ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಬಿಜೆಪಿ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಭವಾನಿ ರಾವ್ ಮೋರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಂಬಾ ಪರಿಚಯ ಇದ್ದಾರೆ. ಅವರ ಕಡೆಯಿಂದ ಡ್ಯಾನ್ಸ್ ಬಾರ್ ಪರವಾನಗಿ ಕೊಡಿಸುತ್ತೇನೆ. ಅಲ್ಲದೆ, ಸ್ಥಳೀಯ ಪೊಲೀಸರಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ರಾತ್ರಿ ಸಮಯದಲ್ಲಿ ಎಷ್ಟು ಹೊತ್ತಾದರೂ ವ್ಯಾಪಾರ ಮಾಡಿಕೊಳ್ಳಿ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ ಶಿವಮೊಗ್ಗದ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ಸುರೇಶ್ ರವರಿಂದ 1.20 ಕೋಟಿ ರೂ. ವಸೂಲಿ ಮಾಡಿದ್ದ. ನಂತರ ಆರೋಪಿ ಪರಾರಿಯಾಗಿದ್ದ.
ಸುರೇಶ್ ಕೊಟ್ಟ ದೂರಿನ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿ ಭವಾನಿ ರಾವ್ ಮೊರೆ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಈ ಹಿಂದೆ ಬಿಜೆಪಿ ಮುಖಂಡರ ಜೊತೆ ಗುರುತಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಬಿಜೆಪಿ ಹಿರಿಯ ನಾಯಕರಿಗೆ ಬೆದರಿಕೆ ಹಾಕಿದ್ದ. ಸದ್ಯ ವಂಚನೆ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕ ಆಗಿದ್ದ ಮೋರೆ ಸೌತ್ ಕೇಂದ್ರ ಮೂಲದ ಉದ್ಯಮಿಗೆ ವಂಚನೆ ಮಾಡಿದ್ದರು. ಕ್ಯಾಶ್ ಮೂಲಕ ಹಣ ಪಡೆದು ಕೆಲಸ ಮಾಡಿಕೊಟ್ಟಿಲ್ಲ, ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಗೃಹ ಸಚಿವರ ಆರಗ ಜ್ಞಾನೇಂದ್ರ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಈ ಹಿಂದೆ ಸಚಿವ ಶ್ರೀರಾಮುಲು ಹೆಸರು ಬಳಸಿಕೊಂಡು ವಂಚನೆ ಮಾಡಿದ್ದವರನ್ನು ಬಂಧಿಸಲಾಗಿತ್ತು. ಸಚಿವರ ಜತೆ ಇರುವ ಪೋಟೋಗಳನ್ನು ತೋರಿಸಿ, ಅವರ ಪಿಎ ಎಂದು ನಂಬಿಸಿ, ನಮಗೆ ಸಚಿವರ ಜತೆ ನಿಕಟ ಸಂಪರ್ಕ ಇದೆ ಎಂದು ವಂಚನೆ ಮಾಡುತ್ತಿರುವ ಪ್ರಕರಣಗಳು ಇದು ಹೊಸದೇನಲ್ಲ. ಈ ಪ್ರಕರಣದಲ್ಲಿ ಗೃಹಸಚಿವರ ಮಗನ ಹೆಸರನ್ನು ವಂಚಕ ಬಳಕೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಬೆಂಗಳೂರನ್ನು ಟಾರ್ಗೆಟ್ ಮಾಡಿಕೊಂಡು ತನ್ನ ಜಾಲ ಬೀಸಿದ್ದ. ಡ್ಯಾನ್ಸ್ ಬಾರ್ ಗೆ ಅನುಮತಿ ಕೊಡಿಸುವುದಾಗಿ ಇನ್ನಷ್ಟು ಜನರಿಂದ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದ್ದು ಸಿಸಿಬಿ ತನಿಖೆಯ ನಂತರ ಸತ್ಯಾಂಶಗಳು ಬಯಲಾಗಲಿವೆ.