ಗಂಗಾವತಿ: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣದ ಕಾರ್ಯಕ್ರಮದಂದು ಮಹಾತ್ಮಾ ಗಾಂಧೀಜಿ ಭಾವಚಿತ್ರದೊಂದಿಗೆ ಇಡಲಾಗಿದ್ದ, ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವೆನೆಂದು ಎಸಗಿದ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಗೌಡರ್ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ಗಂಗಾವತಿ ತಾಲ್ಲೂಕು ಸಮಿತಿ ಬಲವಾಗಿ ಖಂಡಿಸಿದೆ.
ಈ ಅಪಮಾನವು ಅಕ್ಷಮ್ಯವಾಗಿದ್ದು ಈ ಕುರಿತು ಅಗತ್ಯ ಕಾನೂನು ಕ್ರಮವನ್ನು ರಾಜ್ಯಪಾಲರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಕೈಗೊಂಡು ಮಲ್ಲಿಕಾರ್ಜುನ ಗೌಡ ರವರಿಗೆ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಸಿಪಿಐ(ಎಂ) ಪಕ್ಷವು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ತಾಲ್ಲೂಕು ಕಾರ್ಯದರ್ಶಿ ನಿರುಪಾದಿ ಬೆಣಕಲ್, ಬಸವರಾಜ್ ಮರಕುಂಬಿ, ಹುಸೇನಪ್ಪ, ಮರಿನಾಗ ಹುಲಿಗೆಮ್ಮ, ಗ್ಯಾನೇಶ್ ರಾಜಸಾಬ್, ಸೋಮನಾಥ, ಮಂಜುನಾಥ್, ಮುತ್ತು, ಇಬ್ರಾಹಿಂ ಸಾಬ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.