- ತಂದೆಯಿಂದಲೇ ಮಗಳ ಕೊಲೆ, ಮರ್ಯಾದಾಗೇಡಿ ಹತ್ಯೆ ಶಂಕೆ
- ಪಿರಿಯಾಪಟ್ಟಣದ ಕಗ್ಗುಂಡಿ ಗ್ರಾಮದಲ್ಲಿ ನಡೆದ ಭೀಕರ ಘಟನೆ
ಮೈಸೂರು: ಪಿರಿಯಾಪಟ್ಟಣದಲ್ಲಿ ತಂದೆಯೇ ಅಪ್ರಾಪ್ತೆ ಮಗಳನ್ನು ಕೊಲೆ ಮಾಡಿದ್ದು, ಮರ್ಯಾದಾಗೇಡಿ ಹತ್ಯೆ ಎಂದು ಶಂಕಿಸಲಾಗಿದೆ. ಪಿರಿಯಾಪಟ್ಟಣದ ಕಗ್ಗುಂಡಿ ಗ್ರಾಮದ ಸುರೇಶ್ ಮತ್ತು ಬೇಬಿ ದಂಪತಿ ಪುತ್ರಿ ಶಾಲಿನಿ (17) ಕೊಲೆಯಾಗಿರುವಾಕೆ. ಈಕೆ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ಪಕ್ಕದ ಗ್ರಾಮದ ಅನ್ಯ ಸಮುದಾಯದ ಯುವಕನ ಜತೆ ಪ್ರೇಮಾಂಕುರವಾಗಿತ್ತು. ಇದಕ್ಕೆ ಈಕೆಯ ಪೋಷಕರು ಆಕ್ಷೇಪಿದ್ದರೂ ಆಕೆ ಕಿವಿಗೊಡಲಿಲ್ಲ ಎನ್ನಲಾಗಿದೆ. ಈಕೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹೋದ ಸಂದರ್ಭದಲ್ಲಿ ತಂದೆ ಸುರೇಶ್ ಮತ್ತು ಪ್ರಿಯಕರನ ನಡುವೆ ಗಲಾಟೆ ನಡೆದಿದ್ದು. ಈ ವಿಚಾರ ಪಿರಿಯಾಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಮೆಲ್ಲಹಳ್ಳಿ ಬೋರೆ ಗ್ರಾಮದ ಪರಿಶಿಷ್ಟಜಾತಿಯ ಹುಡುಗ ಮಂಜು ಎಂಬಾತನ್ನು ಪ್ರೀತಿಸುತ್ತಿದ್ದಳು. ಮಂಜು ಹಾಗೂ ಶಾಲಿನಿ ಪಟ್ಟಣದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಾ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಯನ್ನು ಶಾಲಿನಿ ಪೋಷಕರು ವಿರೋಧಿಸಿದ್ದರು. ಇದಾದ ನಂತರ ಮದುವೆಯಾಗಲು ಪ್ರೇಮಿಗಳು ನಿರ್ಧರಿಸಿದ್ದರು. ಪ್ರಿಯಕರನಿಗಾಗಿ ಶಾಲಿನಿ ಮನೆ ಬಿಟ್ಟು ಬಂದ ಮೇಲೆ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರ ಮುಂದೆ ಶಾಲಿನಿ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಅಲ್ಲದೆ ಆಕೆಗೆ 18 ವರ್ಷ ತುಂಬಿರದ ಕಾರಣ ಪೊಲೀಸರು ಆಕೆಯನ್ನು ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಶಾಲಿನಿ ತನ್ನ ಪೋಷಕರಿಗೆ ಮೈಸೂರಿನ ಬಾಲ ಮಂದಿರದಿಂದ ಕರೆ ಮಾಡಿ ಕರೆದುಕೊಂಡು ಹೋಗುವಂತೆ ಹೇಳಿದಾಗ ಪೋಷಕರು ಒಪ್ಪಿಗೆ ಪತ್ರ ಬರೆದುಕೊಟ್ಟು ತಮ್ಮ ಮಗಳನ್ನು ಸ್ವಗ್ರಾಮಕ್ಕೆ ಕರೆತಂದಿದ್ದರು.
ಮತ್ತೇ( ಜೂನ್ 6) ರಂಧು ರಾತ್ರಿ ಶಾಲಿನಿ ಮತ್ತೆ ತನ್ನ ಪೋಷಕರೊಂದಿಗೆ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಹೋಗುವುದಾಗಿ ಹಠ ಮಾಡಿ ಕುಳಿತಾಗ ಆಕೆಯ ತಂದೆ ಸುರೇಶ್ ಇದಕ್ಕೆ ಒಪ್ಪದೆ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮಗಳ ದೇಹವನ್ನು ಪೋಷಕರಿಬ್ಬರು ಸೇರಿ ಆಕೆ ಪ್ರೀತಿಸುತ್ತಿದ್ದ ಹುಡುಗನ ಗ್ರಾಮದ ಜಮೀನೊಂದರ ಬಳಿ ಎಸೆದು ಹೋಗಿದ್ದಾರೆ. ಮಂಗಳವಾರ ಬೆಳಗ್ಗೆ 6.30ರ ಸಮಯದಲ್ಲಿ ಸುರೇಶ್ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾರೆ.