ಮಂಗಳೂರ | ಗಂಜಿಮಠ ಟೋಲ್ ಪ್ಲಾಜಾ ನಿಯೋಗ ಭೇಟಿ

ಮಂಗಳೂರ : ಗಂಜಿಮಠ-ಸೂರಲ್ಪಾಡಿಯಲ್ಲಿ ನಿರ್ಮಾಣವಾಗುತ್ತಿರುವ ಟೋಲ್ ಪ್ಲಾಜಾ ಕಾಮಗಾರಿಯನ್ನು ಹಿರಿಯ ವಕೀಲ ಎಸ್ ಬಾಲನ್ ನೇತೃತ್ವದ ವಕೀಲರ ನಿಯೋಗ ಇಂದು ಭೇಟಿ ನೀಡಿ ಪರಿಶೀಲಿಸಿತು‌. ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ ಅವರು ಈ ನಿಯೋಗವನ್ನು ಮುನ್ನಡೆಸಿದರು. ಹಿರಿಯ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಹಿರಿಯ ವಕೀಲ-ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಪತ್ರಕರ್ತ ನವೀನ್ ಸೂರಿಂಜೆ ಅವರು ನಿಯೋಗದಲ್ಲಿದ್ದರು.

ಗಂಜೀಮಠ – ಸೂರಲ್ಪಾಡಿ ಅಕ್ರಮ ಟೋಲ್ ವಿರುದ್ದ ಈಗಾಗಲೇ ‘ಟೋಲ್ ವಿರೋಧಿ ಹೋರಾಟ ಸಮಿತಿ’ ಹೋರಾಟವನ್ನು ಕೈಗೆತ್ತಿಕೊಂಡಿದೆ. ಹೋರಾಟದ ಜೊತೆಗೆ ನ್ಯಾಯಾಂಗದ ಪರಿಹಾರವೂ ಮುಖ್ಯವಾಗಿದೆ. ಕರಾವಳಿಯಲ್ಲಿ ಹಲವು ಹೆದ್ದಾರಿ ಯೋಜನೆಗಳನ್ನು ರಿಯಲ್ ಎಸ್ಟೇಟ್ ಮಾಫಿಯಾ, ಉದ್ಯಮಗಳು ಯೋಜಿಸಿದೆ‌‌. ಅದರ ಭಾಗವಾಗಿ ಹಲವು ಟೋಲ್ ಗಳನ್ನು ಅಳವಡಿಸಲು ಯತ್ನ ನಡೆಸಲಾಗುತ್ತದೆ. ಹಾಗಾಗಿ ಕಾನೂನು ಬಾಹಿರ ಟೋಲ್ ಗಳು ಭವಿಷ್ಯದಲ್ಲೂ ತಲೆಎತ್ತಬಾರದು ಎಂಬ ಕಾರಣಕ್ಕೆ ನ್ಯಾಯಾಂಗದ ಮಧ್ಯಪ್ರವೇಶವನ್ನು ಜನ ಬಯಸುತ್ತಿದ್ದಾರೆ ಎಂದು ಎಸ್ ಬಾಲನ್ ನೇತೃತ್ವದ ವಕೀಲರ ನಿಯೋಗಕ್ಕೆ ಮುನೀರ್ ಕಾಟಿಪಳ್ಳ ವಿವರಿಸಿದರು.

ಇದನ್ನೂ ಓದಿ : ಸಿಂಧನೂರು | ಕಾರ್ಮಿಕರ ಬದುಕಿನ ಪ್ರಶ್ನೆ: ಸಂಹಿತೆಗಳ ವಿರುದ್ಧ ಕ್ಲಿಫ್ಟನ್‌ ಡಿ. ರೊಜಾರಿಯೋ ಆಗ್ರಹ

ನಿಯಮಗಳಂತೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಎರಡು ಟೋಲ್‌ ಗಳ ನಡುವೆ ಕನಿಷ್ಠ 60 ಕಿ.ಮೀ ಅಂತರವಿರಬೇಕು. ತಲಪಾಡಿ ಟೋಲ್ ನಿಂದ ದ 36 ಕಿ.ಮೀ, ಹೆಜಮಾಡಿ ಟೋಲ್‌ಗೇಟ್‌ನಿಂದ 45 ಕಿ.ಮೀ, ಬಿ.ಸಿ. ರೋಡ್ ಟೋಲ್‌ಗೇಟ್‌ನಿಂದ 35 ಕಿ.ಮೀ ಅಂತರದಲ್ಲಿ ಸೂರಲ್ಪಾಡಿ ಟೋಲ್ ಗೇಟ್ ನಿರ್ಮಿಸಲಾಗಿದೆ. ನಂತೂರಿನಿಂದ 17 ಕಿ.ಮೀ ದೂರದಲ್ಲಿ ಗಂಜಿಮಠದ ಸೂರಲ್ಪಾಡಿಯಲ್ಲಿ ನಿರ್ಮಾಣವಾಗಿತ್ತಿರುವ ಟೋಲ್ ಗೇಟ್ ದಾಟಿ ಗಂಜಿಮಠದ ಮಸೀದಿ,‌ ಮಂದಿರ, ಮದುವೆ ಮಂಟಪ, ಶಾಲೆಗಳಿಗೆ ಹೋಗಬೇಕಿದೆ. ಇದು ಸ್ಥಳೀಯರಿಗೆ ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹಾಗಾಗಿ ಬೀದಿ ಹೋರಾಟದ ಜೊತೆಗೆ ಕಾನೂನು ಹೋರಾಟವೂ ಅನಿವಾರ್ಯವಾಗಿದೆ ಎಂದು ವಕೀಲರ ನಿಯೋಗಕ್ಕೆ ವಿವರಿಸಿದರು.

“ರಾಷ್ಟ್ರೀಯ ಹೆದ್ದಾರಿ ಕಾಯ್ದೆಯ ಪ್ರಕಾರ 60 ಕಿಮಿ ಅಂತರದ ಬಳಿಕವೇ ಟೋಲ್ ನಿರ್ಮಿಸಬೇಕು. ಟೋಲ್ ನಿರ್ಮಿಸುವ ಅಗತ್ಯಗಳನ್ನೂ ಸರ್ಕಾರ ವಿವರಿಸಬೇಕಾಗುತ್ತದೆ. ರಸ್ತೆ ಎಂಬ ಮೂಲಭೂತ ಸೌಕರ್ಯವನ್ನು ಜನರಿಗೆ ಒದಗಿಸುವುದು ಪ್ರಜಾಪ್ರತಿನಿಧಿ ಸರ್ಕಾರಗಳ ಮೂಲಭೂತ ಕರ್ತವ್ಯವಾಗಿದೆ. ಆ ಕೆಲಸವನ್ನು ಖಾಸಗಿ ಕಂಪನಿಗಳಿಗೆ ವಹಿಸಿ ಹಣ ಸಂಗ್ರಹಿಸುವ ಅಗತ್ಯವೇನು ಎಂಬುದನ್ನು ಹೆದ್ದಾರಿ ಇಲಾಖೆ ವಿವರಿಸಬೇಕಾಗುತ್ತದೆ. ಕಾಯ್ದೆಯ ಪ್ರಕಾರ ನಾವು ಹೆದ್ದಾರಿ ಟೆಂಡರ್ ಮತ್ತು ಟೋಲ್ ಸಂಗ್ರಹ ಸೇರಿದಂತೆ ಎಲ್ಲಾ ವಿಷಯಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಟೋಲ್ ವಿರೋಧಿ ಹೋರಾಟ ಸಮಿತಿಯ ಪರವಾಗಿ ಹೈಕೋರ್ಟ್ ನಲ್ಲಿ ಸೂಕ್ತ ಕಾನೂನು ಹೋರಾಟ ನಡೆಸಲಾಗುವುದು” ಎಂದು ಹಿರಿಯ ವಕೀಲ ಎಸ್ ಬಾಲನ್ ಹೇಳಿದರು.

ಕೇರಳದಲ್ಲಿ ಟೋಲ್ ರದ್ದುಗೊಳಿಸಿರುವ ಆದೇಶ, ಸುರತ್ಕಲ್ ಟೋಲ್ ರದ್ದು ಅಧಿಸೂಚನೆ, ವಿವಿಧ ನೋಟಿಫಿಕೇಶನ್, ದೇಶದ ಇತರೆಡೆಯ ಟೋಲ್ ಗಳು ರದ್ದುಗೊಂಡಿರುವ ಆದೇಶಗಳು, ಸೂರಲ್ಪಾಡಿ, ಉಪ್ಪಿನಂಗಡಿಯ ವಲಾಲು, ಮಡಂತ್ಯಾರು ಪಣಪ್ಪಿಲ ಟೋಲ್ ವ್ಯಾಪ್ತಿಯ ಹೆದ್ದಾರಿ ಗುತ್ತಿಗೆ ಟೆಂಡರ್ ಸಹಿತ ಇನ್ನಿತರ ದಾಖಲಾತಿಗಳನ್ನು ಸಂಗ್ರಹಿಸಿ ಶೀಘ್ರ ಕಾನೂನು ಹೋರಾಟ ಶುರುವಾಗಲಿದೆ ಎಂದು ನಿಯೋಗ ಅಭಿಪ್ರಾಯ ವ್ಯಕ್ತಪಡಿಸಿತು.

ಇದನ್ನೂ ನೋಡಿ : 60 ವರ್ಷದ ಉಳುಮೆಗೆ ಹಕ್ಕಿಲ್ಲವೇ? ಕಾರೆಕೆರೆ ಕಾವಲು ದಲಿತರ ನ್ಯಾಯದ ಕೂಗು Janashakthi Media

Donate Janashakthi Media

Leave a Reply

Your email address will not be published. Required fields are marked *