ಫ್ರಾನ್ಸಿನ ‘ಎನ್.ಎಫ್‍.ಪಿ.’ ಆರ್ಥಿಕ  ಕಾರ್ಯಕ್ರಮ: ಬಂಡವಾಳಶಾಹಿ ಜಗತ್ತಿನಲ್ಲಿ ಹೊಸ ಗಾಳಿ

ಪ್ರೊ.ಪ್ರಭಾತ್ ಪಟ್ನಾಯಕ್

ಅನು: ಕೆ.ವಿ.

ಫ್ರಾನ್ಸಿನ್ಲಲ್ಲಿ ಉಗ್ರ ಬಲಪಂಥೀಯರ ಫ್ಯಾಸಿಸ್ಟ್ ಸವಾಲಿನ ಸಂದರ್ಭದಲ್ಲಿ ಎಡಪಂಥೀಯರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ‘ನವ ಜನಪ್ರಿಯ ರಂಗ’ (ಎನ್‍.ಎಫ್‍.ಪಿ.) ರಚಿಸಿರುವುದು ಸ್ವಾಗತಾರ್ಹ ಸಂಕೇತವಾಗಿದೆ. ಇನ್ನೂ ಹೆಚ್ಚು ಗಮನಾರ್ಹವಾದುದೆಂದರೆ,  ನವ-ಉದಾರವಾದವನ್ನು ಸಂಪೂರ್ಣವಾಗಿ ವಿರೋಧಿಸುವ ಮತ್ತು ಒಟ್ಟಾರೆಯಾಗಿ ಹೊಸ ಮತ್ತು ಉತ್ತೇಜನಕಾರಿ ದಾರಿಯನ್ನು ಹಿಡಿಯುವ ಒಂದು ಸರ್ವಸಾಮಾನ್ಯ ಆರ್ಥಿಕ ಕಾರ್ಯಕ್ರಮವನ್ನು  ರೂಪಿಸಿರುವುದು ಮತ್ತು ಅದನ್ನು ಈ ರಂಗದ  ಎಲ್ಲಾ ಘಟಕಗಳು ಸಮರ್ಥಿಸಿಕೊಳ್ಳುತ್ತಿರುವುದು; ವಿಶೇಷವಾಗಿ ಒಂದು ಮುಂದುವರೆದ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಇದು ಸಂಭವಿಸುತ್ತಿರುವುದು ಒಂದು  ಹೊಸ ಆರಂಭವನ್ನು ಸೂಚಿಸುತ್ತದೆ. ಕಾರ್ಯಕ್ರಮವು ಮಾಸಿಕ ಕನಿಷ್ಠ ವೇತನವನ್ನು ಹೆಚ್ಚಿಸುವುದಾಗಿ ಹೇಳಿದೆ; ಅಗತ್ಯ ಆಹಾರ ಪದಾರ್ಥಗಳು, ವಿದ್ಯುತ್, ಅನಿಲ ಮತ್ತು ಪೆಟ್ರೋಲ್ ಮೇಲೆ ಬೆಲೆ ಮಿತಿಗಳನ್ನು ವಿಧಿಸುವುದಾಗಿ ಹೇಳಿದೆ; ನಿವೃತ್ತಿ ವಯಸ್ಸನ್ನು 64 ಕ್ಕೆ ಹೆಚ್ಚಿಸುವ ಮ್ಯಾಕ್ರೊನ್ ನಿರ್ಧಾರವನ್ನು ರದ್ದುಗೊಳಿಸುವುದಾಗಿ ಹೇಳಿದೆ; ಮತ್ತು ಪರಿಸರ ಪರಿವರ್ತನೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡುವುದಾಗಿ ಹೇಳಿದೆ ಮತ್ತು ಈ ಕಾರ್ಯಕ್ರಮದ ಅನುಷ್ಠಾನದ ವೆಚ್ಚದ ಲೆಕ್ಕಾಚಾರವನ್ನು ಎಚ್ಚರಿಕೆಯಿಂದ ಮಾಡಿ,ಅದನ್ನು ಹೊಂದಿಸುವ ಬಗ್ಗೆಯೂ ಹೇಳಿದೆ. ಆರ್ಥಿಕ  

ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಉಗ್ರಬಲಪಂಥೀಯರ ಗಮನಾರ್ಹ ಪ್ರದರ್ಶನದ ಹಿನ್ನೆಲೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರೊನ್ ಪ್ರಕಟಿಸಿದ  ಫ್ರೆಂಚ್ ಚುನಾವಣೆಗಳಲ್ಲಿ ಮರಿನೆ ಲೆ ಪೆನ್‍ ರವರ ಫ್ಯಾಸಿಸ್ಟ್ ಸವಾಲನ್ನು ಎದುರಿಸಲು ಫ್ರಾನ್ಸಿನ ನಾಲ್ಕು ಎಡಪಂಥೀಯ ಪಕ್ಷಗಳು, ಅಂದರೆ  ಕಮ್ಯುನಿಸ್ಟರು, ಸೋಶಲಿಸ್ಟರು, ಗ್ರೀನ್ಸ್ ಮತ್ತು (ಜೀನ್-ಲುಕ್‌ ಮೆಲೆಂಖೊನ್ ರವರ) ಫ್ರಾನ್ಸ್ ಅನ್‌ಬೋವ್ಡ್  ಒಟ್ಟು ಸೇರಿ  ‘ನೋಯೆ ಫ್ರಂಟ್‍ ಪಾಪ್ಯುಲರೆ’- ಎನ್‍.ಎಫ್‍.ಪಿ. -ಅಂದರೆ ನವ ಜನಪ್ರಿಯ ರಂಗ-ಇಂಗ್ಲೀಷಿನಲ್ಲಿ ‘ನ್ಯೂ ಪಾಪ್ಯುಲರ್‍ ಫ್ರಂಟ್’ ) ರಚಿಸಿಕೊಂಡಿದ್ದಾರೆ. ಈ ಬೆಳವಣಿಗೆಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ: ಈ ರಂಗ  1930 ರ ದಶಕದ  ಫ್ರಾನ್ಸ್‌ನ ‘ಪಾಪ್ಯುಲರ್ ಫ್ರಂಟ್’ ಅನ್ನು ನೆನಪಿಸುತ್ತದೆ, ಅದು ಯುರೋಪಿನಲ್ಲಿ ಫ್ಯಾಸಿಸಂನ ಉದಯದ,  ವಿಶೇಷವಾಗಿ ಜರ್ಮನಿಯನ್ನು ನಾಜಿಗಳು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ರೂಪುಗೊಂಡಿತ್ತು. ಮ್ಯಾಕ್ರೊನ್ ಒಬ್ಬ ಪಕ್ಕಾ ನವ-ಉದಾರವಾದಿಯಾಗಿದ್ದು, ಈ ಸಮಯದಲ್ಲಿ ಅವರ ಸಮೀಕ್ಷಾ ರೇಟಿಂಗ್‌ಗಳು ತುಂಬಾ ಕಳಪೆಯಾಗಿವೆ ಮತ್ತು ಉಗ್ರ  ಬಲಪಂಥೀಯರು ತಮ್ಮ ಚಾರಿತ್ರ್ಯಕ್ಕೆ ಅನುಗುಣವಾಗಿ ಅಸ್ಪಷ್ಟ  ಅರ್ಥಶಾಸ್ತ್ರ ಹೊಂದಿದ್ದು, ಸದ್ಯ ಅರೆಮನಸ್ಸಿನಿಂದ ದೊಡ್ಡ ಬಂಡವಳಿಗರನ್ನು ಬೆಂಬಲಿಸುವವರು  ( ಮತ್ತು ’ಸೂಕ್ತ  ಕ್ಷಣ’ದಲ್ಲಿ  ಏಕಸ್ವಾಮ್ಯ ಬಂಡವಾಳದೊಂದಿಗೆ ಬಹಿರಂಗವಾಗಿ ಹೊಂದಾಣಿಕೆ ಮಾಡಿಕೊಳ್ಳುವವರು). ಇಂತಹ ಸಂದರ್ಭದಲ್ಲಿ ಎನ್‍.ಎಫ್‍.ಪಿ. ಒಂದು  ಸ್ಪಷ್ಟ ಆರ್ಥಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದೆ. ಎನ್‍.ಎಫ್‍.ಪಿ.  ಸೋಷಲಿಸ್ಟರನ್ನು ಒಳಗೊಳ್ಳುವ ಸಲುವಾಗಿ ಉಕ್ರೇನ್ ಯುದ್ಧದ ವಿಷಯದಲ್ಲಿ ಅಮೆರಿಕದ ನಿಲುವನ್ನು ಅನುಸರಿಸಬೇಕಾಗಿದ್ದರೂ ಮತ್ತು ಮೆಲೆಂಖೋನ್ ದೃಷ್ಟಿಕೋನಗಳಿಗೆ ಸಂಬಂಧಿಸಿದಂತೆ, ಗಾಜಾದಲ್ಲಿನ ನರಮೇಧದ ಬಗ್ಗೆ ತೆಗೆದುಕೊಂಡ ನಿಲುವಿನಲ್ಲಿ ರಾಜಿ ಮಾಡಿಕೊಂಡಿದ್ದರೂ, ಅದು ಅಂಗೀಕರಿಸಿರುವ ಆರ್ಥಿಕ ಕಾರ್ಯಕ್ರಮ ನವ-ಉದಾರವಾದಕ್ಕೆ ಸ್ಪಷ್ಟ ವಿರೋಧವನ್ನು ಹೊಂದಿದೆ.

ಈ ಕಾರ್ಯಕ್ರಮವು ಮಾಸಿಕ ಕನಿಷ್ಠ ವೇತನವನ್ನು ಹೆಚ್ಚಿಸುವುದಾಗಿ ಹೇಳಿದೆ; ಅಗತ್ಯ ಆಹಾರ ಪದಾರ್ಥಗಳು, ವಿದ್ಯುತ್, ಅನಿಲ ಮತ್ತು ಪೆಟ್ರೋಲ್ ಮೇಲೆ ಬೆಲೆ ಮಿತಿಗಳನ್ನು ವಿಧಿಸುವುದಾಗಿ ಹೇಳಿದೆ; ನಿವೃತ್ತಿ ವಯಸ್ಸನ್ನು 64 ಕ್ಕೆ ಹೆಚ್ಚಿಸುವ ಮ್ಯಾಕ್ರೊನ್ ನಿರ್ಧಾರವನ್ನು ರದ್ದುಗೊಳಿಸುವುದಾಗಿ ಹೇಳಿದೆ; ಮತ್ತು ಪರಿಸರ ಪರಿವರ್ತನೆ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡುವುದಾಗಿ ಹೇಳಿದೆ. ಎನ್‍ಪಿ.ಎಫ್. ಈ ಕಾರ್ಯಕ್ರಮದ ಅನುಷ್ಠಾನದ ವೆಚ್ಚದ ಲೆಕ್ಕಾಚಾರವನ್ನು ಎಚ್ಚರಿಕೆಯಿಂದ ಮಾಡಿ, ಐರೋಪ್ಯ ಸಮುದಾಯ ವಿಧಿಸಿರುವ ಹಣಕಾಸಿನ ಕೊರತೆ ಮಿತಿಗಳನ್ನು ಮೀರದೆಯೇ, ಕಂಪನಿಗಳ ಸೂಪರ್-ಲಾಭಗಳ ಮೇಲೆ ತೆರಿಗೆ ವಿಧಿಸುವ ಮೂಲಕ, ಮ್ಯಾಕ್ರೊನ್ ರದ್ದು ಮಾಡಿದ ಸಂಪತ್ತಿನ ತೆರಿಗೆಯನ್ನು ಮತ್ತೆ ತರುವ  ಮೂಲಕ. ವಿವಿಧ ತೆರಿಗೆ ಲೋಪಗಳನ್ನು ಮುಚ್ಚುವ ಮೂಲಕ ಮತ್ತು ವಾರಸುದಾರಿಕೆಯಲ್ಲಿ ಪಡೆಯಬಹುದಾದ ಮೊತ್ತಕ್ಕೆ ಮಿತಿಯಿರುವಂತೆ  ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ಈ ಮಿತಿಯನ್ನು ಮೀರಿದ್ದನ್ನು ಪ್ರಭುತ್ವವು  ಹೆಚ್ಚುವರಿಯಾಗಿ ವಹಿಸಿಕೊಳ್ಳುವ ಮೂಲಕ ತನ್ನ ಕಾರ್ಯಕ್ರಮಕ್ಕೆ ಹಣಕಾಸನ್ನು ಒದಗಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆರ್ಥಿಕ  

ನವ-ಉದಾರವಾದದ ಬುರುಡೆಗಳಿಗೆ ಧಿಕ್ಕಾರ

ಇದೆಲ್ಲವೂ ಈ ಹಲವು ವರ್ಷಗಳಿಂದ ನವ-ಉದಾರವಾದವು ಏನನ್ನು ಬೋಧಿಸುತ್ತ ಬಂದಿದೆಯೋ ಮತ್ತು ಫ್ರಾನ್ಸ್‌ನಲ್ಲಿ ಮಾತ್ರವಲ್ಲದೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮುಖ್ಯವಾಹಿನಿಯ ಮಾಧ್ಯಮಗಳು ಪರಮ ಸತ್ಯವೆಂದು ಪ್ರಚಾರ ಮಾಡುತ್ತ ಬಂದಿವೆಯೋ ಅವೆಲ್ಲಕ್ಕೆ   ಸಂಪೂರ್ಣವಾಗಿ ವಿರುದ್ಧವಾಗಿವೆ. ದೇಶಗಳು ಕಾರ್ಪೊರೇಟ್ ತೆರಿಗೆ ದರವನ್ನು ಕನಿಷ್ಠ 25 ಶೇ.ಕ್ಕೆ ಏರಿಸುವ  ಒಪ್ಪಂದಕ್ಕೆ ಬರಬೇಕು, ಆ ಮೂಲಕ  ವಿಭಿನ್ನ ತೆರಿಗೆ ದರಗಳ ಪ್ರಯೋಜನವನ್ನು ಪಡೆಯಲು ಬಂಡವಾಳವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಚಲಿಸುವುದನ್ನು ತಡೆಯಬಹುದು  ಎಂಬ ಸಲಹೆಯನ್ನು ನೀಡಿದಾಗ, ಜಾಗತೀಕರಣಗೊಂಡಿರುವ  ಹಣಕಾಸಿಗೆ ಅಡಿಯಾಳಾಗಿರುವ  ಹೆಚ್ಚಿನ ಸರ್ಕಾರಗಳು ಹಿಂಜರಿದವು; ಅಂತಿಮವಾಗಿ 15 ಶೇ. ತೆರಿಗೆ ದರಕ್ಕೆ ಒಪ್ಪಂದ ಏರ್ಪಟ್ಟಿತು,  ಇದು ಹೆಚ್ಚಿನ ದೇಶಗಳಲ್ಲಿ ಚಾಲ್ತಿಯಲ್ಲಿರುವ ಕಾರ್ಪೊರೇಟ್ ತೆರಿಗೆ ದರಕ್ಕಿಂತ ಕಡಿಮೆಯಾಗಿದೆ; ಇಂತಹ ಸಂದರ್ಭದಲ್ಲಿ ಸೂಪರ್-ಲಾಭಗಳ ತೆರಿಗೆ ವಿಧಿಸುವ ಎನ್‍.ಎಫ್‍.ಪಿ.ನ ಕಾರ್ಯಕ್ರಮದಲ್ಲಿನ ಪ್ರಸ್ತಾಪವು ವಿಶೇಷ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಅಂತೆಯೇ, ಸಂಪತ್ತು ತೆರಿಗೆಯನ್ನು ಜಾರಿಗೆ ತರುವುದು ಕಷ್ಟ ಮತ್ತು ಅದರಿಂದ ಬರುವ ಆದಾಯವು ಅದನ್ನು ನಿರ್ವಹಿಸಲು ತಗಲುವ ವೆಚ್ಚಕ್ಕಿಂತ ಕಡಿಮೆ ಎಂಬ ಸಬೂಬು ಹೇಳಿ, ಅದನ್ನು ರದ್ದುಗೊಳಿಸುವ ಪ್ರವೃತ್ತಿ ಸಾಮಾನ್ಯವಾಗಿ ಬಿಟ್ಟಿದೆ. ಭಾರತದಲ್ಲಿ ಕೂಡ ಈ ಸಬೂಬಿನ  ಮೇಲೆ ಹಿಂದೆ ಜಾರಿಯಲ್ಲಿದ್ದ ಸಂಪತ್ತು ತೆರಿಗೆಯನ್ನು ರದ್ದುಪಡಿಸಲಾಯಿತು; ಸಂಪತ್ತು ತೆರಿಗೆಯನ್ನು ನಿರುತ್ಸಾಹದಿಂದಲೇ ಜಾರಿಗೊಳಿಸಲಾಯಿತು  ಮತ್ತು ಅದರ ಪರಿಣಾಮವಾಗಿ ಅದರಿಂದ ಪಡೆದ ಅಲ್ಪ ಆದಾಯವನ್ನು ನಂತರ ಅದನ್ನು ರದ್ದುಗೊಳಿಸುವ ನೆಪವಾಗಿ ಬಳಸಲಾಯಿತು. ಎನ್‍.ಎಫ್‍.ಪಿ.ನ ಕಾರ್ಯಕ್ರಮವು ಇದು ಕೇವಲ ಬುರುಡೆ ಎನ್ನುತ್ತ  ಸಂಪತ್ತು ತೆರಿಗೆಯನ್ನು ಮತ್ತೆ ಜಾರಿಗೆ ತರುವುದಾಗಿ ಹೇಳಿದೆ.

ನಿಜ, ಇತರ ರಾಜಕೀಯ ಸಂಘಟನೆಗಳೂ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಆದಾಯದ ಮೂಲವಾಗಿ ಸಂಪತ್ತಿನ ತೆರಿಗೆಯನ್ನು ಮತ್ತೆ ವಿಧಿಸಬೇಕೆಂದು ಸೂಚಿಸಿವೆ. ಕಳೆದ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷೀಯ ಚುನಾವಣೆಗಳಲ್ಲಿ, ಡೆಮಾಕ್ರಟಿಕ್ ಪಕ್ಷದ ಇಬ್ಬರು ಸ್ಪರ್ಧಿಗಳಾದ ಬರ್ನಿ ಸ್ಯಾಂಡರ್ಸ್ ಮತ್ತು ಎಲಿಜಬೆತ್ ವಾರೆನ್ ಶ್ರೇಣೀಕೃತ ಸಂಪತ್ತಿನ ತೆರಿಗೆಯ ಪ್ರಸ್ತಾಪಗಳನ್ನು ಮುಂದಿಟ್ಟಿದ್ದರು; ಆದರೆ ಅಮೆರಿಕಾದ ರಾಜಕೀಯ ವ್ಯವಸ್ಥೆಯು ಡೊನಾಲ್ಡ್ ಟ್ರಂಪ್‍ ರನ್ನು ಎದುರಿಸಲು ಈ ಇಬ್ಬರಲ್ಲಿ ಯಾರೂ ನೇಮಕಗೊಳ್ಳದಂತೆ ತಡೆಯಿತು, ಇದರಿಂದಾಗಿ ಅವರ ಪ್ರಸ್ತಾಪಗಳು ಪ್ರಾಥಮಿಕ ಹಂತದಲ್ಲಿಯೇ ಉಳಿದುಕೊಂಡವು. ಇತ್ತೀಚೆಗಷ್ಟೇ, ‘ವಿಶ್ವ ಅಸಮಾನತೆ ದತ್ತಾಂಶ ಭಂಡಾರ’ಕ್ಕೆ  ಸಂಬಂಧಿಸಿದ ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಅವರ ಸುತ್ತಲಿನ ತಂಡವು ಸಂಪತ್ತಿನ ಅಸಮಾನತೆಯ ಬೃಹತ್  ಹೆಚ್ಚಳದ ಹಿನ್ನೆಲೆಯಲ್ಲಿ ಭಾರತವು ಅತಿ ಶ್ರೀಮಂತರ ಮೇಲೆ ಒಂದು ಸಂಪತ್ತಿನ ತೆರಿಗೆಯನ್ನು ಮತ್ತೆ ವಿಧಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟಿತು. ಇದು  ದೇಶದಲ್ಲಿ ಎಡಪಂಥೀಯರು ದೀರ್ಘಕಾಲದಿಂದ ಮುಂದಿಡುತ್ತ ಬಂದಿರುವುದಕ್ಕೆ ದನಿಗೂಡಿಸಿರುವ  ಪ್ರಸ್ತಾಪ.ಆರ್ಥಿಕ  

ಇದನ್ನು ಓದಿ : ಒಮನ್‌ ಕರಾವಳಿಯಲ್ಲಿ ತೈಲ ಟ್ಯಾಂಕರ್‌ ಮಗುಚಿ ಬಿದ್ದು 13 ಭಾರತೀಯರು ಸೇರಿ 16 ಮಂದಿ ನಾಪತ್ತೆ

ಅಂತೆಯೇ ಎನ್‍.ಎಫ್.ಪಿ. ಪ್ರಸ್ತಾಪಿಸಿದ ವಾರಸುದಾರಿಕೆ ತೆರಿಗೆಯನ್ನು ವಿಧಿಸುವುದನ್ನು ಮತ್ತೆ ಪರಿಶೀಲಿಸುವುದು  ಯಾವುದೇ ಪ್ರಜಾಪ್ರಭುತ್ವ ಸಮಾಜದಲ್ಲಿ ಅತ್ಯಗತ್ಯವಾಗಿರುತ್ತದೆ; ವಾಸ್ತವವಾಗಿ ಅಂತಹ ತೆರಿಗೆಯು ಬಂಡವಾಳಶಾಹಿಯ ತತ್ತ್ವಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ, ಏಕೆಂದರೆ ಆ ತತ್ವ  ಲಾಭವನ್ನು ಬಂಡವಾಳಶಾಹಿಗಳು ಹೊಂದಿರುವ ಕೆಲವು ವಿಶೇಷ ಗುಣಗಳಿಗೆ ಪ್ರತಿಫಲ ಎಂದೇ ಸಮರ್ಥಿಸುತ್ತದೆಯೇ ಹೊರತು ಮಕ್ಕಳಿಗೆ ಪಿತ್ರಾರ್ಜಿತವಾಗಿ ಬರುವಂತದ್ದು ಎಂದೇನೂ ಹೇಳುವುದಿಲ್ಲ. ಅದಲ್ಲದೆ, ಪಿತ್ರಾರ್ಜಿತ ತೆರಿಗೆಗೆ ಅದರದ್ದೇ ಆದ ಸಮರ್ಥನೆಯಿದ್ದರೂ, ಅದು ಸಂಪತ್ತು ತೆರಿಗೆಗೆ ಅಗತ್ಯವಾದ ಪೂರಕ ತೆರಿಗೆಯೂ ಆಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಪ್ರಮುಖ ಸದಸ್ಯರೊಬ್ಬರು (ಎಡಪಂಥೀಯರು ಈ ವಿಚಾರವನ್ನು ಬಹಳ ಸಮಯದಿಂದ ಪ್ರಸ್ತಾಪಿಸುತ್ತಿದ್ದಾರೆ) ವಾರಸುದಾರಿಕೆ ತೆರಿಗೆಯನ್ನು ಸೂಚಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರಷ್ಟೇ ಅಲ್ಲ, ಇಡೀ ಭಾರತೀಯ ಮಾಧ್ಯಮಗಳು ಅವರ ಮೇಲೆ ಟನ್‍ಗಟ್ಟಲೆ ಇಟ್ಟಿಗೆಗಳ ರೀತಿಯಲ್ಲಿ ಮುಗಿಬಿದ್ದಿದ್ದವು. ಪ್ರಧಾನ ಮಂತ್ರಿಗಳು ಕಾಂಗ್ರೆಸ್ ಹಿಂದೂ ಮಹಿಳೆಯರ ಆಭರಣಗಳನ್ನು ಕಸಿದುಕೊಂಡು ಮುಸ್ಲಿಮರಿಗೆ ಹಸ್ತಾಂತರಿಸಲು ಹೊರಟಿದೆ ಎಂದು ಹೇಳುವ ಮೂಲಕ ಆ ಪ್ರಸ್ತಾಪಕ್ಕೆ  ಸಂಪೂರ್ಣವಾಗಿ ಕುಟಿಲವಾದ ಕೋಮುವಾದಿ-ಫ್ಯಾಸಿಸ್ಟ್ ತಿರುವು ನೀಡಿದರು! ವಾಸ್ತವವಾಗಿ ಎನ್‍.ಎಫ್.ಪಿ.ಯ ಸಲಹೆಯು ವಾರಸುದಾರಿಕೆಯ ತೆರಿಗೆಗೆ ಮಾತ್ರವಲ್ಲ, ವಾರಸುದಾರಿಕೆಯ ಮೇಲೆ ಮಿತಿಗೂ ಸಂಬಂಧಿಸಿದೆ, ಇದು ಈ ಸಂದರ್ಭದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ.ಆರ್ಥಿಕ  

ಸಾರ್ವಜನಿಕ ಸೇವೆಗಳ ಮೇಲಿನ ವೆಚ್ಚವನ್ನು ಹೆಚ್ಚಿಸುವ ಪ್ರಸ್ತಾಪದ ವಿಷಯದಲ್ಲೂ ಇದು ಸತ್ಯ. ನವ-ಉದಾರವಾದಿ ಬಂಡವಾಳಶಾಹಿಯ ಆಗ್ರಹಗಳಿಗೆ  ಅನುಗುಣವಾಗಿ ಶಿಕ್ಷಣ ಮತ್ತು ಆರೋಗ್ಯಪಾಲನೆಯಂತಹ ಸೇವೆಗಳನ್ನು ಖಾಸಗೀಕರಣಗೊಳಿಸುವುದರ ದುಷ್ಪರಿಣಾಮವನ್ನು ನಮ್ಮದೇ ದೇಶದಲ್ಲಿ ನೋಡಿದ್ದೇವೆ, ಅವುಗಳು ವಿಪರೀತವಾಗಿ ದುಬಾರಿಗೊಂಡಿವೆ. ವಾಸ್ತವವಾಗಿ, ರೈತರು ಮರುಪಾವತಿ ಮಾಡಲು ಸಾಧ್ಯವಾಗದ ಸಾಲಗಳಿಗೆ ಸಿಲುಕಲು, ತಮ್ಮ ಜೀವವನ್ನೇ ಕೊಡುವಂತಾಗಿರುವ ಕಾರಣಗಳಲ್ಲಿ ಒಂದಾಗಿದೆ. ಇದ್ದಕ್ಕಿದ್ದಂತೆ ಎರಗುವ ಆರೋಗ್ಯ ವೆಚ್ಚಗಳಿಂದಾಗಿ ಇದು ಉದ್ಭವಿಸುತ್ತದೆ.

ಬೆಲೆ ಮಿತಿಗಳನ್ನು ವಿಧಿಸುವ ಗಮನಾರ್ಹ ವಿಚಾರ

ಅದೇ ರೀತಿಯಲ್ಲಿ, ಹಣದುಬ್ಬರದ ದುಷ್ಪ್ರಭಾವದಿಂದ ಜನರನ್ನು ರಕ್ಷಿಸುವ ಸಾಧನವಾಗಿ ಬೆಲೆ ಮಿತಿಗಳನ್ನು ಹೊಂದುವ ಪ್ರಸ್ತಾಪವು ವಿತ್ತೀಯ ಮತ್ತು ಹಣಕಾಸಿನ ನೀತಿಯ ಉಪಕರಣವಾಗಿ ಅದನ್ನು ಬಳಸುವ ಬಂಡವಾಳಶಾಹಿ ಮೂಢನಂಬಿಕೆಯನ್ನು ಸಂಪೂರ್ಣವಾಗಿ ಕಳಚಿ ಹಾಕುತ್ತದೆ. ಈ ನೀತಿ ಉಪಕರಣಗಳು ಅರ್ಥವ್ಯವಸ್ಥೆಯಲ್ಲಿ ಚಟುವಟಿಕೆಯ ಮಟ್ಟವನ್ನು  ಮತ್ತು ಅದರಿಂದಾಗಿ ಉದ್ಯೋಗವನ್ನು ಇಳಿಸಿಬಿಡುತ್ತವೆ. ವಾಸ್ತವವಾಗಿ, ಬಂಡವಾಳಶಾಹಿಯ ಅಡಿಯಲ್ಲಿ ಹಣದುಬ್ಬರಕ್ಕೆ ಏಕೈಕ ಪ್ರತ್ಯೌಷಧಿಯೆಂದರೆ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗದ ಸೃಷ್ಟಿ. ಹಣದುಬ್ಬರವನ್ನು ಎದುರಿಸುವ ಸಾಧನವಾಗಿ ಹೆಚ್ಚಿನ ನಿರುದ್ಯೋಗಕ್ಕಿಂತ ಬೆಲೆ ನಿಯಂತ್ರಣದ ಪ್ರಸ್ತಾಪವನ್ನು ಬಹಳ ಸಮಯದಿಂದ ಭಾರತದಲ್ಲಿ ಎಡಪಕ್ಷಗಳು ಮುಂದಿಡುತ್ತಿದ್ದು, ಈಗ ಮುಂದುವರೆದ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿನ ಒಂದು ಪ್ರಮುಖ ರಾಜಕೀಯ ಸಂಘಟನೆಯ ಕಾರ್ಯಕ್ರಮದಲ್ಲಿ ಅದು ಸ್ಥಾನ ಪಡೆದಿದೆ.

ಜಾಗತೀಕರಣಗೊಂಡ ಬಂಡವಾಳದ ವಕ್ತಾರರು ದಶಕಗಳಿಂದ ಕಚಡಾ ವಾದಗಳನ್ನು ಹರಡುತ್ತಿರುವ ಮತ್ತು ಇದಕ್ಕೆ ಪರ್ಯಾಯವಿಲ್ಲ ಎಂದು ಹೇಳುತ್ತ ಬರುತ್ತಿರುವ ವಾತಾವರಣದಲ್ಲಿ ಎನ್‍.ಎಫ್‍.ಪಿ. ಕಾರ್ಯಕ್ರಮವು ಒಂದು ತಾಜಾ ಗಾಳಿ ಬೀಸುವಂತೆ ಮಾಡಿದೆ. ಫ್ರೆಂಚ್ ಬೂರ್ಜ್ವಾ ಪತ್ರಿಕೆಗಳು ಮತ್ತು ನವ-ಉದಾರವಾದದ ಅನುಯಾಯಿಗಳಿಂದ ಹಿಡಿದು ಉಗ್ರ ಬಲಪಂಥೀಯರ ವರೆಗೆ ಹಲವಾರು ರಾಜಕಾರಣಿಗಳು  ಎನ್‍.ಎಫ್‍.ಪಿ.ಆರ್ಥಿಕ  ಕಾರ್ಯಕ್ರಮದ ಮೇಲೆ ಮುಗಿಬಿದ್ದಿರುವುದರಲ್ಲಿ, ಇದನ್ನು ಜಾರಿಗೊಳಿಸಿದರೆ ಫ್ರೆಂಚ್ ಅರ್ಥವ್ಯವಸ್ಥೆಯು ಮುಳುಗಿ ಹೋಗುತ್ತದೆ ಎಂದು ಜನರನ್ನು ಹೆದರಿಸುತ್ತಿರುವಲ್ಲಿ ಆಶ್ಚರ್ಯವೇನಿಲ್ಲ. ಆದರೂ ಇದರಿಂದ ಯಾವುದೇ ಅಭಿಪ್ರಾಯ ಸಂಗ್ರಹಣೆಯಲ್ಲಿ ಎನ್‍.ಎಫ್‍.ಪಿ. ಹಿಂದೆ ಬೀಳುವಂತಾಗಲಿಲ್ಲ. ಎರಡನೇ ಸುತ್ತಿನ ಮತದಾನದ  ಸಂದರ್ಭದಲ್ಲೂ ಉಗ್ರ ಬಲಪಂಥೀಯರಿಗೆ 31 ಶೇ.ದಷ್ಟು  ಬೆಂಬಲವಿದೆಯೆಂನ್ನುತ್ತಲೇ, ಅದಕ್ಕೆ ಪ್ರತಿಯಾಗಿ  ಎನ್‍.ಎಫ್‍.ಪಿ. ಪಾಲು 26 ರಿಂದ 28 ಶೇ.ದಷ್ಟು ಮತ್ತು ಮ್ಯಾಕ್ರೊನ್ ಪಕ್ಷ 20 ಶೇ. ದಷ್ಟು ಬೆಂಬಲ ಪಡೆದಿದೆ ಎಂದು ವರದಿಯಾಗುತ್ತಿತ್ತು.

ಹೊಸ ಆರಂಭದ ಸೂಚನೆ

ಫ್ರಾನ್ಸಿನ ಎಡಪಂಥೀಯರು ಫ್ಯಾಸಿಸಂ ಅನ್ನು ಸೋಲಿಸಲು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡುವಲ್ಲಿ ಯಶಸ್ವಿಯಾಗಿರುವುದು ಸ್ವಾಗತಾರ್ಹ ಸಂಕೇತವಾಗಿದೆ. ಸೋಶಿಯಲ್ ಡೆಮಾಕ್ರಟಿಕ್ ನಾಯಕ ಗ್ಲುಕ್ಸ್ ಮನ್,  ಜೀನ್-ಲುಕ್ ಮೆಲೆಂಖೊನ್ ಬಗ್ಗೆ ತನ್ನ ಬಹುಕಾಲದ ದ್ವೇಷವನ್ನು ಬದಿಗಿಟ್ಟು, ಎನ್‍.ಎಫ್‍.ಪಿ. ಗೆ ಬೆಂಬಲದ ಭರವಸೆಯನ್ನು ನೀಡಿದ್ದಾರೆ.ಇದಕ್ಕೆ  ಪ್ರತಿಯಾಗಿ ಮೆಲೆಂಖೊನ್, ಎನ್‌.ಎಫ್.ಪಿ. ವಿಜಯಶಾಲಿಯಾದರೆ, ಮೈತ್ರಿ ಪಾಲುದಾರರು ಆಕ್ಷೇಪಿಸಿದರೆ ಪ್ರಧಾನ ಮಂತ್ರಿ ಹುದ್ದೆಯಿಂದ ದೂರ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಉಗ್ರ ಬಲಪಂಥೀಯರನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಮತ್ತು ಎನ್.ಎಫ್‍.ಪಿ.ನೊಳಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಕೂಡ ಬದಿಗಿಟ್ಟಿರುವುದು ಸಾಕಷ್ಟು ಗಮನಾರ್ಹವಾಗಿದೆ.

ನಮ್ಮ ದೃಷ್ಟಿಯಿಂದ, ಇನ್ನೂ ಹೆಚ್ಚು ಗಮನಾರ್ಹವಾದುದೆಂದರೆ,  ನವ-ಉದಾರವಾದವನ್ನು ವಿರೋಧಿಸುವ ಮತ್ತು ಒಟ್ಟಾರೆಯಾಗಿ ಹೊಸ ಮತ್ತು ಉತ್ತೇಜನಕಾರಿ ದಾರಿಯನ್ನು ಹಿಡಿಯುವ ಒಂದು ಸರ್ವಸಾಮಾನ್ಯ ಆರ್ಥಿಕ ಕಾರ್ಯಕ್ರಮವನ್ನು  ರೂಪಿಸಿರುವುದು, ಮತ್ತು ಅದನ್ನು ಈ ರಂಗದ  ಎಲ್ಲಾ ಘಟಕಗಳು ಸಮರ್ಥಿಸಿಕೊಳ್ಳುತ್ತಿರುವುದು. ಇದು ವಿಚಾರಗಳ ಕ್ಷೇತ್ರದಲ್ಲಿ, ವಿಶೇಷವಾಗಿ ಇದು ಮುಂದುವರೆದ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವುದು ಒಂದು  ಹೊಸ ಆರಂಭವನ್ನು ಸೂಚಿಸುತ್ತದೆ.ಆರ್ಥಿಕ  

(ಇದು, ಅಂತಿಮ ಫಲಿತಾಂಶ ಪ್ರಕಟವಾಗುವ ಮೊದಲು, ಇನ್ನೂ ಉಗ್ರ ಬಲಪಂಥೀಯರು ಎಡಪಂಥೀಯರಿಗಿಂತ ಮುಂದಿದ್ದಾರೆ ಎಂದು ಅಭಿಪ್ರಾಯ ಸಂಗ್ರಹಗಳು ಹೇಳುತ್ತಿದ್ದ ಸಮಯದಲ್ಲಿ ಬರೆದಿರುವ ಲೇಖನ ಎಂಬುದನ್ನು ಗಮನಿಸಬೇಕು)ಆರ್ಥಿಕ  

ಇದನ್ನು ನೋಡಿ : ಫ್ರಾನ್ಸ್ ಚುನಾವಣೆ : ನವ-ಫ್ಯಾಸಿಸ್ಟರಿಗೆ ಸೋಲು, ಎಡ ಪ್ರಗತಿಪರರಿಗೆ ಗೆಲುವು

Donate Janashakthi Media

Leave a Reply

Your email address will not be published. Required fields are marked *