ಜಿ.ಎನ್‌.ನಾಗರಾಜ್‌ ಅವರಿಗೆ 2021ನೇ ಸಾಲಿನ ಇಂಡುವಾಳು ಹೊನ್ನಯ್ಯ ಪ್ರಶಸ್ತಿ

ಮಂಡ್ಯ:  ದೇವಮ್ಮ ಮತ್ತು ಇಂಡುವಾಳು ಎಚ್.ಹೊನ್ನಯ್ಯ ಹೆಸರಿನಲ್ಲಿ ಮಂಡ್ಯದ ಜನದನಿ ಸಾಂಸ್ಕೃತಿಕ ಟ್ರಸ್ಟ್‌ನ ನೀಡುವ 2021ನೇ ಸಾಲಿನ ಸಮಾಜ ಸೇವಾ ಪ್ರಶಸ್ತಿಗೆ ಜನಪರ ಹೋರಾಟಗಳು, ವಿಶೇಷವಾಗಿ ರೈತ-ಕೂಲಿಕಾರರ ಹೋರಾಟಗಳಲ್ಲಿ ದಶಕಗಳಿಂದಲೂ ತೊಡಗಿಸಿಕೊಂಡಿರುವ ಜಿ.ಎನ್‌.ನಾಗರಾಜ್‌ ಅವರಿಗೆ ಕೊಡಲಾಗುತ್ತದೆ.

ಕರ್ನಾಟಕದ ಪ್ರಸಿದ್ಧ ರೈತ ಹೋರಾಟವಾದ ಇರ್ವಿನ್ ನಾಲಾ ಹೋರಾಟದ ಮುಖ್ಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಇಂಡುವಾಳು ಹೊನ್ನಯ್ಯನವರ ಹೆಸರಿನಲ್ಲಿ ಸಮಾಜಸೇವಾ ಪ್ರಶಸ್ತಿ ನೀಡಲಾಗುತ್ತಿದೆ. ಹೊನ್ನಯ್ಯನವರು ವಿಧವೆಯನ್ನು ಮದುವೆಯಾದ ಸಮಾಜ ಸುಧಾರಕರು, ಮಂಡ್ಯ ಕರ್ನಾಟಕ ಸಂಘದ ಸ್ಥಾಪಕರು. ಮೊದಲ ಸಹಕಾರಿ ಸಂಘವನ್ನು ಸ್ಥಾಪಿಸಿದ ಧುರೀಣರು ಆಗಿದ್ದವರು.

ಒಂದು ಬದ್ಧತೆಯನ್ನಿರಿಸಿ ಸಿದ್ಧಾಂತವನ್ನಪ್ಪಿ ಬದುಕನ್ನು ಅದಕ್ಕಾಗಿ ಪುಡುಪಾಗಿಡುವುದು ಅಪರೂಪದ ಸಂಗತಿ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಜಿ ಎನ್‌ ನಾಗರಾಜ್‌ ಅವರು ಸಹ ಒಬ್ಬರು. ಇದ್ದ ಉದ್ಯೋಗ ಬಿಟ್ಟು ಇಡೀ ಜೀವನವನ್ನು ನಿರಂತರವಾಗಿ ಹೋರಾಟ ಮಾಡುತ್ತಿರುವವರು.

ಮೂಲತಃ ತುಮಕೂರಿನ ಗೂಳೂರಿನವರಾದ ಜಿ ಎನ್‌ ನಾಗರಾಜ್‌ ಶಾಲಾ ದಿನಗಳಲ್ಲಿಯೇ ಕುಮಾರವ್ಯಾಸ ಹೆಚ್ಚು ಓದುವ ಮೂಲಕ ಸಾಹಿತ್ಯಾಭಿರುಚಿ  ಬೆಳೆಸಿಕೊಂಡವರು. ಬೆಂಗಳೂರಿನ ನ್ಯಾಷನಲ್‌ ಹೈಸ್ಕೂಲು ಹಾಗೂ ಕಾಲೇಜಿನಲ್ಲಿ ಓದಿ ಪ್ರಸಿದ್ಧ ವಿಚಾರವಾದಿ, ಶಿಕ್ಷಣವೇತ್ತ ಡಾ.ಎಚ್‌.ನರಸಿಂಹಯ್ಯ ಅವರ ವಿದ್ಯಾರ್ಥಿಯಾಗಿ ಒಡನಾಡಿದವರು.

ಆಸಿಸ್ಟೆಂಟ್‌ ಕಮಿಶನರ್‌ ದರ್ಜೆಯ ಸಹಾಯಕ ಕೃಷಿ ನಿರ್ದೇಶಕ ಹುದ್ದೆಗೆ ಮೊದಲಸ್ಥಾನದಲ್ಲಿ ನೇರ ನೇಮಕಾತಿ ಹೊಂದಿದವರು. ಗುಂಡೂರಾವ್‌ ಸರ್ಕಾರ ಗುಂಡು ಹಾರಿಸಿ ನೂರಾರು ರೈತರ ಹತ್ಯೆಗೆ ಕಾರಣವಾದುದನ್ನು ಪ್ರತಿಭಟಿಸಿ ಉಪನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿ ಕರ್ನಾಟಕ ಪ್ರಾಂತ ರೈತ ಸಂಘದ ಮೂಲಕ ನರಗುಂದ ನವಲಗುಂದ ರೈತ ಚಳುವಳಿಗೆ ಧುಮುಕಿದರು.

ಕಾವೇರಿ, ಕೃಷ್ಣ ನದೀ ವಿವಾದಗಳ ಸಂಬಂಧಿತ ಅಧಿಕಾರಯುತವಾಗಿ ಮಾತನಾಡಬಲ್ಲ ಜ್ಞಾನವುಳ್ಳವರು. ರೈತ ಹೋರಾಟಗಳಲ್ಲಿ ಮುಂದಾಗಿ ಜೈಲ್‌ಭರೋ ಆಂದೋಲನ, ರಾಜಭವನ ಮುತ್ತಿಗೆ ನಡೆಸಿದ್ದಾರೆ. ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕೃಷಿ ಕೂಲಿಕಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ʻಐಕ್ಯರಂಗʼ ವಾರ ಪತ್ರಿಕೆಯ ಉಪಸಂಪಾದಕರಾಗಿ, ಸಂಪಾದಕರಾಗಿ ನೂರಾರು ಲೇಖನಗಳು, ಸಂಪಾದಕೀಯಗಳನ್ನು ಬರೆದಿದ್ದಾರೆ. ಅಲ್ಲದೆ ಅವರು ಮಹತ್ವದ ಸಂಶೋಧಕರೂ ಸಹ ʻನಿಜ ರಾಮಾಯಣದ ಅನ್ವೇಷಣೆʼ ಜಾತಿ ಬಂದು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರಧರ್ಮ? ಎಂಬ ಮೂರು ಮಹತ್ವದ ಕೃತಿಗಳು ಇತ್ತೀಚಿಗೆ ಹೊರಬಂದಿವೆ.

ಪ್ರಶಸ್ತಿಯು 10,000/- ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ‌ ಸಮಾರಂಭ ಆಗಸ್ಟ್‌ 31, 2021ರಂದು  ಮಂಡ್ಯ ಕರ್ನಾಟಕ ಸಂಘದ ಕುವೆಂಪು ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *