ಇಂಧನ ಬೆಲೆ ಏರಿಕೆ ಖಂಡಿಸಿ ಸಾಂಕೇತಿಕ ಪ್ರತಿಭಟನೆಗೆ ಕಾಂಗ್ರೆಸ್‌ ಕರೆ

ನವದೆಹಲಿ: ಇಂಧನ ಉತ್ಪನ್ನಗಳಾದ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ವಿಪರೀತವಾಗಿ ಏರಿಕೆಯಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಜೂನ್ 11ಕ್ಕೆ ದೇಶದೆಲ್ಲೆಡೆ ಸಾಂಕೇತಿಕ ಪ್ರತಿಭಟನೆಗೆ ಕರೆ ನೀಡಿದೆ.

ಪೆಟ್ರೋಲ್ ಬೆಲೆ ಗಗನಕ್ಕೇರಿದರೆ, ಅದರಿಂದ ಜೀವನಾವಶ್ಯಕ ಎಲ್ಲಾ ವಸ್ತುಗಳ ಸಹ ಬೆಲೆಗಳು ಹೆಚ್ಚಳವಾಗಲಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆಗಳು ₹100ಕ್ಕೂ ಹೆಚ್ಚಾಗಿರುವುದರಿಂದ ಕೇಂದ್ರ ಸರಕಾರದ ಸಾರ್ವಜನಿಕ ಲೂಟಿ ಮತ್ತು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷವು ಹೋರಾಟ ನಡೆಸಲು ಮುಂದಾಗಿದೆ.

ಇದನ್ನು ಓದಿ: ಕರ್ನಾಟಕದಲ್ಲೂ ಶತಕ ಬಾರಿಸಿದ ಪೆಟ್ರೋಲ್

ಕಾಂಗ್ರೆಸ್‌ ಪಕ್ಷದ ಎಲ್ಲ ರಾಜ್ಯ ಘಟಕಗಳಿಗೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಸೂಚನೆ ನೀಡಿದೆ. ತುರ್ತಾಗಿ ಪ್ರತಿಭಟಿಸಿ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ರಾಜ್ಯ ಘಟಕಗಳಿಗೆ ಸೂಚಿಸಿದ್ದಾರೆ.

ಸಾಂಕ್ರಾಮಿಕ ರೋಗ, ಆರ್ಥಿಕ ಕುಸಿತ, ನಿರುದ್ಯೋಗ, ವೇತನ ಕಡಿತ, ಉದ್ಯೋಗ ಕಡಿತದಿಂದಾಗಿ ಸಂಕಷ್ಟದಲ್ಲಿರುವ ಜನರ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಅನಿಯಂತ್ರಿತ ಏರಿಕೆಯು ಬಲವಾದ ಹೊಡೆತ ನೀಡಿದೆ. ಈ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಲು ಅಭಿಯಾನ ನಡೆಸುವಂತೆಯೂ ಸೂಚಿಸಿದ್ದಾರೆ.

ಇದನ್ನು ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್‍ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟಿಸಲು ಸಿಪಿಐ(ಎಂ) ಕರೆ

ಕಳೆದ 13 ತಿಂಗಳಿನಿಂದಲೂ ಇಂಧನ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದು, ಈಗ ಗರಿಷ್ಠ ಮಟ್ಟವನ್ನು ತಲುಪಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ, ಮೇ 4 ರಿಂದ ಇದುವರೆಗೂ ಒಟ್ಟು 20 ಬಾರಿ ಪೆಟ್ರೋಲ್ ದರವನ್ನು ಏರಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸುತ್ತಾ, ಕೋವಿಡ್ ನಿರ್ವಹಣೆಯಲ್ಲಿಯೂ ಪದೇ ಪದೇ ಸರಕಾರ ಎಡವುತ್ತಿರುವ ಬಗ್ಗೆಯೂ ಟೀಕಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಇಂಧನ ಬೆಲೆ ಏರಿಕೆಯನ್ನು ಸಹ ಖಂಡಿಸುತ್ತಲೇ ಬಂದಿದೆ. ಸಾಂಕೇತಿಕ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಭಾಗವಹಿಸಲು ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *