ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸೂರಂ ರಾಮಯ್ಯ ನಿಧನ

ಬೆಂಗಳೂರು: 103 ವರ್ಷಗಳ ಸಾರ್ಥಕ ಜೀವನ ನಡೆಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಶ್ರೀ ಸೂ ರಂ ರಾಮಯ್ಯನವರು ಇಂದು ಬೆಳಿಗ್ಗೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ 3:30 ಕ್ಕೆ  ವಯೋಸಹಜ ಕಾರಣಗಳಿಂದ ನಮ್ಮೆಲ್ಲರನ್ನು ಅಗಲಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಅವರು ಗಾಂಧೀಜಿಯವರ ವಿಚಾರಧಾರೆ ಮತ್ತು ಅವರ ಕರೆಗಳಿಗೆ ಆಕರ್ಷಿತರಾಗಿದ್ದರು.  ವಿದ್ಯಾಭ್ಯಾಸ ಮಾಡುವಾಗಲೇ ಚಳುವಳಿಯಲ್ಲಿ ಭಾಗವಹಿಸಿ ಸೆರೆವಾಸವನ್ನೂ ಅನುಭವಿಸಿದ್ದರು. ಸ್ವಾತಂತ್ರ್ಯಾನಂತರ ನಡೆದ ಎರಡನೆಯ ವಿಧಾನಸಭಾ ಚುನಾವಣೆಯಲ್ಲಿ 1969-72 ರ ಅವಧಿಗೆ ಹೊಸಕೋಟೆ- ದೇವನಹಳ್ಳಿ ಜಂಟಿ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದರು. ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸ್ವಾತಂತ್ರ್ಯ ನಂತರದ ದಿನಗಳಲ್ಲಿ  ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರು ಹೊಸಕೋಟೆ ಪ್ರದೇಶದಲ್ಲಿ ನಡೆಯುತ್ತಿದ್ದ ಪ್ರಜಾಸತ್ತಾತ್ಮಕ ಜನ ಚಳುವಳಿಗಳಲ್ಲಿ ವಿಶೇಷವಾಗಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಡೆದ ರೈತರ ಹೋರಾಟಗಳಲ್ಲಿ, ಕಾರ್ಮಿಕರ ಹೋರಾಟಗಳಲ್ಲಿ ಹಾಗೂ ಸಿಪಿಐ(ಎಂ) ಪಕ್ಷದ ಕಾರ್ಯಕ್ರಮ ಗಳಲ್ಲಿ  ಭಾಗವಹಿಸುತ್ತಿದ್ದರು.

ನೂತನ ವಿದ್ಯುತ್ ಕಾಯ್ದೆ ಮತ್ತು ಮೀಟರಿಕರಣದ ವಿರುದ್ಧದ ಪ್ರಬಲ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಬೆಂಗಳೂರು ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಸಾಮಾಜಿಕ ಸಮಸ್ಯೆಗಳು, ಭ್ರಷ್ಟಾಚಾರದ ವಿರುದ್ಧವಾಗಿಯೂ ನಡೆದ ಹಲವು ಹೋರಾಟಗಳಲ್ಲಿ ಮತ್ತು ಹೋರಾಟ ರೂಪಿಸುವಲ್ಲಿ ತಮ್ಮನ್ನು  ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಶಿಕ್ಷಣ ಪ್ರೇಮಿಯಾಗಿದ್ದ ಅವರು ಸೂಲಿಬೆಲೆ ಒಳಗೊಂಡು ಆ ಪ್ರದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಶಿಕ್ಷಣವನ್ನು ನೀಡಿ ಸ್ವಾಭಿಮಾನ, ದೇಶಾಭಿಮಾನ ಮೂಡಿಸಲು ಶ್ರಮಿಸಿದ್ದರು. ಅದಕ್ಕಾಗಿ ವಿನಾಯಕ ವಿದ್ಯಾ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಶ್ರಮಿಸು ತ್ತಾ ಬಂದಿದ್ದರು.

ಸೂರಂ ರಾಮಯ್ಯನವರ ಅಗಲಿಕೆ ಯು ಅಪರಾನಷ್ಟವನ್ನುಂಟು ಮಾಡಿದೆ.  ಸೂಲಿಬೆಲೆಯಲ್ಲಿ ಅವರ ಪಾರ್ಥಿವ ಶರೀರ ಕೋವಿಡ್ ನಿಯಮಗಳನ್ನು ಲಕ್ಷಿಸಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ನಾಳೆ 19.6.2021 ರಂದು ಬೆಳಿಗ್ಗೆ ಸೂಲಿಬೆಲೆಯಲ್ಲಿ ಅಂತ್ಯಸಂಸ್ಕಾರ ನೆರವೇರುವುದಾಗಿ  ತಿಳಿದುಬಂದಿದೆ. ಅವರಿಗೆ ಐದು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ, ಮೊಮ್ಮಕ್ಕಳು ಇದ್ದಾರೆ.

ಇವರ ಜೊತೆಗಿನ ಅನುಭವಗಳನ್ನು ಜನಪರ ಹೋರಾಟಗಾರ ಎಸ್‌ ವೈ ಗುರುಶಾಂತ್‌ ಜನಶಕ್ತಿ ಮೀಡಿಯಾ ಜೊತೆ ಹಂಚಿಕೊಂಡಿದ್ದು, “ನಾನು ಹೊಸಕೋಟೆಯಲ್ಲಿ ಇದ್ದ 1995 ನೇ ಇಸವಿಯಿಂದ 2006 ರ ವರೆಗಿನ ಅವಧಿಯಲ್ಲಿ ಡಿ.ವೈ.ಎಫ್.ಐ, ಎಸ್.ಎಫ್.ಐ. ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಮತ್ತು ಸಿಪಿಐ(ಎಂ) ಪಕ್ಷದ ಅನೇಕ ಹೋರಾಟಗಳು, ಕಾರ್ಯಕ್ರಮಗಳಲ್ಲಿ ಮತ್ತು ಅತ್ಯಂತ ಸಂದಿಗ್ಧ ಹಾಗೂ ಸಂಕೀರ್ಣವಾದ ಸವಾಲುಗಳ ಎದುರಿನಲ್ಲಿ ನಡೆದ ಹೋರಾಟಗಳಲ್ಲಿ ಭಾಗವಹಿಸಿ ಸ್ಪೂರ್ತಿ ತುಂಬಿದ್ದು ಸ್ಮರಣೀಯವಾಗಿದೆ .

ಹೊಸಕೋಟೆ ತಾಲೂಕು ನಲ್ಲಿ ಜೋಡಿ ಇನಾಮ್ತಿ ಗೆ ಪ್ರತಿರೋಧವಾಗಿ ನಡೆದ ಚಳುವಳಿಗಳನ್ನು ಒಳಗೊಂಡಂತೆ ನಿರಂತರ ಎಡ ಚಳುವಳಿಗಳು ಬೆಳೆದ ಪ್ರದೇಶವೂ ಆಗಿತ್ತು.ಅಂದಿನ ದಿನಗಳಲ್ಲಿ ಹೊಸಕೋಟೆ ತಾಲೂಕು ರಾಜಕೀಯ ಹಿಂಸಾಚಾರ ಮತ್ತು ದಬ್ಬಾಳಿಕೆಗಳಿಗೆ ಕುಖ್ಯಾತಿ ಆಗಿದ್ದನ್ನು ಅಂತಹ ಸನ್ನಿವೇಶದಲ್ಲಿ ಜನ ಚಳುವಳಿಗಳು ಮುನ್ನಡೆಯಲು ಸೂರಂ ರಾಮಯ್ಯನವರ ಭಾಗವಹಿಸುವಿಕೆ, ನೇತೃತ್ವಗಳು ಆತ್ಮ ವಿಶ್ವಾಸ, ಸ್ಪೂರ್ತಿಯನ್ನು ತುಂಬುತ್ತಿದ್ದವು  ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಸೂರಂ ರಾಮಯ್ಯನವರ ಅಗಲಿಕೆ ಸ್ವಾತಂತ್ರ್ಯ ಸಂಗ್ರಾಮದ ಒಂದು ಪ್ರಮುಖ ಕೊಂಡಿಯನ್ನು, ಜನಸ್ನೇಹಿಯನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪಗಳನ್ನು ಸೂಚಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *