ಬೆಂಗಳೂರು: ಆಫ್ರಿಕಾ ಪ್ರಜೆ ಹಾಗೂ ಬೆಂಗಳೂರು ನಗರದ ಕೆ.ಆರ್ ಪುರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಜಾನ್ ಎಂಬಾತನ ಲಾಕಪ್ ಡೆತ್ ಆಗಿದೆ ಎಂದು ಆರೋಪಿಸಿ ಅವನ ಸ್ನೇಹಿತರು ಜೆಸಿ ನಗರ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಮಧ್ಯಾಹ್ನ ಠಾಣೆಯ ಎದುರು ಪ್ರತಿಭಟನೆಗೆ ಮುಂದಾದರು.
ಆಫ್ರಿಕನ್ ಪ್ರಜೆಗಳು ಕೆಂಪಣ್ಣ ಎಂಬ ಪೇದೆ ಮೇಲೆ ಹಲ್ಲೆ ನಡೆಸಿದ್ದು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
5 ಗ್ರಾಂ ಎಂಡಿಎಂಎ ಡ್ರಗ್ಸ್ ಜೊತೆಗೆ ಆಫ್ರಿಕನ್ ಪ್ರಜೆಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಆರೋಪಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
‘ಪೊಲೀಸರು ಹೊಡೆದು ಕೊಂದಿದ್ದಾರೆ’
ಇನ್ನು ಮೃತನ ಸಂಬಂಧಿಕರು, ಸ್ನೇಹಿತರು ಹಾಗೂ ಇತರೆ ಆಫ್ರಿಕನ್ ಪ್ರಜೆಗಳು ಪೊಲೀಸರು ಹೊಡೆದು ಸಾಯಿಸಿದ್ದಾನೆ ಅಂತಾ ಆರೋಪಿಸಿದ್ದಾರೆ. ಕೇವಲ ಆರೋಪ ಮಾತ್ರವನ್ನ ಪೊಲೀಸರ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಘಟನೆಯ ಹಿನ್ನೆಲೆ : ಮೃತ ವ್ಯಕ್ತಿ ಆಪ್ರಿಕಾದ ಕಾಂಗೋ ದೇಶದ ಪ್ರಜೆಯಾಗಿದ್ದು, ಡ್ರಗ್ ಫೆಡ್ಲಿಂಗ್ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗುತ್ತಿತ್ತು. ಅಲ್ಲದೇ ಆತನ ವಿರುದ್ದ ಕೇಸ ಸಹ ದಾಖಲು ಮಾಡಲಾಗಿತ್ತು.
ವಿಚಾರಣೆ ವೇಳೆ ಎದೆನೋವು ಎಂದು ಹೇಳಿದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಎದೆನೋವಿನಿಂದ ಈತ ಸಾವನ್ನಪ್ಪಿದ್ದಾನೆ. ಇದನ್ನ ಆಸ್ಪತ್ರೆಯ ವೈದ್ಯರು ಸಹ ದೃಢಪಡಿಸಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಸಿಐಡಿ ಅಧಿಕಾರಿಗಳು ಬಂದು ಮಾಹಿತಿ ಕಲೆಹಾಕಿದ್ದಾರೆ, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಬಂಧಿತ ಜಾನ್ ಬಿಡುಗಡೆಗೊಳಿಸಲು ಪೊಲೀಸರು 30 ಸಾವಿರ ಹಣ ಬೇಡಿಕೆ ಇಟ್ಟಿದ್ದರು, ಅದನ್ನು ಕೊಡಲು ಒಪ್ಪದ ಕಾರಣ ಈ ರೀತಿ ಘಟನೆ ನಡೆದಿದೆ ಎಂದು ಪೊಲೀಸರ ವಿರುದ್ದವೇ ಆರೋಪಿಸಿದ್ದ ಆಫ್ರಿಕನ್ ಪ್ರಜೆಗಳು, ಇನ್ಸ್ ಪೆಕ್ಟರ್ ವಿರುದ್ದ ಘೋಷಣೆ ಕೂಗಿದ್ದಾರೆ. ಈ ಸಾವಿಗೆ ಪೊಲೀಸರೇ ಕಾರಣವಾಗಿದ್ದು, ಜಾನ್ನನ್ನು ಬಂಧಿಸಿದ ಪೊಲೀಸರು ಸ್ಥಳಕ್ಕೆ ಬರುವಂತೆ ಗಲಾಟೆ ನಡೆಸಿದ್ದಾರೆ.
ಇದೇ ವೇಳೆ ಜಾನ್ ಸ್ನೇಹಿತರು ಹಾಗೂ ಪೊಲೀಸರ ನಡುವೆ ತಳ್ಳಾಟ ಉಂಟಾಗಿದೆ, ಜೆಸಿ ನಗರ ಸಬ್‌ಇನ್ಸ್ಪೆಕ್ಟರ್ ಲತಾ ಅವರನ್ನು ತಳ್ಳಿದ್ದರಿಂದ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಮೃತ ವ್ಯಕ್ತಿ ಪೆಡ್ಲರ್ : ಮೃತ ವ್ಯಕ್ತಿ ಕೂಡ ಪೆಡ್ಲರ್ ಆಗಿದ್ದು, 176 ಸಿಆರ್ಪಿಸಿ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. ಇದನ್ನ ನಾವು ಕಸ್ಟೋಡಿಯಲ್ ಡೆತ್ ಅಂತ ಪರಿಗಣಿಸಿದ್ದೇವೆ.. ಇದರ ಬಗ್ಗೆ ಸಿಐಡಿ ಮತ್ತು ಮಾನವ ಹಕ್ಕು ಆಯೋಗಕ್ಕೂ ಮಾಹಿತಿ ನೀಡಿದ್ದೇವೆ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಕಮಲ್ ಪಂತ್ ಹೇಳಿಕೆ ನೀಡಿದ್ದು, ಮಾಹಿತಿ ಕೊರತೆಯಿಂದ ಗಲಾಟೆ ನಡೆದಿದೆ. ಅಡಿಷನಲ್ ಸಿಪಿ ಸೌಮೇಂದು ಮುಖರ್ಜಿ ಸ್ಥಳಕ್ಕೆ ಹೋಗಿದ್ದು, ಪೊಲೀಸರ ಮೇಲಿನ ಹಲ್ಲೆ ಬಗ್ಗೆ ಮಾನವ ಹಕ್ಕು ಆಯೋಗ ಹಾಗೂ ಸಿಐಡಿಗೂ ಮಾಹಿತಿ ರವಾನಿಸಿದ್ದೇವೆ. ಅವರ ಮೇಲೆ ಕಾನೂನಿನ ಕ್ರಮ ಜರುಗಿಸಿ ಎಂದು ತಿಳಿಸಿದ್ದೇನೆ. ದೊಡ್ಡ ಮಟ್ಟದ ಗಲಾಟೆ ಏನೂ ಆಗಿಲ್ಲ, ನಾನು ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಆಫ್ರಿಕಾ ದೇಶದ ರಾಯಭಾರಿ ಜೆಸಿ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಕಾಂಗೋ ದೇಶದ ರಾಯಭಾರಿ ಕಚೇರಿಯ ಅಧಿಕಾರಿ ಮೋಹನ್ ಸುರೇಶ್ ಇದೇ ವೇಳೆ ಚರ್ಚೆ ನಡೆಸಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿರಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
ಸಿಐಡಿ ಅಧಿಕಾರಿಗಳು ಸಹ ಜೆಸಿ ನಗರ ಠಾಣೆಯಲ್ಲಿ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.