Reply

Your email address will not be published. Required fields are marked *