ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಂಧನಕ್ಕೆ : ಸಿಪಿಐಎಂ ಆಗ್ರಹ

ಬೆಂಗಳೂರು: ಬಿಜೆಪಿ ಮುಖಂಡ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ಕಲ್ಯಾಣ ಕರ್ನಾಟಕದ ಜನರ ಮೈಬಣ್ಣದ ಕುರಿತು ನೀಡಿರುವ ಹೇಳಿಕೆಯನ್ನು ಸಿಪಿಐಎಂ ಖಂಡಿಸಿದೆ.

ಈ ಕುರಿತು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು,  ಕಸ್ತೂರಿ ರಂಗನ್ ವರದಿಯ ವಿರುದ್ದ ಮಾತನಾಡುವಾಗ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಡು ಬೆಳೆಸಲು ಗಮನ ನೀಡಲಿಲ್ಲವೆಂದು ಠೀಕಿಸುವ ಭರದಲ್ಲಿ, ಈ ಪ್ರದೇಶದ ಜನರನ್ನು ಮತ್ತು ನಾಯಕರನ್ನು ಬಣ್ಣದ ಆಧಾರದಲ್ಲಿ ಅಪಮಾನಿಸುವ ವ್ಯಂಗಭರಿತ ಮಾತುಗಳನ್ನಾಡಿದ್ದಾರೆ. ಇದೊಂದು ಜಾತಿ ತಾರತಮ್ಯದ ದುರಹಂಕಾರದ ದುರ್ವರ್ತನೆಯಾಗಿದೆ. ಸಿಪಿಐಎಂ ಈ ಅಪಮಾನದ ಹಾಗೂ ವರ್ಣದ ಆಧಾರದಲ್ಲಿ ಕೀಳಾಗಿ ಕಾಣುವ ಈ ಜಾತಿ ತಾರತಮ್ಯದ ದುರಹಂಕಾರವನ್ನು ಬಲವಾಗಿ ಖಂಡಿಸುತ್ತದೆ ಎಂದರು. ರಾಜ್ಯ ಸರಕಾರ ಈ ಕೂಡಲೇ ಅವರ ಬಂಧನಕ್ಕೆ ಅಗತ್ಯ ಕ್ರಮವಹಿಸಬೇಕೆಂದು ಬಲವಾಗಿ ಒತ್ತಾಯಿಸುತ್ತದೆ ಎಂದರು.

ಇದನ್ನೂ ಓದಿ:ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿ : ಆರಗಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

ಅವರು ಕೇವಲ ಕೆಲ ನಾಯಕರನ್ನು ನಿಂದಿಸಿದ್ದು ಮಾತ್ರವಲ್ಲಾ, ಇಡೀ ಕಲ್ಯಾಣ ಕರ್ನಾಟಕದ ಜನತೆಯನ್ನು ಪ್ರತ್ಯಕ್ಷವಾಗಿ ಮತ್ತು ಜಗತ್ತಿನ ಎಲ್ಲ ಕಪ್ಪು ಬಣ್ಣದ ಜನತೆಯನ್ನು ಅಪ್ರತ್ಯಕ್ಷವಾಗಿ ಅಪಮಾನಿಸಿದ್ದಾರೆ.

ಆರಗ ಜ್ಞಾನೇಂದ್ರ ರಾಜ್ಯ ಗೃಹ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದವರು, ದೇಶದ ಹಾಗೂ ರಾಜ್ಯದ ಕಾನೂನಿನ ಆಡಳಿತದ ನಿರ್ವಹಣೆ ಮಾಡಿದವರು. ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ಭಾರತ ಸಂವಿಧಾನದ ಅರಿವನ್ನು ಹೊಂದಿರುವವರು, ಆದಾಗಲೂ, ಸಂವಿಧಾನ ಮತ್ತು ಕಾನೂನಿನ ಆಡಳಿತಕ್ಕೆ ವ್ಯತಿರಿಕ್ತವಾಗಿ ಈ ರೀತಿ ಪದ ಬಳಕೆ ಮಾಡಿರುವುದು ಅಕ್ಷಮ್ಯವಾಗಿದೆ. ಪದಗಳನ್ನು ಬಳಸುವಾಗ ಎಚ್ಚರಿಕೆಯನ್ನು ಹೊಂದಿರಬೇಕು.

ಮನುವಾದ, ಜಾತಿ ಹಾಗೂ ಲಿಂಗ ತಾರತಮ್ಯವನ್ನು ಉಳಿಸಿ ಬಲವಾಗಿ ಮುನ್ನಡೆಸಲು ಕಾರ್ಯ ನಿರ್ವಹಿಸುವ ಹಿಂದುತ್ವ ಕೋಮುವಾದಿ ಮೂಲದಿಂದ ಬಂದವರ ಬಾಯಿಂದ ನಿಂದನೆ ಮತ್ತು ಅಪಮಾನಗಳಿಲ್ಲದ ಮತ್ತೆಂತ ಮಾತುಗಳನ್ನು ನಿರೀಕ್ಷಿಸಲು ಸಾಧ್ಯ ?! ಈ ಜಾತಿ ಹಾಗೂ ಲಿಂಗ ಮತ್ತು ವರ್ಣ ತಾರತಮ್ಯದ ದುರಹಂಕಾರವನ್ನು ರಾಜ್ಯದ ಜನತೆ ಬಲವಾಗಿ ಪ್ರತಿರೋಧಿಸಬೇಕೆಂದು ಸಿಪಿಐಎಂ ಕರೆ ನೀಡುತ್ತದೆ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *