ಬೆಂಗಳೂರು | ಚಿಕ್ಕಪೇಟೆ ಮಾಜಿ ಶಾಸಕ ಆರ್.ವಿ.ದೇವರಾಜ್ ನಿಧನ

ಬೆಂಗಳೂರು: ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಸಂದರ್ಭದಲ್ಲಿ ದೇವರಾಜ್ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣವೇ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ (67) ಅವರು ಸೋಮವಾರ ರಾತ್ರಿ ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರು | ಹಾಸ್ಯ ನಟ ಉಮೇಶ್ ನಿಧನ : ಅಂತಿಮ ದರ್ಶನಕ್ಕೆ | ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ

1957ರ ಡಿಸೆಂಬರ್ 3 ರಂದು ಬೆಂಗಳೂರಲ್ಲಿ ಇವರು ಜನಿಸಿದ್ದರು. ಜನ್ಮದಿನ ಎರಡು ದಿನ ಇರುವಾಗಲೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ದೇವರಾಜ್ ಅವರು 1989 ಮತ್ತು 1999ರಲ್ಲಿ ಕಾಂಗ್ರೆಸ್​ನಿಂದ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2004ರಲ್ಲಿ ಎಸ್​. ಎಂ. ಕೃಷ್ಣ ಅವರಿಗೆ ಇವರು ತಮ್ಮ ಸೀಟು ಬಿಟ್ಟು ಕೊಟ್ಟಿದ್ದರು. 2008 ಮತ್ತು 2023ರಲ್ಲಿ ಚಿಕ್ಕಪೇಟೆಯಿಂದ ಸ್ಪರ್ಧಿಸಿದ್ದರು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆದ ಆರ್.ವಿ.ದೇವರಾಜ್ ಅವರ ನಿಧನವಾರ್ತೆ ನೋವುಂಟು ಮಾಡಿದೆ. ಸೈದ್ಧಾಂತಿಕ ಬದ್ಧತೆ ಮತ್ತು ಜನಪರ ಕಾಳಜಿಯಿದ್ದ ದೇವರಾಜ್ ಅವರು ಕಾಂಗ್ರೆಸ್‌ನ ನಿಷ್ಠಾವಂತ ಕಟ್ಟಾಳುವಾಗಿ ಬಹುಕಾಲ ದುಡಿದವರು. ಅವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರಬೇಕಿತ್ತು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ಡಿಸಿಎಂ ಡಿಕೆಶಿ ಸಂತಾಪ: ‘ಚಿಕ್ಕಪೇಟೆ ಮಾಜಿ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇವರಾಜ್ ಅವರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ರಾಜಕೀಯ ಮತ್ತು ಸಮಾಜಸೇವೆಯ ಮೂಲಕ ಚಿಕ್ಕಪೇಟೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ರಾಜ್ಯ ರಾಜಕಾರಣ ಮತ್ತು ಚಿಕ್ಕಪೇಟೆ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ದೇವರಾಜ್ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನೀಡಲಿ’ ಎಂದು ಪ್ರಾರ್ಥಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಎಕ್ಸ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ನೋಡಿ :

Donate Janashakthi Media

Leave a Reply

Your email address will not be published. Required fields are marked *