ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನ

ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ವೀರಭದ್ರ ಸಿಂಗ್(87) ಇಂದು ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದಾಗಿ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶಿಮ್ಲಾದ ಇಂಧಿರಾ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಇಂದು ಮುಂಜಾನೆ 4ರ ಸಮಯದಲ್ಲಿ ಅವರು ನಿಧನರಾದರು ಎಂದು ಐಜಿಎಂಸಿ ಹಿರಿಯ ವೈದ್ಯಕೀಯ ಅಧೀಕ್ಷಕ ಡಾ. ಜಾನಕ್ ರಾಜ್ ಅಧಿಕೃತವಾಗಿ ಮಾಹಿತಿ ನೀಡಿದರು. ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಕೋವಿಡ್ ಸೋಂಕು‌  ತಗುಲಿದ ಬಳಿಕ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು

ಏಪ್ರಿಲ್‌ 13ರಂದು ವೀರಭದ್ರ ಸಿಂಗ್‌ರವರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡ ಕಾರಣ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಗುಣಮುಖರಾಗಿ ಮರಳಿದ್ದರು. ಆದರೆ ಕೆಲ ದಿನಗಳ ಬಳಿಕ ಅವರ ಆರೋಗ್ಯ ಮತ್ತೆ ಹದಗೆಟ್ಟಿತು. ಇದಾದ ಬಳಿಕ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೂನ್ 11ರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಸೋಮವಾರ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಕಳೆದ ಎರಡು ದಿನಗಳಿಂದ ವೆಂಟಿಲೇಟರ್‌ನಲ್ಲಿ ದಾಖಲಾಗಿದ್ದರು.

ಆರು ಬಾರಿ ಮುಖ್ಯಮಂತ್ರಿ, 9 ಬಾರಿ ಶಾಸಕರು ಮತ್ತು 5 ಬಾರಿ ಸಂಸದರು

ಹಿರಿಯ ಕಾಂಗ್ರೆಸ್ ನಾಯಕರೆಂದೇ ಗುರುತಿಸಿಕೊಂಡಿದ್ದ ವೀರಭದ್ರ ಸಿಂಗ್ 1983ರಿಂದ 1990ರವರೆಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಏಪ್ರಿಲ್ 8, 1983 ರಿಂದ ಮಾರ್ಚ್ 5, 1990ರವರೆಗೆ, ಡಿಸೆಂಬರ್ 3, 1993 ರಿಂದ ಮಾರ್ಚ್ 23, 1998ರವರೆಗೆ, ಮಾರ್ಚ್ 6, 2003 ರಿಂದ ಡಿಸೆಂಬರ್ 29, 2007ರವರೆಗೆ, ಡಿಸೆಂಬರ್ 25, 2012 ರಿಂದ- ಡಿಸೆಂಬರ್ 26, 2017 ರವರೆಗೆ ಆರು ಬಾರಿ ಅವರು ಮುಖ್ಯಮಂತ್ರಿಯಾಗಿದ್ದರು.

ಒಂಭತ್ತು ಬಾರಿ ಶಾಸಕರಾಗಿ ಹಿಮಾಚಲ ಪ್ರದೇಶ ವಿಧಾನಸಭೆಯ ಸೋಲನ್ ಜಿಲ್ಲೆಯ ಅರ್ಕಿ ಕ್ಷೇತ್ರವನ್ನು ವೀರಭದ್ರ ಸಿಂಗ್ ಪ್ರತಿನಿಧಿಸಿದ್ದರು. ಐದು ಬಾರಿ ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

1998ರಿಂದ 2003ರವರೆಗೆ ಹಿಮಾಚಲ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿದ್ದರು. ಕೇಂದ್ರದಲ್ಲಿ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ಸಚಿವಾಲಯದ ಉಪ ಸಚಿವ, ಕೈಗಾರಿಕಾ ಖಾತೆ ರಾಜ್ಯ ಸಚಿವರಾಗಿದ್ದರು. ಅಲ್ಲದೆ ಉಕ್ಕು ಖಾತೆ ಸಚಿವ, ಸಣ್ಣ ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರೂ ಆಗಿದ್ದರು.

ಇದಕ್ಕೂ ಮುನ್ನ 1962ರಲ್ಲಿ ಲೋಕಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. 1971ರ ಚುನಾವಣೆಯಲ್ಲಿ ಪುನರಾಯ್ಕೆಯಾಗಿ ಪ್ರವಾಸೋದ್ಯಮ, ವಿಮಾನ ಯಾನ, ಕೈಗಾರಿಕೆ, ಉಕ್ಕು ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಅವರ ಪತ್ನಿ ಪ್ರತಿಭಾ ಸಿಂಗ್ ಮಾಜಿ ಸಂಸದರಾಗಿದ್ದಾರೆ, ಪುತ್ರ ವಿಕ್ರಮಾದಿತ್ಯ ಶಿಮ್ಲಾ ಗ್ರಾಮೀಣ ಶಾಸಕರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *