ದೆಹಲಿ: ಪಂಜಾಬ್‌ನಲ್ಲಿ ಉಂಟಾಗಿರುವ ಕಾಂಗ್ರೆಸ್ ನಾಯಕತ್ವಕ್ಕೆ ಸಂಬಂಧಿಸಿದಂತೆ ಎಲ್ಲ ನಾಯಕರ ಭಿನ್ನಾಭಿಪ್ರಾಯ ಸರಿಪಡಿಸಿ ಚುನಾವಣೆ ವೇಳೆಗೆ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪ್ರಯತ್ನಿಸುತ್ತಿದ್ದಾರೆ.
ಪಂಜಾಬ್‌ನ ಮಾಜಿ ಸಚಿವ ನವಜೋತ್ ಸಿಂಗ್ ಸಿಧುಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಅವರು ಈ ಸ್ಪಷ್ಟನೆ ನೀಡಿದ್ದಾರೆ. ನವಜೋತ್ ಸಿಂಗ್ ಸಿಧು ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಾಯಕತ್ವದ ವಿಚಾರದ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಸಿಧು ಮತ್ತು ಕಾಂಗ್ರೆಸ್‌ನ ಎಲ್ಲ ನಾಯಕರ ಭಿನ್ನಾಭಿಪ್ರಾಯ ಸರಿಪಡಿಸಿ ರಾಜ್ಯ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಲು ರಾಹುಲ್ ಮತ್ತು ಪ್ರಿಯಾಂಕಾ ಪ್ರಯತ್ನ ಮಾಡಲಿದ್ದಾರೆ. ಪಂಜಾಬ್‌ನ ನಾಯಕರ ಜತೆ ರಾಹುಲ್ ಗಾಂಧಿ ಅವರು ಕಳೆದ ಕೆಲವು ದಿನಗಳಿಂದ ಮಾತುಕತೆ ನಡೆಸುತ್ತಿದ್ದು, ಪಕ್ಷದ ಆಂತರಿಕ ಸಂಘರ್ಷವನ್ನು ಸರಿಪಡಿಸಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೂ ಮುನ್ನ ಪಂಜಾಬ್ ಘಟಕದಲ್ಲಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ನಾಯಕತ್ವ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಈಗಾಗಲೇ ಅನೇಕ ಸಚಿವರು, ಶಾಸಕರು, ಸಂಸದರ ಜತೆ ಮಾತುಕತೆ ನಡೆಸಿದ್ದಾರೆ.
2019ರ ಲೋಕಸಭೆ ಚುನಾವಣೆಯ ಬಳಿಕ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿನ ಭಿನ್ನಮತ ಹೆಚ್ಚಾಗಿತ್ತು. ಚುನಾವಣೆಯಲ್ಲಿ ಪಂಜಾಬ್ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿತ್ತು. ಇದಕ್ಕೆ ಸಿಧು ಅವರ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪ್ರಮುಖ ಖಾತೆಗಳನ್ನು ಅವರ ಬಳಿಯಿಂದ ವಾಪಸ್ ಪಡೆದಿದ್ದರು. ಬಳಿಕ ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ್ದರು.
ಪಕ್ಷದ ಆಂತರಿಕ ಕಲಹ ಸರಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿಯು ನವಜೋತ್ ಸಿಂಗ್ ಸಿಧು ಅವರ ಪರ ನಿಲುವು ತಳೆದಿದ್ದಲ್ಲದೆ ಅವರಿಗೆ ಅವಕಾಶ ಕಲ್ಪಿಸಿ ಸಂಪುಟ ಪುನಾರಚನೆ ಮಾಡುವಂತೆ ಸೂಚಿಸಿತ್ತು.