ಹಿರಿಯ ಚಿಂತಕ, ವಿಮರ್ಶಕ, ಹೋರಾಟಗಾರ ಜಿ.ರಾಜಶೇಖರ್ ನಿಧನ

ಉಡುಪಿ: ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಿ.ರಾಜಶೇಖರ ಬುಧವಾರ ರಾತ್ರಿ 11 ಕ್ಕೆ ನಗರದ ಆದರ್ಶ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಜಿ.ರಾಜಶೇಖರ ಅವರಿಗೆ ಹಲವು ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಜಿ.ರಾಜಶೇಖರ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 8 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಹತ್ತು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಿ.ರಾಜಶೇಖರ 2019ರಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟುಬಿದ್ದಿತ್ತು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ ಎಂಬ ಅಪರೂಪದ ಪಾರ್ಕಿನ್‌ಸನ್ಸ್‌ ಕಾಯಿಲೆ ಇರುವುದು ದೃಢಪಟ್ಟಿತ್ತು. ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಂತ ಹಂತವಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದರು. ದೇಹದ ಭಾಗಗಳು ಸ್ವನಿಯಂತ್ರಣ ಕಳೆದುಕೊಂಡಿದ್ದವು.

ರಾಜಶೇಖರ ಅವರು ಎಡಪಂಥೀಯ ಚಿಂತಕರಾಗಿದ್ದರು, ಸಾಮಾಜಿಕ ಹೋರಾಟಗಾರರಾಗಿ ಜನಪರ ಚಳುವಳಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಕರಾವಳಿಯ ಕೋಮುವಾದದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದಲ್ಲದೆ, ಕೋಮು ಗಲಭೆಗಳು ನಡೆದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಸತ್ಯಶೋಧನಾ ವರದಿಗಳನ್ನು ಪ್ರಕಟಿಸಿದ್ದರು.

ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ)ಮುಂತಾದ ಕೃತಿಗಳನ್ನು ಬರೆದಿದ್ದಾರೆ.

ಜಿ.ರಾಜಶೇಖರ ಅವರ ಬಹುವಚನ ಭಾರತ ಕೃತಿಗೆ 2015ರ ಸಾಲಿನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಕೂಡ ಲಭಿಸಿತ್ತು, ಆದರೆ ಅದನ್ನು ಅವರು ಸ್ವೀಕರಿಸಲು ನಿರಾಕರಿಸಿದ್ದರು.ಈಗ ಅವರ ನಿಧನಕ್ಕೆ ಹಲವು ಗಣ್ಯ ವ್ಯಕ್ತಿಗಳು ತೀವ್ರ ಸಂತಾಪಗಳನ್ನು ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *