ಚಿಕ್ಕಮಗಳೂರು: ಮುಂಗಾರು ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್ಭಟಿಸುತ್ತಿದೆ. ಮಳೆ ಹಲವಾರು ಕಡೆ ನಷ್ಟವನ್ನು ಉಂಟು ಮಾಡಿದೆ. ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಶೃಂಗೇರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಕೊಗ್ರೆ ಸಮೀಪದ ಹುಲ್ಲಿನಗದ್ದೆ ಸೇತುವೆ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಸಂಚಾರಕ್ಕೆ ಪರದಾಡುವಂತಾಗಿದೆ. ಅಲ್ಲದೇ ಮಳೆಗೆ ತುಂಗಾ ನದಿಯ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡಿದೆ. ಇದರಿಂದ ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದೆ. ಮೈದಾನದಲ್ಲಿರುವ ಅಂಗಡಿ ಮುಂಗಟ್ಟುಗಳು ಅರ್ಧದಷ್ಟು ಮುಳುಗಡೆಯಾಗಿವೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಭದ್ರಾ ನದಿ ಅಬ್ಬರದಿಂದ ಕಳಸ ತಾಲೂಕಿನ ಹೊರನಾಡು ಸೇತುವೆ ಬಳಿಕ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಹೊರನಾಡು-ಕಳಸ ನಡುವಿನ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಎರಡೂ ಕಡೆ ಬ್ಯಾರಿಕೇಡ್ ಇರಿಸಲಾಗಿದ್ದು, ಹೆಬ್ಬಾಳೆ ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೇತುವೆ ಬಳಿ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಚಿಕ್ಕಮಗಳೂರು ತುಂಬಾ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಹಳ್ಳ-ಕೊಳ್ಳ, ಕೆರೆ-ಕಟ್ಟೆ, ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನವನ್ನು ನದಿ ನೀರು ಆವರಿಸಿದೆ. ಭಾನುವಾರ ರಾತ್ರಿಯಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ತುಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.