ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್

ಹೈದರಾಬಾದ್: ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ಬಂಧಿಸಿದೆ. ಈ ಪ್ರಕರಣದಲ್ಲಿ ಟಿಡಿಪಿ ಶಾಸಕ, ಮಾಜಿ ಸಚಿವ ಗಂಟಾ ಶ್ರೀನಿವಾಸ ರಾವ್ ಮತ್ತು ಅವರ ಪುತ್ರ ಗಂಟಾ ರವಿತೇಜ ಅವರನ್ನೂ ಬಂಧಿಸಲಾಗಿದೆ.

ತಮ್ಮ ನಾಯಕನ ಬಂಧನ ವಿರೋಧಿಸಿ ಪಕ್ಷದ ಸಂಸದ ಕೆಸಿನೇನಿ ಶ್ರೀನಿವಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಬಂಧನದ ಬಗ್ಗೆ ಗಮನ ಹರಿಸುವಂತೆ ಕೋರಿರುವ ಅವರು, ಬಂಧವನ್ನು “ಕಾನೂನುಬಾಹಿರ” ಎಂದು ಪತ್ರದಲ್ಲಿ ಹೇಳಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿದ ರೀತಿಗೆ ಸಂಬಂಧಿಸಿದಂತೆ ಅವರು ಗಂಭೀರ ಕಳವಳವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶ್ರೀನಿವಾಸ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೂಡಾ ಪತ್ರ ಬರೆದು ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಶಕ್ತಿಯೋಜನೆ:1,245 ನೂತನ ಬಸ್ಸುಗಳ ಖರೀದಿ ಒಪ್ಪಿಗೆ ನೀಡಿದ ಸಚಿವ ಸಂಪುಟ ಸಭೆ

ಬಂಧನಕ್ಕೊಳಗಾದ ಕೆಲವೇ ಗಂಟೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರು ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಜನರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ನನ್ನ ವಿನಂತಿಯೇನೆಂದರೆ, ನಾನು ಯಾವುದೇ ತಪ್ಪು ಮಾಡಿಲ್ಲ, ಆದರೆ ನಿನ್ನೆ ರಾತ್ರಿ ಅಧಿಕಾರಿಗಳು ಬಂದು ಯಾವುದೇ ಪುರಾವೆಯನ್ನು ತೋರಿಸದೆ ಅವರು ನನ್ನನ್ನು ಬಂಧಿಸಿದ್ದಾರೆ. ನಾನು ನನ್ನ ಬಂಧನಕ್ಕೆ ಆಧಾರ ಮತ್ತು ಪುರಾವೆಯನ್ನು ಕೇಳಿದೆ. ಈಗ ಅವರು ಎಫ್‌ಐಆರ್‌ನೊಂದಿಗೆ ಬಂದಿದ್ದಾರೆ, ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಅಥವಾ ಹೆಚ್ಚಿನ ವಿವರಗಳಿಲ್ಲ. ಇದು ತುಂಬಾ ದುಃಖಕರವಾಗಿದ್ದು ತಪ್ಪಾದ ನಡೆಯಾಗಿದೆ” ಎಂದು ನಾಯ್ಡು ಹೇಳಿದ್ದಾರೆ.

ನಾಯ್ಡು ಅವರು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ, “ಕಳೆದ 45 ವರ್ಷಗಳಿಂದ ನಾನು ನಿಸ್ವಾರ್ಥವಾಗಿ ತೆಲುಗು ಜನರಿಗೆ ಸೇವೆ ಸಲ್ಲಿಸಿದ್ದೇನೆ. ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡಲು ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಭೂಮಿಯ ಮೇಲಿನ ಯಾವುದೇ ಶಕ್ತಿಯು ನಾನು ಸೇವೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ವಿರುದ್ಧ 2021ರಲ್ಲಿ ಎಫ್‌ಐಆರ್ ದಾಖಲಾಗಿತ್ತು. 371 ಕೋಟಿಗೂ ಅಧಿಕ ಮೊತ್ತದ ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ನಂಬರ್ 1 ಆರೋಪಿ ಎಂದು ಹೆಸರಿಸಲಾಗಿದೆ. ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲು ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ (ಎಪಿಎಸ್‌ಎಸ್‌ಡಿಸಿ) ನೆಪದಲ್ಲಿ ಈ ಹಗರಣದ ನಡೆದಿತ್ತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ‘ನಮ್ಮಲ್ಲಿ ಅಸಹಜ ಸಾವಿನ ಪಟ್ಟಿಯಿದೆ’ | ಸೌಜನ್ಯ ಪರವಾಗಿ ‘ಚಲೋ ಬೆಳ್ತಂಗಡಿ’ ಮಹಾ ಧರಣಿ

ಎಫ್‌ಐಆರ್‌ನ ವಿವರಗಳು ಮತ್ತು ಇತರ ವಿವರಗಳನ್ನು ಚಂದ್ರಬಾಬು ನಾಯ್ಡು ಅವರ ವಕೀಲರಿಗೆ ಒದಗಿಸಲಾಗಿದ್ದು, ಅವರು ಎಫ್‌ಐಆರ್ ವರದಿಯಲ್ಲಿ ಮಾಜಿ ಮುಖ್ಯಮಂತ್ರಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಸೂಚಿಸಿ, ಪ್ರಾಥಮಿಕ ಸಾಕ್ಷ್ಯವನ್ನು ಸಹ ಕೋರಿದ್ದಾರೆ. ವಕೀಲರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, 24 ಗಂಟೆಗಳ ಒಳಗೆ ರಿಮಾಂಡ್ ವರದಿಯಲ್ಲಿ ಎಲ್ಲಾ ವಿವರಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ವಿವರಗಳ ಪ್ರಕಾರ ಚಂದ್ರಬಾಬು ನಾಯ್ಡು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಂದ್ಯಾಲ್ ಆಸ್ಪತ್ರೆಗೆ ಸ್ಥಳಾಂತರಿಸಬೇಕಿತ್ತು. ಆದರೆ, ಆಸ್ಪತ್ರೆಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲೆ ಅವರ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಅವರನ್ನು ಶನಿವಾರ ಸಂಜೆ ವಿಜಯವಾಡದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಐಡಿ ಹೆಚ್ಚುವರಿ ಡಿಜಿ ಎನ್ ಸಂಜಯ್ ತಿಳಿಸಿದ್ದಾರೆ.

ಕೌಶಲಾಭಿವೃದ್ಧಿ ಹಗರಣ ಪ್ರಕರಣದಲ್ಲಿ ತಮ್ಮ ಮತ್ತು ನಾಯ್ಡು ಬಂಧನದ ಕುರಿತು ಮಾತನಾಡಿದ ಗಂಟಾ ಶ್ರೀನಿವಾಸ ರಾವ್, ಬಂಧನವು ದುರದೃಷ್ಟಕರ ಮತ್ತು ಇದು ರಾಜಕೀಯ ಸೇಡು ಎಂದು ಹೇಳಿದ್ದಾರೆ. “ಇದೊಂದು ದುರದೃಷ್ಟಕರ ಮತ್ತು ಆಘಾತಕಾರಿ ಸ್ಥಿತಿಯಾಗಿದೆ. ಚಂದ್ರಬಾಬು ನಾಯ್ಡು ಅವರು ದೇಶದ ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದು, ಅವರ ಆಡಳಿತದಲ್ಲಿ ಯಾವುದೇ ಅನ್ಯಾಯವಾಗಿಲ್ಲ. ಜನರ ನಡುವೆ ಇದ್ದ ಅಂತಹ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿರುವುದು ತುಂಬಾ ಆಘಾತಕಾರಿಯಾಗಿದೆ” ಅವರು ಹೇಳಿದ್ದಾರೆ.

“ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಂತೋಷಕ್ಕಾಗಿ ಇದೆಲ್ಲವನ್ನೂ ಮಾಡಲಾಗಿದೆ. ಇದೆಲ್ಲವೂ ರಾಜಕೀಯ ದ್ವೇಷವಲ್ಲದೆ ಬೇರೇನೂ ಅಲ್ಲ” ಎಂದು ಶ್ರೀನಿವಾಸ್ ಹೇಳಿದ್ದಾರೆ.

ವಿಡಿಯೊ ನೋಡಿ: ದೇಶಕ್ಕೆ ಗಾಯವಾದಾಗ ಜನ ಮೌನವಾಗಿದ್ದರೆ, ಅದು ಇಡೀ ದೇಶವನ್ನೇ ಸುಡುತ್ತದೆ – ಪ್ರಕಾಶ್ ರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *