ಮುಗ್ದ ಬಾಲಕನನ್ನು ಬರ್ಬರವಾಗಿ ಕೊಂದ ಕ್ರೂರಿ ಶಿಕ್ಷಕ

ಗದಗ : ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಮನಬಂದಂತೆ ಹೊಡೆದು ಮೃತಪಟ್ಟಿರುವ ಘಟನೆ ನಡೆದಿದೆ. ಇದೀಗ ಪ್ರಕರಣದ ಆರೋಪಿ ರಕ್ಕಸ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹದಗಿ ಶಾಲೆಯ ಅತಿಥಿ ಶಿಕ್ಷಕನಾಗಿರುವ ಮುತ್ತಪ್ಪ ಹಡಗಲಿ ಎಂಬಾತ 9 ವರ್ಷದ ಭರತ್ ಬಾರಕೇರಿ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದು, ಗಂಭೀರ ಗಾಯವಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಸಲಾಕೆಯಿಂದ ಹೊಡೆದು ಶಾಲಾ ಕಟ್ಟಡದಿಂದ ತಳ್ಳಿ ನೀಚ ಕೃತ್ಯ ಎಸಗಿದ್ದನು ಎಂದು ಹೇಳಲಾಗುತ್ತಿದೆ.

ಭರತ್ ತಾಯಿ ಗೌರಿ (ಹೆಸರು ಬದಲಾಯಿಸಲಾಗಿದೆ) ಕೂಡ ಅದೇ ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದರು. ಆಕೆಯ ಮೇಲೂ ಈತ ಹಲ್ಲೆ ಮಾಡಿದ್ದಾನೆ. ಈ ಪರಿಣಾಮವಾಗಿ ಅವರಿಗೂ ಗಂಭೀರ ಗಾಯವಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಮುತ್ತಪ್ಪ ಹಡಗಲಿಯನ್ನು ನರಗುಂದ ಪಕ್ಕದ ರೋಣ ಕ್ರಾಸಿನಲ್ಲಿ ಬಂಧಿಸಲಾಗಿದೆ. ಕೊಲೆ ಮಾಡಿ ಪರಾರಿಯಾದ ಆತನನ್ನು ಬಂಧಿಸಲು ಡಿವೈಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ.

 

ಕೊಲೆಯ ಹಿಂದಿನ ಕಾರಣವೇನು?
ಬಾಲಕನ ತಾಯಿ ಗೌರಿ ಮತ್ತು ಮುತ್ತಪ್ಪ ಒಂದೇ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ್ದರು. ಗೌರಿ ಅವರಿಗೆ ಕೆಲಸ ಸಿಗಲು ಮುತ್ತಪ್ಪನೂ ನೆರವು ನೀಡಿದ್ದ ಎನ್ನಲಾಗಿದೆ.

ಈ ನಡುವೆ, ಎರಡು ದಿನದ ಹಿಂದೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಹ ಶಿಕ್ಷಕರೊಬ್ಬರ ಜೊತೆ ಗೌರಿ ಮಾತನಾಡಿದ್ದರು ಎಂಬುದನ್ನೇ ತಲೆಗೆ ಹಚ್ಚಿಕೊಂಡು, ಹೊಟ್ಟೆಕಿಚ್ಚುಪಟ್ಟುಕೊಂಡಿದ್ದ ಎನ್ನಲಾಗಿದೆ.

ಅದರ ಪರಿಣಾಮವಾಗಿ ಭರತ್‌ನಿಗೆ ಹೊಡೆದದ್ದು ಎನ್ನಲಾಗಿದೆ. ಆದರೆ, ಬುದ್ಧಿ ಸ್ಥಿಮಿತವನ್ನೇ ಕಳೆದುಕೊಂಡು ರಾಕ್ಷಸನೇ ಆದ ಆತ ಬಾಲಕನನ್ನು ಕೊಂದೇ ಬಿಟ್ಟಿದ್ದಾನೆ. ಅನುಮಾನದ ಹುತ್ತ ಬೆಳಸಿಕೊಂಡು, ಮಗುವನ್ನು ಕೊಂದು ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ ಈತನ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *