ಸಿಪಿಐ(ಎಂ) ನಾಯಕ, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ನಿಧನ

ಬೆಂಗಳೂರು :ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ. ಬಯ್ಯಾರೆಡ್ಡಿ ಇಂದು ಬೆಳಗ್ಗೆ 3ಗಂಟೆಗೆ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ದೀರ್ಘಕಾಲ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದ ಅವರು ಕಳೆದೊಂದು ವಾರದಿಂದ ನಿಗಾಘಟಕದಲ್ಲಿ ಇದ್ದರು. ವೈದ್ಯರ ಚಿಕಿತ್ಸೆಗೆ ಆರಂಭದಲ್ಲಿ ಸ್ಪಂದಿಸಿದ್ದ ಅವರು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಜನವರಿ 2,2025 ರಂದು ಮತ್ತೆ ಐಸಿಯುಗೆ ಶಿಫ್ಟಾದ ನಂತರ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಇವರ ಪಾರ್ಥೀವ ಶರೀರವನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಹಾಲಕ್ಷ್ಮಿ ಲೇ ಔಟ್ ನಲ್ಲಿರುವ ಸಿಪಿಐ(ಎಂ) ಪಕ್ಷದ ರಾಜ್ಯ ಕಚೇರಿ ಇಎಂಎಸ್ ಭವನದಲ್ಲಿ ಅಂತಿಮ‌ ದರ್ಶನಕ್ಕೆ ಇಡಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ತಿಳಿಸಿದೆ.

ನಾಳೆ ಬೆಳಗ್ಗೆ 10 ಗಂಟೆಗೆ ಚಿಂತಾಮಣಿ ತಾಲ್ಲೂಕಿನ ಅವರ ಸ್ವಗ್ರಾಮ ಗಡಿಗವಾರಹಳ್ಳಿಯಲ್ಲಿ  ಅಂತ್ಯಕ್ರಿಯೆ ನಡೆಯಲಿದೆ.

ಜನಚಳುವಳಲ್ಲಿ ಐದು ದಶಕಗಳ ಸೇವೆ : ಜಿ.ಸಿ.ಬಯ್ಯಾರೆಡ್ಡಿಯವರು ಜನಪರ ಚಳವಳಿಯಲ್ಲಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1981ರಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಮೂಲಕ ಸಾರ್ವಜನಿಕ ರಂಗ ಪ್ರವೇಶಿಸಿದ ಅವರು ಅವಿಭಜಿತ ಕೋಲಾರ ಜಿಲ್ಲೆಯ SFI ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಕೋಲಾರದಲ್ಲಿ ವಿದ್ಯಾರ್ಥಿ ಚಳವಳಿ ಬಲಗೊಳಿಸಿದ್ದರು. 1987ರಲ್ಲಿ ಕಲಬುರ್ಗಿಯಲ್ಲಿ ನಡೆದ SFI ರಾಜ್ಯ ಸಮ್ಮೇಳನದಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1994ರ ವರೆಗೆ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಸ್ ಪಾಸ್ ರದ್ದತಿ ವಿರುದ್ದ, ಐಟಿಐ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ದ ಸಾವಿರಾರು ವಿದ್ಯಾರ್ಥಿಗಳನ್ನು ಬೀದಿಗಿಳಿಸಿದ್ದರು.

1993 ರಿಂದ ಚಿಂತಾಮಣಿಯಲ್ಲಿ ಪ್ರಾಂತರೈತ ಸಂಘದ ಕಾರ್ಯಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಿದರು. 2000 ರಿಂದ 2013 ರ ವರೆಗೆ ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2017ರಿಂದ ಇಲ್ಲಿಯವರೆಗೆ ರಾಜ್ಯಾಧ್ಯಕ್ಷರಾಗಿ ಅನೇಕ ರೈತ ಹೋರಾಟಗಳನ್ನು ಸಂಘಟಿಸಿದ್ದರು.

ಅವಿಭಜಿತ ಕೋಲಾರ ಜಿಲ್ಲೆಯ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಪಾದಯಾತ್ರೆ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚನ್ನರಾಯಪಟ್ಟಣದ ರೈತರ ಭೂ ಸ್ವಾಧೀನದ ವಿರುದ್ಧ ಪ್ರಭಲ ಹೋರಾಟವನ್ನು ಬಯ್ಯಾರೆಡ್ಡಿಯವರು ಸಂಘಟಿಸಿದ್ದರು. ಈ ಹೋರಾಟವು ಈಗ 1000 ದಿನಗಳನ್ನು ಪೊರೈಸಿದೆ. ಕರ್ನಾಟಕದ ರೈತ, ಕಾರ್ಮಿಕ ಚಳುವಳಿಯ ಐಕ್ಯತೆಗಾಗಿ ಶ್ರಮ ಹಾಕಿದ್ದರು. ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಹೈನುಗಾರಿ, ಕುಕ್ಕುಟೋಧ್ಯಮ, ರೇಶ್ಮೆ ಬೆಳೆಗಾರರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1983 ರಲ್ಲಿ ಸಿಪಿಐ(ಎಂ)ಪಕ್ಷದ ಸದಸ್ಯತ್ವ ಪಡೆದ ಅವರು, 1991ರಿಂದ ಇಲ್ಲಿವರೆಗೆ ರಾಜ್ಯ ಸಮಿತಿ ಸದಸ್ಯರಾಗಿ , ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಅವರು ಸಿಪಿಐ(ಎಂ) ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *