ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 17 ಆರೋಪಿಗಳ ವಿರುದ್ಧ ಬೆಂಗಳೂರಿನ ಸಂಘಟಿತ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ ಆರೋಪ ರೂಪಿಸಿದೆ.
ಪ್ರಕರಣದ ವಿಚಾರಣೆ ಆರಂಭಿಸಲು ನ್ಯಾಯಾಲಯ ಡಿಸೆಂಬರ್ 8ರಂದು ದಿನಾಂಕ ಪ್ರಕಟಿಸಲಿದೆ.
ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಹಾಗೂ ಋಷಿಕೇಶ್ ದಿಯೋದಿಕರ್ ಅವರ ವಿರುದ್ಧ ಆರೋಪ ರೂಪಿಸಲಾಗಿದೆ. ವಿಚಾರಣೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ನಿರ್ದಿಷ್ಟ ಆದೇಶ ಇಲ್ಲದೆ ಯಾವುದೇ ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾಯಿಸದಂತೆಯೂ ನ್ಯಾಯಾಲಯ ಸೂಚಿಸಿದೆ.
ವರ್ಚುವಲ್ ವಿಧಾನದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಕಲಾಪದಲ್ಲಿ ಆರೋಪಿಗಳಿಗೆ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಆರೋಪಗಳನ್ನು ಓದಿ ಹೇಳಲಾಯಿತು. ಕೊಲೆ, ಕ್ರಿಮಿನಲ್ ಪಿತೂರಿ, ಸಂಘಟಿತ ಅಪರಾಧಕ್ಕೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳು, 2000ರ ಕರ್ನಾಟಕ ಸಂಘಟಿತ ಅಪರಾಧ ಕಾಯಿದೆ ಹಾಗೂ 1959ರ ಶಸ್ತ್ರಾಸ್ತ್ರ ಕಾಯಿದೆ, ಅಡಿಯಲ್ಲಿ ಆರೋಪಗಳನ್ನು ರೂಪಿಸಲಾಯಿತು.
ಆರೋಪಿಗಳು ಮುಂಬೈ, ಪುಣೆ ಸೇರಿದಂತೆ ವಿವಿಧ ಜೈಲುಗಳಲ್ಲಿದ್ದು ವಿಚಾರಣೆ ಸಂದರ್ಭದಲ್ಲಿ ಎಲ್ಲರೂ ಹಾಜರಾಗುತ್ತಿರಲಿಲ್ಲ. ಅಲ್ಲದೆ ಕೋವಿಡ್ ಪರಿಸ್ಥಿತಿಯಿಂದಾಗಿಯೂ ವಿಚಾರಣೆ ಆರಂಭ ವಿಳಂಬವಾಗಿತ್ತು. ಈ ಕಾರಣಕ್ಕೆ ಆರೋಪ ನಿಗದಿಗೊಳಿಸುವುದು ಮುಂದೂಡಿಕೆಯಾಗುತ್ತಿತ್ತು. ಹೀಗಾಗಿ ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಎ ಬಿ ಕಟ್ಟಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಆರೋಪ ನಿಗದಿಗೊಳಿಸಲು ನಿರ್ಧರಿಸಿದ್ದರು. ಮುಂಬೈನ ಆರ್ಥರ್ ರೋಡ್ ಜೈಲು, ಪುಣೆಯ ಯರವಾಡ ಜೈಲು, ತುಮಕೂರು, ಮೈಸೂರು, ಬಳ್ಳಾರಿ ಹಾಗೂ ಶಿವಮೊಗ್ಗದ ಜೈಲುಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತರುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಆದೇಶಿಸಿದ್ದರು.
ಗೌರಿ ಅವರನ್ನು 5 ಸೆಪ್ಟೆಂಬರ್ 2017ರಂದು ದುಷ್ಕರ್ಮಿಗಳು ಬೆಂಗಳೂರಿನ ಅವರ ನಿವಾಸದೆದುರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಧಾರವಾಡದಲ್ಲಿ ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ, ಕೊಲ್ಹಾಪುರದಲ್ಲಿ ಚಿಂತಕ ಗೋವಿಂದ ಪನ್ಸಾರೆ ಅವರ ಹತ್ಯೆಗೆ ಬಳಸಿದ ಪಿಸ್ತೂಲನ್ನೇ ಗೌರಿ ಅವರ ಹತ್ಯೆಗೆ ಬಳಕೆಯಾಗಿದೆ ಎಂದು ಎಸ್‌ಐಟಿ ತಿಳಿಸಿತ್ತು. ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಗೆ ಬಳಸಿದ ಬಂದೂಕಿಗೂ ಪನ್ಸಾರೆ ಗುಂಡಿನ ದಾಳಿಯಲ್ಲಿ ಬಳಸಿದ ಎರಡನೇ ಬಂದೂಕಿಗೂ ಹೋಲಿಕೆ ಇರುವುದು ಕಂಡುಬಂದಿತ್ತು.