ಗಾಂಧಿ ಪರಿವಾರ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಗಾಂಧಿ ಪರಿವಾರ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಸಾಕಷ್ಟು ತ್ಯಾಗ ಮಾಡಿದೆ, ಬಲಿದಾನ ಕೊಟ್ಟಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಮಾರ್ಗದರ್ಶನ ಪಡೆಯುವುದರಲ್ಲಿ ತಪ್ಪೇನಿದೆ. ಅವರ ಮಾರ್ಗದರ್ಶನ ಸಲಹೆ ಪಡೆದುಕೊಂಡು ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಇದರಲ್ಲಿ ನಾಚಿಕೆಪಡುವ ವಿಷಯ ಏನಿದೆ ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಮ್ಮ ಎಲ್ಲಾ ನಾಯಕರು ಒತ್ತಾಯ ಮಾಡಿದ ಮೇಲೆಯೇ ಸ್ಪರ್ಧೆ ಮಾಡಿದ್ದೇನೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಚುನಾವಣೆಯಲ್ಲಿ ನನಗೆ ಮತ ಹಾಕುವಂತೆ ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಇನ್ನೂ ಒಂದಷ್ಟು ರಾಜ್ಯಗಳಲ್ಲಿ ಪ್ರವಾಸ ಮಾಡುವುದು ಬಾಕಿ ಇದೆ ಎಂದು ಹೇಳಿದ್ದಾರೆ.

ಸಂಪ್ರದಾಯದಂತೆ ರಾಜ್ಯಗಳಿಗೆ ಭೇಟಿ ಮಾಡಿ ಮತ ಕೇಳುತ್ತಿದ್ದೇನೆ. ನಮ್ಮ ರಾಜ್ಯದ ಹಲವು ನಾಯಕರಿಗೂ ಸಂಪರ್ಕಿಸಿದ್ದೇನೆ. ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಕಾಣುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ ಎಂದು 80 ವರ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರತಿ ಪಕ್ಷದಲ್ಲಿ ಪ್ರಮುಖ ನಾಯಕರು ಹೇಗೆ ಕಾರ್ಯನಿರ್ವಹಿಸುತ್ತಾರೋ ಹಾಗೆಯೇ, ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದವರೇ ಪ್ರಮುಖ ನಾಯಕರು. ಬಿಜೆಪಿ ನಮ್ಮ ಸರ್ಕಾರಗಳನ್ನ ಕೆಡವುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದೆ. ಇದನ್ನೆಲ್ಲ ಗಮನಿಸಿಕೊಂಡು ಅವರ ಸಲಹೆ, ಮಾರ್ಗದರ್ಶನ ಪಡೆಯುತ್ತೇನೆ. ಇದರಲ್ಲಿ ನಾಚಿಕೆ ಏನಿದೆ, ತಪ್ಪುಗಳಿದ್ದರೆ ತಿದ್ದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೀಯ ಸ್ಥಾನದ ಪ್ರತಿಸ್ಪರ್ಧಿ ಶಶಿ ತರೂರ್ ಬಗ್ಗೆ ಮಾತನಾಡಿದ ಅವರು, ನಾನು ಐವತ್ತು ವರ್ಷದಿಂದ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್‌ನ ಹಲವು ನಾಯಕರು ಬೆಂಬಲಿಸುತ್ತಿದ್ದಾರೆ. ನಾನು ಯಾವ ನಾಯಕರಿಗೂ ನನ್ನ ಬಳಿ ಬನ್ನಿ ಎಂದು ಕರೆದಿಲ್ಲ. ಅವರಾಗಿಯೇ ಬಂದು ಬೆಂಬಲ ನೀಡುತ್ತಿದ್ದಾರೆ. ಅವರು ನಾನು ಅಂತಾರೆ, ನಾನು ನಾವು ಎನ್ನುತ್ತೇನೆ. ನಾವು ಎಂದರೇ ಮಾತ್ರ ಪಕ್ಷಕ್ಕೆ ಒಳ್ಳೆಯದು, ನನ್ನೊಬ್ಬನ ಕೈಯಿಂದ ಎಲ್ಲವೂ ಸಾಧ್ಯವಿಲ್ಲ, ಇದು ವೈಯಕ್ತಿಕ ಹೋರಾಟ ಅಲ್ಲ, ಈ ಹೋರಾಟಕ್ಕೆ ಜಿ23 ನಾಯಕರು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *