ಬೆಂಗಳೂರು: ‘ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಗುಜರಾತ್ ಮೂಲದ ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಹೋರಾಟ ನಡೆಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ತಮ್ಮವರು ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಗಾಂಧೀಜಿ ಅವರು ರೈತರಿಗಾಗಿ ಭಾರತದಲ್ಲಿ ತಮ್ಮ ಹೋರಾಟ ಆರಂಭಿಸಿದ್ದರು. ಆದರೆ ದೇಶದ ಅನ್ನದಾತ ಕಳೆದ 10 ತಿಂಗಳಿಂದ ಗಾಂಧಿ ಆದರ್ಶವಾದ ಅಹಿಂಸೆ ಮೂಲಕ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ಅವರ ಕಷ್ಟಕೇಳುವ ಮನಸ್ಸು ಮಾಡುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕರುಗಳ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಹೆಚ್. ಮುನಿಯಪ್ಪ, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಮತ್ತಿತರ ನಾಯಕರು ಹಾಜರಿದ್ದರು. ಡಿ.ಕೆ. ಶಿವಕುಮಾರ್ ಅವರು ಒಟ್ಟಾರೆ ಹೇಳಿದ್ದಿಷ್ಟು;
‘ನಾವೆಲ್ಲರೂ ಇಂದು ಗಾಂಧೀಜಿ ಹಾಗೂ ಶಾಸ್ತ್ರಿ ಅವರನ್ನು ನೆನೆಸಿಕೊಳ್ಳುತ್ತಿದ್ದೇವೆ. ಇಬ್ಬರು ಮಹಾನ್ ನಾಯಕರ ಜೀವನ ಹಾದಿ ನಮ್ಮ ಶಕ್ತಿ. ಗಾಂಧೀಜಿ ಅವರಿಗೂ ಕರ್ನಾಟಕಕ್ಕೂ ದೊಡ್ಡ ಸಂಬಂಧ ಇದೆ. ಗಾಂಧೀಜಿ ಅವರು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಮಹಾ ಅಧಿವೇಶನದ ಅಧ್ಯಕ್ಷರಾಗಿದ್ದರು. ಇಂತಹ ಮಹಾನ್ ನಾಯಕರು ಇದ್ದ ಪಕ್ಷದ ಸದಸ್ಯರಾಗಿ ನಾವಿಲ್ಲಿ ಕೂತಿದ್ದೇವೆ. ಇದು ನಮ್ಮ ಸೌಭಾಗ್ಯ ಅಲ್ಲವೇ? ನಮ್ಮ ಪಕ್ಷಕ್ಕಿರುವ ಹಿನ್ನೆಲೆ, ಇತಿಹಾಸವನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಬೇರೆ ಪಕ್ಷದವರಿಗೆ ಸಾಧ್ಯವೇ? ಗಾಂಧೀಜಿ ಅವರ ತ್ಯಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ ಬದುಕಿನ ಬಗ್ಗೆ ಬೇರೆ ಪಕ್ಷದ ನಾಯಕರು ಹೇಳಿಕೊಳ್ಳಲು ಸಾಧ್ಯವೇ?ʼ ಎಂದು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಬೃಹತ್ ಕಾಂಗ್ರೆಸ್ ಕಚೇರಿ ನಿರ್ಮಿಲಾಗಿದ್ದು, ಡಿಸೆಂಬರ್ 28ರ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಇದಕ್ಕೆ ಗಾಂಧಿ ಭವನ ಎಂದು ಹೆಸರಿಡಲು ಚಿಂತನೆ ನಡೆದಿದೆ. ಈ ಬಗ್ಗೆ ಪಕ್ಷದ ಎಲ್ಲ ಹಿರಿಯ ನಾಯಕರೂ ಚರ್ಚಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸ್ಮರಣಾರ್ಥ ಈ ತಿಂಗಳು ಗಾಂಧೀಜಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಎಲ್ಲ ನಾಯಕರು 6000 ಪಂಚಾಯ್ತಿ, 1800 ವಾರ್ಡುಗಳಲ್ಲಿ ಒಂದೊಂದು ಸಭೆ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ನಮ್ಮ ಪಕ್ಷದ ಇತಿಹಾಸ ಹಾಗೂ ಹೋರಾಟದ ಹಾದಿ ಸ್ಮರಿಸಲಾಗುತ್ತದೆ. ಗ್ರಾಮ ಸ್ವರಾಜ್ಯ ಗಾಂಧಿ ಅವರ ಕನಸು. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ದೇಶದಲ್ಲಿ 10 ತಿಂಗಳಿನಿಂದ ರೈತರು ಚಳುವಳಿ ನಡೆಸುತ್ತಿದ್ದಾರೆ. ನಮ್ಮ ರೈತರು ಗಾಂಧಿ ಅವರ ತತ್ವ ಆಧರಿಸಿ ಹೋರಾಟ ಮಾಡುತ್ತಿದ್ದಾರೆ. ಅವರ ಕಷ್ಟ ಕೇಳದಿದ್ದರೆ ಅದು ದೇಶದ ಪ್ರತಿಯೊಬ್ಬರ ಸ್ವಾಭಿಮಾನ ಕೆರಳಿಸುವ ವಿಚಾರ. ಇಂತಹ ಪರಿಸ್ಥಿತಿಯಲ್ಲಿ ನಾವು ರೈತರ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ನೂತನ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದೆ. ಇಡೀ ದೇಶಕ್ಕೆ ಎದುರಾಗಲಿರುವ ದೊಡ್ಡ ಅಪಾಯ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಗಿದೆ. ನಮ್ಮಲ್ಲಿ ಈಗ ಇರುವ ಶಿಕ್ಷಣ ವ್ಯವಸ್ಥೆಯನ್ನು ಇಡೀ ವಿಶ್ವವೇ ಪ್ರಶಂಸಿಸಿದೆ. ನಮ್ಮ ನಾಯಕರು ಜಾಗತೀಕರಣ ಮಾಡಿ, ಅದಕ್ಕೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀತಿ ರೂಪಿಸಿ, ಇಡೀ ಜಗತ್ತಿನಲ್ಲಿ ದೇಶ ಸ್ವಾವಲಂಬಿಯಾಗಿ ನಿಲ್ಲುವಂತೆ ಮಾಡಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವವಿಖ್ಯಾತ ವೈದ್ಯರು, ಇಂಜಿನೀಯರ್, ಪ್ರೊಫೆಸರ್ ಗಳು ತಯಾರಾಗಿದ್ದಾರೆ. ಅಂತಹ ಶಿಕ್ಷಣ ವ್ಯವಸ್ಥೆ ಬಿಟ್ಟು ಪುರಾಣ ಓದುವ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದ್ದಾರೆ ಎಂದು ಪ್ರಸ್ತಾಪಿಸಿದರು.
ನೂತನ ಶಿಕ್ಷಣ ನೀತಿ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್, ಉತ್ತರ ಪ್ರದೇಶದಲ್ಲಿ ಅನುಷ್ಠಾನವಾಗುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಆಗುತ್ತಿದೆ. ಇದು ನಮ್ಮ ಮಕ್ಕಳ ಭವಿಷ್ಯ, ದೇಶದ ಅಡಿಪಾಯದ ವಿಚಾರ. ಈ ವಿಚಾರದಲ್ಲಿ ನಾವು ಚಿಂತನೆ ನಡೆಸಬೇಕಿದೆ. ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತಲು ಬಿಜೆಪಿ ಸರ್ಕಾರ ಮುಂದಾಗಿದೆ.
ಸದ್ಯದಲ್ಲೇ ಎರಡು ಉಪಚುನಾವಣೆ ಬರುತ್ತಿದೆ. ಕೇವಲ ಅದರಲ್ಲಿ ಮಾತ್ರವಲ್ಲ, ನಿಮ್ಮ ನಿಮ್ಮ ಕ್ಷೇತ್ರಗಳ್ಳಲ್ಲಿ ನೀವೆಲ್ಲರೂ ಪಕ್ಷ ಸಂಘಟನೆಗೆ ಒತ್ತು ಕೊಡಿ, ಸಮಯ ಕೊಡಿ ಸಾಕು. ನಿಮ್ಮನ್ನು ಪಕ್ಷ ಗುರುತಿಸಲಿದೆ. ನಿಮ್ಮ ಬೂತ್ ಜವಾಬ್ದಾರಿ ನೀವೇ ವಹಿಸಿಕೊಳ್ಳಿ, ನೀವು ನಾಯಕರಾಗಿ ಬೆಳೆಯುತ್ತೀರಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.