ಬಾಡಿಗೆದಾರರಿಗೂ ವಿದ್ಯುತ್​ ಉಚಿತ- ಬಾಡಿಗೆದಾರರಿಗೆ ಇಲ್ಲಿದೆ ಮಹತ್ವ ಮಾಹಿತಿ

ಬೆಂಗಳೂರು :  ಗೃಹಜ್ಯೋತಿ ಯೋಜನೆಯ ಸೌಲಭ್ಯದ ಲಾಭ ಬಾಡಿಗೆದಾರರು, ಲೀಸ್‌ದಾರರಿಗೂ ಕೂಡ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಆ ಮೂಲಕ ಯೋಜನೆ ಕುರಿತು ಕೇಳಿಬಂದಿರುವ ಹಲವಾರು ಗೊಂದಲಗಳಿಗೆ ತೆರೆ ಎಳೆದಿದೆ.

ಇಂಧನ ಸಚಿವ ಕೆ.ಜೆ.ಜಾರ್ಜ್, ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಸ್ವಂತಮನೆ, ಬಾಡಿಗೆ ಮನೆ, ಸರ್ಕಾರಿ ನೌಕರರು ಆದಾಯ ತೆರಿಗೆದಾರರು ಸೇರಿದಂತೆ ಯಾರೇ ಆದರೂ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಅವರಿಗೆ ಶುಲ್ಕ ವಿನಾಯಿತಿ ದೊರೆಯಲಿದೆ.ನೋಂದಣಿಗೆ ಸೇವಾ ಸಿಂಧು ಪೋರ್ಟಲ್‍ನಲ್ಲಿ ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ 5 ರಿಂದ 10 ಲಕ್ಷ ನೋಂದಣಿಯ ಧಾರಣ ಸಾಮಥ್ರ್ಯವನ್ನು ನಿಭಾಯಿಸಲು ಅನುಕೂಲವಾಗುವಂತೆ ಸರ್ವರನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.

ನೊಂದಣಿಗೆ ಫಲಾನುಭವಿಯ ಆಧಾರ್ ಸಂಖ್ಯೆ ಮತ್ತು ವಿದ್ಯುತ್ ಸಂಪರ್ಕದ ಆರ್‍ಆರ್ ನಂಬರ್ ಕಡ್ಡಾಯವಾಗಿದೆ. ಸ್ವಂತ ಮನೆಯಿರುವವರ ವಿಳಾಸ ಆಧಾರ್‍ನೊಂದಿಗೆ ಹಂಚಿಕೆಯಾಗುವುದರಿಂದ ಹೆಚ್ಚಿನ ದಾಖಲಾತಿಗಳ ಅಗತ್ಯ ಇರುವುದಿಲ್ಲ. ಬಾಡಿಗೆದಾರರು ಬಾಡಿಗೆ ಕರಾರು, ಬೋಗ್ಯ ಕರಾರು ಸೇರಿದಂತೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸಬೇಕಿದೆ. ಒಂದು ವೇಳೆ ಬಾಡಿಗೆ ಅಥವಾ ಬೋಗ್ಯ ಕರಾರು ಇಲ್ಲದೇ ಹೋದರೆ ಅದೇ ಆರ್‍ಆರ್ ಸಂಖ್ಯೆಯ ಮನೆಯಲ್ಲಿ ವಾಸವಿರುವುದನ್ನು ದೃಢಪಡಿಸಲು ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾಸ್‍ಪೋರ್ಟ್ ಸೇರಿದಂತೆ ಯಾವುದಾದರೂ ವಾಸ ದೃಢೀಕರಣ ದಾಖಲೆಯನ್ನು ಒದಗಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬಾಡಿಗೆದಾರರು ಆರ್‌ಆರ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡಬೇಕು, ಅಥವಾ ಮನೆ ಬಾಡಿಗೆ ಕರಾರು ಪತ್ರವನ್ನ ಅಪ್‌ಲೋಡ್‌ ಮಾಡಬಹುದು. ಇಲ್ಲದಿದ್ದರೆ ತಾವು ವಾಸ ಮಾಡುವ ಸ್ಥಳದ ವೋಟರ್‌ ಐಡಿ ಇದ್ದರೆ ಅದನ್ನೂ ಅಪ್‌ಲೋಡ್‌ ಮಾಡಬಹುದು. ಜೊತೆಗೆ ಡಿಎಲ್‌, ಪಾಸ್‌ಪೋರ್ಟ್‌, ರೇಷನ್‌ ಕಾರ್ಡ್‌ ಕೂಡಾ ನೀಡಬಹುದು. ಸೇವಾಸಿಂಧು ಪೋರ್ಟಲ್‌ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂತಾ ಸರ್ಕಾರ ಮಾಹಿತಿ ನೀಡಿದೆ.

ಜೂನ್ 15ರಿಂದ ಜುಲೈ 15ರೊಳಗೆ ಗ್ರಾಹಕರು ನೊಂದಣಿ ಮಾಡಿಕೊಳ್ಳಬಹುದು. ಸ್ವಂತ ಲ್ಯಾಪ್‍ಟಾಪ್, ಕಂಪ್ಯೂಟರ್, ಮೊಬೈಲ್ ಬಳಸಬಹುದು. ಒಂದು ವೇಳೆ ತಾಂತ್ರಿಕತೆಯ ಅನುಭವವಿಲ್ಲದಿದ್ದವರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಬೆಸ್ಕಾಂನಿಂದ ವಿಶೇಷ ಶಿಬಿರಗಳನ್ನು ಕೂಡ ಆಯೋಜನೆ ಮಾಡಲಾಗುತ್ತದೆ. ನೊಂದಣಿ ಪೂರ್ಣಗೊಂಡ ಬಳಿಕ ಎಸ್‍ಎಂಎಸ್ ಮತ್ತು ಇ-ಮೈಲ್ ಮೂಲಕ ಗ್ರಾಹಕರಿಗೆ ಸಂದೇಶ ರವಾನೆಯಾಗುತ್ತದೆ ಎಂದು ತಿಳಿಸಿದರು.

ಸರ್ಕಾರ ದಾಖಲಾತಿಯ ನೆಪದಲ್ಲಿ ಜನರು ಸೌಲಭ್ಯ ವಂಚಿತರಾಗುವುದನ್ನು ಬಯಸುವುದಿಲ್ಲ. ಆದಷ್ಟು ಸರಳ ವ್ಯವಸ್ಥೆಯನ್ನು ರೂಪಿಸಲು ಕ್ರಮ ಕೈಗೊಳ್ಳುತ್ತಿದೆ. ಹೊಸ ಸಂಪರ್ಕ ಪಡೆಯುವವರು ಮತ್ತು ಇತ್ತೀಚೆಗಷ್ಟೆ ಮನೆಬಾಡಿಗೆಗೆ ಬಂದವರಿಗೆ ವಾರ್ಷಿಕ ಸರಾಸರಿಯನ್ನು ಲೆಕ್ಕ ಹಾಕುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಒಂದೆರೆಡು ದಿನಗಳಲ್ಲೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು.

ಸಂಪುಟ ಸಭೆಯ ನಿರ್ಣಯದಂತೆ ವಾರ್ಷಿಕ ಬಳಕೆಯ ಸರಾಸರಿಯೊಂದಿಗೆ ಶೇ.10 ರಷ್ಟು ವಿದ್ಯುತ್ ಅನ್ನು ಹೆಚ್ಚು ಬಳಕೆಗೆ ಅನುಮತಿಸಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಒಂದು ವೇಳೆ ಮುಂದಿನ 12 ತಿಂಗಳೊಳಗೆ 200 ಯೂನಿಟ್‍ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದವರಾದರೆ ಅವರಿಗೆ ಮುಂದಿನ ವರ್ಷದಿಂದ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 2.16 ಕೋಟಿ ವಿದ್ಯುತ್ ಸಂಪರ್ಕಗಳಿವೆ. ಅದರಲ್ಲಿ 200 ಯೂನಿಟ್ ಒಳಗೆ ಬಳಕೆ ಮಾಡುವ ಗ್ರಾಹಕರ ಸಂಖ್ಯೆ 2.14 ಕೋಟಿಯಷ್ಟಿದೆ. ಗ್ರಾಹಕರು ಸರಾಸರಿಯಾಗಿ 53 ಯೂನಿಟ್ ಬಳಸುವ ಲೆಕ್ಕಾಚಾರಗಳಿವೆ. ಇದಕ್ಕಾಗಿ 14,852 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಗೃಹಜ್ಯೋತಿಯ ವಾರ್ಷಿಕ ವೆಚ್ಚ 13,000 ಕೋಟಿಯಷ್ಟಾಗಬಹುದು ಎಂದು ವಿವರಿಸಿದರು.

ಅರ್ಹ ಪ್ರಮಾಣದ ವಿದ್ಯುತ್ ಬಳಕೆ ಬಳಿಕ ಹೆಚ್ಚುವರಿ ಯೂನಿಟ್‍ಗಳಿಗೆ ಗ್ರಾಹಕರು ಹಣ ಪಾವತಿಸಬೇಕಿದೆ. ಈ ವೇಳೆ ನಿಗದಿತ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಗೃಹಜ್ಯೋತಿ ಯೋಜನೆಯಡಿ ಈಗಾಗಲೇ 200 ಯೂನಿಟ್‍ವರೆಗೆ ಶುಲ್ಕ ವಿನಾಯಿತಿ ನೀಡುವಾಗಲೇ ಫಿಕ್ಸೆಡ್ ಚಾರ್ಜಸ್ ಅನ್ನು ಮನ್ನಾ ಮಾಡಲಾಗಿದೆ. ಹಾಗಾಗಿ ಹೆಚ್ಚುವರಿ ಯೂನಿಟ್‍ಗೆ ಮತ್ತೆ ಫಿಕ್ಸೆಡ್ ಚಾರ್ಜ್ ವಸೂಲಿ ಮಾಡಲಾಗುವುದಿಲ್ಲ.

ಆದರೆ ಶೇ.9ರಷ್ಟು ಬಡ್ಡಿ ಹೆಚ್ಚುವರಿ ಯೂನಿಟ್‍ಗಳಿಗೆ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು. ವಿದ್ಯುತ್ ದರ ಪರಿಷ್ಕರಣೆಯಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಸರ್ಕಾರವೇ ಅದನ್ನು ಭರಿಸಲಿದೆ. 200 ಯೂನಿಟ್ ಬಳಕೆ ಮೀರಿದ 2 ಲಕ್ಷ ಗ್ರಾಹಕರಿದ್ದು ಅವರು ಶಕ್ತಿವಂತರಾಗಿದ್ದಾರೆ. ಅವರು ಶುಲ್ಕ ಪಾವತಿಸಬೇಕಾಗುತ್ತದೆ.

ಸರ್ಕಾರ ವಿದ್ಯುತ್ ಹೊರೆಯನ್ನು ಕಡಿಮೆ ಮಾಡಲು ದುಬಾರಿ ದರದ ಖರೀದಿಯ ಒಪ್ಪಂದಗಳನ್ನು ಪರಿಷ್ಕರಿಸುವುದು ವಿದೇಶಿ ಹಾಗೂ ದೇಶೀಯ ಕಲ್ಲಿದ್ದಲ್ಲನ್ನು ಮಿಶ್ರಣ ಮಾಡುವ ಮೂಲಕ ಉತ್ಪಾದನಾ ಇಂಧನದ ವೆಚ್ಚ ತಗ್ಗಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ.

Donate Janashakthi Media

Leave a Reply

Your email address will not be published. Required fields are marked *