ಗಾಂಜಾ ಮಾರಾಟ: ಮುಖ್ಯಮಂತ್ರಿ ಬೊಮ್ಮಾಯಿ ಮನೆ ಭದ್ರತೆಯ ಇಬ್ಬರು ಪೊಲೀಸರು ಬಂಧನ

ಬೆಂಗಳೂರು: ಗಾಂಜಾ ಮಾರಾಟದಲ್ಲಿ ಅತ್ಯಂತ ಪ್ರಮುಖರಿಂದಲೇ ಗಾಂಜಾ ತರಿಸಿಕೊಳ್ಳುತ್ತಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯದಲ್ಲಿದ್ದವವರು.

ಶಿವಕುಮಾರ್ ಮತ್ತು ಸಂತೋಷ್ ಬಂಧಿತ ಕಾನ್‌ಸ್ಟೇಬಲ್‌ಗಳು. ಇವರಿಬ್ಬರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಡ್ರಗ್ಸ್‌ ಪೆಡ್ಲರ್ ಗಳ ಬಳಿ ಗಾಂಜಾ ಖರೀದಿಸಿ, ಮಾರಾಟಕ್ಕೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಇಬ್ಬರು ಗಾಂಜಾ ಪೆಡ್ಲರ್‌ಗಳು ಸೇರಿ ನಾಲ್ವರನ್ನು ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಇರುವ ಆರ್. ಟಿ. ನಗರದ 80 ಅಡಿ ರಸ್ತೆ ಬಳಿ ವ್ಯವಹಾರ ಕುದರಿಸುತ್ತಿದ್ದರು. ಮುಖ್ಯಮಂತ್ರಿ ಮನೆಯ ಬಳಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಸದ್ಯ ಆರ್.ಟಿ. ನಗರ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಅಖಿಲ್ ರಾಜ್ ಮತ್ತು ಅಮ್ಜದ್ ಎಂಬ ಡ್ರಗ್ ಪೆಡ್ಲರ್‌ಗಳ ಬಳಿ ಗಾಂಜಾ ಖರೀದಿ ಮಾಡಿದ್ದ ಸಂತೋಷ್ ಮತ್ತು ಶಿವಕುಮಾರ್ ಹಣ ಕೊಟ್ಟಿರಲಿಲ್ಲ. ಕೇಳಿದರೆ, ನಾವು ಪೊಲೀಸರು ಎಂದು ಹೆದರಿಸಿದ್ದರು. ಈ ವಿಚಾರವಾಗಿ ಪೆಡ್ಲರ್‌ಗಳ ಜತೆ ಜಗಳ ನಡೆದು ಹಲ್ಲೆಗೆ ಮುಂದಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಆರ್‌.ಟಿ. ನಗರ ಹೊಯ್ಸಳ ಸಿಬ್ಬಂದಿ ಇಬ್ಬರು ಪೊಲೀಸ್ ಪೇದೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ಮೊದಲು ಡ್ರಗ್ ಪೆಡ್ಲರ್‌ಗಳ ಜತೆ ಸಂಪರ್ಕ ಹೊಂದಿದ್ದ ಕಾನ್‌ಸ್ಟೇಬಲ್ ಗಳು ಮಾದಕ ವಸ್ತು ತರಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಒಮ್ಮೆ ಸಿಸಿಬಿ ಪೊಲೀಸರ ಕೈಗೂ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *