ಉಚಿತ ಬೆಳಕು ಸುಸ್ಥಿರ ಜೀವನ : ಸಚಿವ ಈಶ್ವರ್‌ ಖಂಡ್ರೆ

ಬೀದರ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಯೋಜನೆಗೆ ಇಂದು ಬೀದರ್ ಜಿಲ್ಲೆಯಲ್ಲಿ ವಿದ್ಯುತ್ ಬಳಕೆದಾರರಿಗೆ ಸಾಂಕೇತಿಕವಾಗಿ ಶೂನ್ಯ್ ಬಿಲ್ ನೀಡುವ ಮೂಲಕ ಅಧಿಕೃತವಾಗಿ ಸಚಿವ ಈಶ್ವರ್‌ ಖಂಡ್ರೆ ಚಾಲನೆ ನೀಡಿದರು.

ಬೀದರ್ ನಲ್ಲಿ ‘ಗೃಹ ಜ್ಯೋತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 5 ರಂದು ಕಲಬುರಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದು, ಈಗ ಬೀದರ್ ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿ ನಮ್ಮ ಸರ್ಕಾರದ ಧ್ಯೇಯ. ಜನಸಾಮಾನ್ಯರ ಮೇಲಿನ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡಲು ನಾವು ಕೊಟ್ಟ ಮಾತಿನಂತೆ 200 ಯುನಿಟ್‌ವರೆಗೂ ವಿದ್ಯುತ್ ಬಳಸುವವರಿಗೆ ಈ (ಆಗಸ್ಟ್) ತಿಂಗಳಿನಿಂದ ಶೂನ್ಯ ಬಿಲ್ ಬರಲಿದೆ ಆ ಮೂಲಕ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ರಾಜ್ಯದ ಜನತೆಯ ಪಾಲಿಗೆ ನಮ್ಮ ಸರ್ಕಾರದ ಗೃಹಜ್ಯೋತಿ ಯೋಜನೆಯು ವರದಾನವಾಗಲಿದೆ. ‘ಗೃಹ ಜ್ಯೋತಿ’ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದರು.

ಇದನ್ನೂ ಓದಿ:ಗೃಹ ಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಒಟ್ಟು 3,67,871 ಜನರು ವಿದ್ಯುತ್ ಸಂಪರ್ಕ ಹೊಂದಿದ್ದು, ಅವರಲ್ಲಿ ಒಟ್ಟು 2,99,628 ಮಂದಿ ಗೃಹ ಜ್ಯೋತಿ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಶೇ.81ರಷ್ಟು ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಇದರಂತೆ ನಮ್ಮ ಪ್ರಣಾಳಿಕೆಯಲ್ಲಿ ಹೇಳಲಾದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುತ್ತಿದೆ. ನಮ್ಮ ಸರ್ಕಾರವು ಮಾತಿನಂತೆ ನಡೆಯುತ್ತಿದೆ ಎಂದು ತಿಳಿಸಿದರು. ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ರಾಜ್ಯದ ಶೇ.80 ರಿಂದ 90 ರಷ್ಟು ಜನರು ಪಡೆಯುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಬ್ಬರೂ ಸಚಿವರು ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಿದರು. ಈ ಸಂದರ್ಭದಲ್ಲಿ ಎಂಎಲ್‌ಸಿಗಳಾದ ಅರವಿಂದಕುಮಾರ ಅರಳಿ, ಭೀಮರಾವ್‌ ಬಿ ಪಾಟೀಲ್‌, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌, ಜಿಸ್ಕಾಂ ಕಲಬುರಗಿ ವ್ಯವಸ್ಥಾಪಕ ನಿರ್ದೇಶಕ ಪಾಂಡವೆ ರಾಹುಲ್‌ ತುಕಾರಾಂ, ತಾಂತ್ರಿಕ ನಿರ್ದೇಶಕ ಹಾಗೂ ಮುಖ್ಯ ಎಂಜಿನಿಯರ್‌ (ಜೆಸ್ಕಾಂ) ಆರ್‌ಡಿ ಚಂದ್ರಶೇಖರ್‌, ಬೀದರ್‌ ಇಇ ರಮೇಶ್‌ ಪಾಟೀಲ ಹಾಗೂ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *