ಡಾ. ಶ್ರೀನಿವಾಸ್ ಕಕ್ಕಿಲಾಯ
‘ಸಕ್ಕರೆ ಕಾಯಿಲೆ ಅಷ್ಟೊಂದು ಸರಳ ಎಂದಾದರೆ ಯಾರೇ ಸರ್ಜನ್ ಆದರೂ ಅದಕ್ಕೆ ಚಿಕಿತ್ಸೆ ನೀಡಬಹುದಿತ್ತು’ ಎಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿದ್ಯಾಲಯದಲ್ಲಿ ಎಲ್ಲರ ಗೌರವಕ್ಕೂ ಪಾತ್ರರಾಗಿದ್ದ ಡಾ. ಎಸ್ ಜಿ ದೇಸಾಯಿ ಹೇಳುತ್ತಿದ್ದರಂತೆ ಎಂದು ಮಾರ್ಚ್ ಒಂದರಂದು ಬರೆದಿದ್ದೆ. ಈಗ ಮತ್ತೆ ನೆನಪಿಸಬೇಕಾಗಿ ಬಂದಿದೆ.
ಸಕ್ಕರೆ ಕಾಯಿಲೆಯನ್ನು ಸಕ್ಕರೆ ರಹಿತ ಪಥ್ಯ ಕ್ರಮದಿಂದಲೇ ನಿಯಂತ್ರಿಸಬಹುದು ಎಂದು ಹದಿನೇಳು ವರ್ಷಗಳ ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾಗ ವ್ಯಂಗ್ಯವಾಡಿದ್ದವರೇ ಹೆಚ್ಚು. ಈಗ ಸಕ್ಕರೆ ಕಾಯಿಲೆಗೆ ಮಾತ್ರವಲ್ಲ, ಸಕಲ ರೋಗಗಳಿಗೂ ಪಥ್ಯಕ್ರಮ ಹಾಗೂ ಜೀವನಶೈಲಿಗಳನ್ನು ಕಲಿಸಿಕೊಡುವುದಾಗಿ ಹೇಳಿಕೊಳ್ಳುವ ‘ಗುರುಗಳು’ ಎಲ್ಲೆಂದರಲ್ಲಿ ಉದ್ಭವಿಸುತ್ತಿರುವಾಗ, ಅವರಲ್ಲಿ ಕೆಲವರು ಪರಿಚಿತರೂ, ವೈದ್ಯರೂ ಆಗಿರುವಾಗ, ಅವಕ್ಕೆಲ್ಲ ಪ್ರತಿಕ್ರಿಯಿಸಬೇಕೋ ಬೇಡವೋ ಎನ್ನುವುದು ಅರ್ಥವಾಗದಂತಹ ಸಂದಿಗ್ಧ ಸ್ಥಿತಿ ಬಂದೊದಗಿದೆ. ವಸ್ತುನಿಷ್ಠವಾಗಿ ಬರೆದೆನೆಂದರೆ ‘ಇವರು ತಾವೊಬ್ಬರೇ ತಜ್ಞರಂತೆ ಬರೆಯುತ್ತಾರೆ’ ಅಂತ ನಿಜಕ್ಕೂ ತಜ್ಞರಲ್ಲದ ಇಂಥವರಿಂದ ಕೇಳಬೇಕಾಗಬಹುದು, ಹೇಳದೇ ಸುಮ್ಮನಿದ್ದರೆ ಆಗುವ ಅನಾಹುತಗಳಿಗೆ ಉತ್ತರ ಹೇಳುವ ಸ್ಥಿತಿಯೊದಗಬಹುದು! ಏನೇ ಇರಲಿ, ಈಗ ಒಂದಿಷ್ಟು ಬರೆಯಲೇ ಬೇಕಾಗಿದೆ.
ವಿಷಯ ಇಷ್ಟೇ: ಸಕ್ಕರೆ ಕಾಯಿಲೆ ಸರಳ ಸಮಸ್ಯೆಯಲ್ಲ; ಅದರ ಚಿಕಿತ್ಸೆ ಎಂದರೆ ಕೇವಲ ಆಹಾರದ ಬಗ್ಗೆ ಸಲಹೆ ನೀಡುವುದು ಅಥವಾ ಒಂದಿಷ್ಟು ಔಷಧಗಳನ್ನು ಬರೆದುಕೊಡುವುದಷ್ಟೇ ಅಲ್ಲ; ಸಕ್ಕರೆ ಕಾಯಿಲೆಯಿರುವವರಿಗೆ ವೈದ್ಯರಲ್ಲದವರು ಅಥವಾ ವೈದ್ಯರಾಗಿದ್ದರೂ ಸಕ್ಕರೆ ಕಾಯಿಲೆಯ ಬಗ್ಗೆ ಪರಿಣತಿಯಿಲ್ಲದವರು ಸಲಹೆ ನೀಡುವುದು ಅಪೇಕ್ಷಣೀಯವೂ ಅಲ್ಲ; ವ್ಯಕ್ತಿಯ ಸಮಸ್ಯೆಗಳ ಅರಿವಿಲ್ಲದೆ, ಅಥವಾ ಅವನ್ನು ತಿಳಿಯುವ ಅರ್ಹತೆಯೋ, ಪರಿಣತಿಯೋ ಇಲ್ಲದೆ, ಫೋನ್ ಮೂಲಕವೋ, ಆನ್ ಲೈನ್ ಆಗಿಯೋ ಸಲಹೆ ನೀಡುವುದಾಗಲೀ ಪಡೆಯುವುದಾಗಲೀ ಸರಿಯಲ್ಲ, ಮಾತ್ರವಲ್ಲ, ಅಪಾಯಕಾರಿಯೂ ಆಗಬಹುದು.
ಇನ್ನೊಂದೆಡೆ, ಸಕ್ಕರೆ ಕಾಯಿಲೆಯಲ್ಲೇ ವಿಶೇಷ ತಜ್ಞರಾಗಿರುವ ವೈದ್ಯರಿಗೂ ಕೂಡ ಕಳೆದ 15 ವರ್ಷಗಳಲ್ಲಿ ಸಕ್ಕರೆ ಕಾಯಿಲೆ ಮತ್ತು ಇತರ ಸಂಬಂಧಿತ ಸಮಸ್ಯೆಗಳಾದ ಹೃದ್ರೋಗ, ರಕ್ತದ ಏರೊತ್ತಡ, ಬೊಜ್ಜು ಇತ್ಯಾದಿಗಳ ಮೂಲ ಕಾರಣಗಳ ಬಗ್ಗೆ ನಡೆದಿರುವ ಬಹಳಷ್ಟು ಅಧ್ಯಯನಗಳ ಬಗ್ಗೆ ಸಾಕಷ್ಟು ಮಾಹಿತಿಯಿಲ್ಲ ಅಥವಾ ಆಸಕ್ತಿಯಿಲ್ಲ. ಅವರು ಈಗಲೂ ಬಗೆಬಗೆಯ ಮಾತ್ರೆಗಳನ್ನು, ಬಗೆಬಗೆಯ ಇನ್ಸುಲಿನ್ ಅನ್ನು, ಅವಲ್ಲೂ ಹೊಸಹೊಸತಾದವನ್ನು, ಕೊಡುವುದಷ್ಟೇ ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಎಂಬಂತೆ ವರ್ತಿಸುತ್ತಿದ್ದಾರೆ. ಈ ಚಿಕಿತ್ಸೆಯಿಂದ ಜನರಿಗೆ ವಿಪರೀತ ಖರ್ಚು ಒಂದೆಡೆಯಾದರೆ ಕಾಯಿಲೆಯು ನಿರೀಕ್ಷೆಯಷ್ಟು ಶಮನಗೊಳ್ಳದಿರುವ ಬೇಸರ, ಆತಂಕ ಇನ್ನೊಂದೆಡೆ ಎಂಬಂತಾಗಿ ಇಂಥ ಆಧುನಿಕ ಚಿಕಿತ್ಸಾ ಕ್ರಮಗಳ ಬಗ್ಗೆ ಭ್ರಮನಿರಸನವಾಗುವಂತಾಗಿದೆ.
ಇದೇ ಕಾರಣಕ್ಕೆ ಸಕ್ಕರೆ ಕಾಯಿಲೆಯುಳ್ಳವರು ತಮಗೆಲ್ಲಿ ಸಹಾಯವಾಗಬಹುದು ಎಂದು ಏನೇನೋ ಪ್ರಯತ್ನಿಸುವಂತಾಗಿದೆ. ಅಂತಲ್ಲಿ ಸ್ವಘೋಷಿತ ಆಹಾರ-ಜೀವನಶೈಲಿ ಗುರುಗಳು, ಬದಲಿ-ನಕಲಿ ಪದ್ಧತಿಗಳವರು, ವ್ಯಾಯಾಮ ಪಂಡಿತರು, ಯೋಗ ಗುರುಗಳು, ಧಾನ್ಯಗಳ ಪುಡಿಗಳನ್ನು ಆಕರ್ಷಕ ಡಬ್ಬಗಳಲ್ಲಿ ಮಾರುವವರು, ಅವುಗಳಿಂದ ಮಹಾ ಪ್ರಯೋಜನಗಳಿವೆಯೆಂದು ಲಕ್ಷಗಟ್ಟಲೆ ಪಡೆದು ಭಾಷಣ ಕೊರೆಯುವ ಸ್ವಘೋಷಿತ ಆಹಾರ ತಜ್ಞರು ಎಲ್ಲರೂ ಆಕ್ರಮಿಸಿಕೊಂಡು ತಮ್ಮ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ.
ಸಕ್ಕರೆ ಕಾಯಿಲೆಯಿಂದ ಮತ್ತು ಅದರ ಚಿಕಿತ್ಸೆಯಿಂದ (ಮಾತ್ರೆಗಳಿರಬಹುದು ಯಾ ಇನ್ಸುಲಿನ್ ಇರಬಹುದು) ದೇಹದ ಅನೇಕ ಅಂಗಗಳಿಗೆ ನಿಧಾನವಾಗಿ ಸಮಸ್ಯೆಗಳಾಗುತ್ತಾ ಹೋಗುತ್ತವೆ. ಆಹಾರ ಮತ್ತು ಜೀವನಶೈಲಿ ಸರಿಯಿಲ್ಲದಿದ್ದರೆ ಸಕ್ಕರೆ ಕಾಯಿಲೆ ಇಲ್ಲದೆಯೂ ಇಂಥ ಸಮಸ್ಯೆಗಳು ಬೆಳೆಯುತ್ತಿರುತ್ತವೆ, ಸಕ್ಕರೆ ಕಾಯಿಲೆ ಜೊತೆಗೂಡಿದರೆ ಇನ್ನಷ್ಟು ವರ್ಧಿಸುತ್ತವೆ. ಇದೇ ಕಾರಣಕ್ಕೆ ಸಕ್ಕರೆ ಕಾಯಿಲೆ ಅಂದರೆ ಕೇವಲ ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಏರಿಕೆ ಮಾತ್ರ ಅಲ್ಲ, ಅದಕ್ಕಿಂತಲೂ ಬಹಳ ಹೆಚ್ಚು ಎನ್ನುವುದನ್ನು ಅರಿತಿರಬೇಕು.
ಸಕ್ಕರೆ ಕಾಯಿಲೆಯುಳ್ಳವರು ಐದಾರು ವರ್ಷ ಮಾತ್ರೆ ಅಥವಾ ಇನ್ಸುಲಿನ್ ಪಡೆಯುತ್ತಿದ್ದಂತೆ ರಕ್ತದ ಸಕ್ಕರೆಯಿಂದಲೂ, ಪಡೆಯುತ್ತಿರುವ ಔಷಧಗಳಿಂದಲೂ ಅವರ ರಕ್ತನಾಳಗಳಿಗೆ, ನರಮಂಡಲಕ್ಕೆ ನಿಧಾನವಾಗಿ ಹಾನಿಯಾಗುತ್ತಾ ಇರುತ್ತದೆ. ಇದರಿಂದಾಗಿ ನರಶೂಲೆ, ರಕ್ತದೊತ್ತಡದಲ್ಲಿ ಏರಿಕೆ, ದೇಹದ ತೂಕದಲ್ಲಿ ಏರಿಕೆ, ಯಕೃತ್ತಿನಲ್ಲಿ ಮೇದಸ್ಸು ತುಂಬುವುದು, ರಕ್ತನಾಳಗಳಲ್ಲಿ ಮೇದಸ್ಸು ಶೇಖರಗೊಂಡು ಹೃದಯ ಮತ್ತು ಮಿದುಳಿನ ರಕ್ತಸಂಚಾರಕ್ಕೆ ಅಡ್ಡಿಯಾಗುವುದು, ಕಣ್ಣಿನ ಹಾಗೂ ಮೂತ್ರಪಿಂಡಗಳ ಸೂಕ್ಷ್ಮ ರಕ್ತನಾಳಗಳಲ್ಲಿ ಸೋರುವಿಕೆಯಾಗುವುದು ಮುಂತಾದ ಸಮಸ್ಯೆಗಳು ಬೆಳೆಯುತ್ತಾ ಹೋಗುತ್ತವೆ. ಹೀಗೆ ಬೆಳೆದ ಸಮಸ್ಯೆಗಳಲ್ಲಿ ಹೆಚ್ಚಿನವು ಶಾಶ್ವತವಾಗಿರುತ್ತವೆ.
ಸಕ್ಕರೆ ಕಾಯಿಲೆಯುಳ್ಳವರು ಸಕ್ಕರೆ, ಧಾನ್ಯಗಳು, ಹಣ್ಣುಗಳು ಮುಂತಾದ ಗ್ಲೂಕೋಸ್-ಫ್ರಕ್ಟೊಸ್ ಭರಿತ ಆಹಾರವಸ್ತುಗಳನ್ನು ತ್ಯಜಿಸಿ ತಮ್ಮ ಆಹಾರಕ್ರಮವನ್ನು ಬದಲಿಸಿದರೆ ಔಷಧಗಳಿಲ್ಲದೆಯೇ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಅದರಿಂದ ಸಕ್ಕರೆ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಅಂದರೆ, ರಿವರ್ಸ್ ಮಾಡಲು ಸಾಧ್ಯವಿಲ್ಲ, ಔಷಧಗಳಿಲ್ಲದೆಯೇ ನಿಯಂತ್ರಣದಲ್ಲಿಡಲಷ್ಟೇ ಸಾಧ್ಯವಿದೆ. ಸಕ್ಕರೆ ಕಾಯಿಲೆಯು ಶಾಶ್ವತವಾದುದರಿಂದ ಯಾವುದೇ ಸಂದರ್ಭದಲ್ಲಿ ಈ ಆಹಾರಕ್ರಮದಲ್ಲಿ ತಪ್ಪಿ ತಿನ್ನಬಾರದ್ದನ್ನು ತಿಂದರೆ ರಕ್ತದ ಸಕ್ಕರೆ ಮೇಲೇರುತ್ತದೆ. ಆದ್ದರಿಂದ ಸಕ್ಕರೆ ಕಾಯಿಲೆಯನ್ನು ಆಹಾರಕ್ರಮದಲ್ಲೇ ನಿಯಂತ್ರಿಸಲು ಹೊರಟವರು ಜೀವನಪರ್ಯಂತ ಪ್ರತಿಯೊಂದು ತಿನ್ನುವಿಕೆಯಲ್ಲೂ ಕಟ್ಟೆಚ್ಚರ ವಹಿಸಬೇಕಾಗುತ್ತದೆ.
ಹೀಗೆ ಆಹಾರಕ್ರಮದಿಂದ ರಕ್ತದ ಸಕ್ಕರೆಯ ನಿಯಂತ್ರಣವಾಗಿ ದೇಹದ ತೂಕದಲ್ಲಿ ಇಳಿಕೆಯಾದರೂ, ರಕ್ತನಾಳಗಳಿಗೆ, ಮೂತ್ರಪಿಂಡಗಳಿಗೆ, ಕಣ್ಣುಗಳಿಗೆ, ನರಗಳಿಗೆ ಅದಾಗಲೇ ಆಗಿರುವ ಶಾಶ್ವತ ಹಾನಿಗಳು ಸರಿಯಾಗವು. ಅವುಗಳ ಹಾನಿಗಳು ಗಣನೀಯ ಮಟ್ಟದ್ದಾಗಿದ್ದರೆ, ಆಹಾರಕ್ರಮದಿಂದ ಸಕ್ಕರೆಯ ಮಟ್ಟ ನಿಯಂತ್ರಣದಲ್ಲೇ ಉಳಿದರೂ ಕೂಡ ಆ ಹಾನಿಗಳು ಬಿಗಡಾಯಿಸುವುದನ್ನು ತಡೆಯಲು ಸಾಧ್ಯವಾಗದಿರಬಹುದು. ಆದ್ದರಿಂದ ಒಂದಷ್ಟು ವರ್ಷಗಳ ಕಾಲ ಸಕ್ಕರೆ ಕಾಯಿಲೆಗೆ ಔಷಧಗಳನ್ನು ಪಡೆಯುತ್ತಿದ್ದವರು ಒಮ್ಮಿಂದೊಮ್ಮೆಗೆ ಆಹಾರಕ್ರಮವನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಸಕ್ಕರೆ ಕಾಯಿಲೆಯ ಔಷಧಗಳನ್ನು ತ್ಯಜಿಸಿದರೂ ಕೂಡ ಆಗಲೇ ಆಗಿರುವ ಇತರ ಸಮಸ್ಯೆಗಳನ್ನು ಮರೆಯಕೂಡದು, ಕಡೆಗಣಿಸಕೂಡದು, ಅವುಗಳ ಚಿಕಿತ್ಸೆಯನ್ನು ನಿಲ್ಲಿಸಕೂಡದು.
ಆಧುನಿಕ ಚಿಕಿತ್ಸೆಯ ಮೇಲೆ ಭ್ರಮನಿರಸನವಾಗಿದೆ ಎಂದು ಹೇಳಿಕೊಂಡು ಹೃದ್ರೋಗ, ಮೂತ್ರಪಿಂಡಗಳ ಸಮಸ್ಯೆ, ಕಣ್ಣಿನ ಸಮಸ್ಯೆ ಮುಂತಾದವಕ್ಕೂ ಸಲಹೆ-ಚಿಕಿತ್ಸೆ ಪಡೆಯದೆ, ಆಹಾರದ ಬದಲಾವಣೆಯಿಂದ ಇವೆಲ್ಲವೂ ಕೂಡಲೇ ಸರಿಯಾಗಿ ಬಿಡುತ್ತವೆ ಎಂದು ತಮ್ಮಷ್ಟಕ್ಕೆ ಪೊಳ್ಳು ಧೈರ್ಯದಿಂದಿರುವುದು ಸರಿಯಲ್ಲ.
ಹೃದಯದ ರಕ್ತನಾಳಗಳಲ್ಲಿ ಅಡಚಣೆಯಾಗಿದ್ದರೆ ಅದರಿಂದ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗಿ, ಯಾವುದೇ ಕೆಲಸವನ್ನು ಮಾಡುವಾಗ ಕಷ್ಟವೆನಿಸುವ ಲಕ್ಷಣಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಯಾರಲ್ಲೇ ಆದರೂ ಯಾವುದೇ ಮುನ್ಸೂಚನೆಯಿಲ್ಲದೆ ಹಠಾತ್ ಹೃದಯಾಘಾತ ಅಥವಾ ಹೃದಯಸ್ಥಂಭನವಾಗುವ ಸಾಧ್ಯತೆಗಳು ಅತಿ ವಿರಳ. ಆದ್ದರಿಂದ, ಪ್ರತಿನಿತ್ಯವೂ ಅಭ್ಯಾಸವಾಗಿರುವ ಕೆಲಸಗಳನ್ನು ಮಾಡುವಾಗ ಯಾವುದೇ ಕಷ್ಟಗಳು ಕಂಡುಬಂದರೂ ಕೂಡಲೇ ಹೃದಯದ ಸ್ಥಿತಿಯ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಕ್ಕರೆ ಕಾಯಿಲೆಯಿದ್ದವರಲ್ಲಿ ನರಗಳ ಸಮಸ್ಯೆಯಿರುವ ಸಾಧ್ಯತೆಯಿರುವುದರಿಂದ, ಅಂಥವರಲ್ಲಿ ಹೃದ್ರೋಗದ ಲಕ್ಷಣವೆಂದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಎದೆ ನೋವು ಕಾಣಿಸದೇ ಇರಬಹುದು. ಹಾಗಾಗಿ ಎದೆ ನೋವಿದ್ದರಷ್ಟೇ ಹೃದಯದ ಸಮಸ್ಯೆ ಎಂದು ಸುಮ್ಮನಿರಬಾರದು. ದೈನಂದಿನ ಕೆಲಸಗಳನ್ನು ಮಾಡುವಾಗ ಎದೆ ಯಾ ಕುತ್ತಿಗೆ ಹಿಂಡಿದಂತಾಗುವುದು, ಭಾರವೆನಿಸುವುದು, ಭುಜ ಅಥವಾ ತೋಳುಗಳಲ್ಲಿ ಸೆಳೆತವುಂಟಾಗುವುದು, ಆಯಾಸ ಅಥವಾ ಉಸಿರಾಟದ ಕಷ್ಟ, ನಡೆಯುತ್ತಿದ್ದಂತೆ ಮುಂದಕ್ಕೆ ಹೋಗಲಾಗದೆ ನಿಲ್ಲಬೇಕೆನಿಸುವುದು, ನಡೆಯುತ್ತಿರುವಾಗ ಎದೆ ಉರಿ ಅಥವಾ ಹೊಟ್ಟೆ ಉಬ್ಬಿದಂತಾಗುವುದು ಇಂಥ ಯಾವುದೇ ಲಕ್ಷಣಗಳಿದ್ದರೂ ತಜ್ಞ ವೈದ್ಯರನ್ನು ಕಾಣಬೇಕು. ಕೆಲವೊಮ್ಮೆ ವೈದ್ಯರೂ ಕೂಡ ಇಂಥ ಲಕ್ಷಣಗಳ ಬಗ್ಗೆ ಅಲಕ್ಷ್ಯವಹಿಸಿ ನೋವಿನ ಮಾತ್ರೆ, ‘ಗ್ಯಾಸ್ಟ್ರಿಕ್’ ಸಮಸ್ಯೆಗೆ ಮಾತ್ರೆ ಎಂದು ಬರೆದು ಕೊಟ್ಟು ಕಳುಹಿಸಲು ನೋಡಿದರೂ, ಮೇಲೆ ಹೇಳಿದಂತೆ ನಡೆಯುವಾಗ ಅಥವಾ ಕೆಲಸ ಮಾಡುವಾಗ ಸಮಸ್ಯೆಗಳು ಉಂಟಾಗುವುದಿದ್ದರೆ ಹೃದಯದ ಪರೀಕ್ಷೆ ಮಾಡಿಸುವಂತೆ ಒತ್ತಾಯಿಸುವುದು ಒಳ್ಳೆಯದು.
ಇತ್ತೀಚೆಗೆ ವರದಿಯಾಗುತ್ತಿರುವ ಅನೇಕ ಸಾವುಗಳು ಜಿಮ್ ಗಳಲ್ಲಿ ಜೋರಾದ ವ್ಯಾಯಾಮಗಳನ್ನು ಮಾಡುವಾಗಲೇ ಸಂಭವಿಸಿರುವುದನ್ನು ಗಮನಿಸಬಹುದು. ಇಂಥ ತೀವ್ರ ವ್ಯಾಯಾಮಗಳ ಸಂದರ್ಭದಲ್ಲಿ ದೇಹದ ಸ್ನಾಯುಗಳಿಗೆ ಹೆಚ್ಚಿನ ರಕ್ತ ಪೂರೈಕೆ ಬೇಕಾಗುವುದರಿಂದ ದೇಹದೊಳಗಿರುವ ರಕ್ತವು ಅವುಗಳೆಡೆಗೆ ವರ್ಗಾಯಿಸಲ್ಪಡುತ್ತದೆ. ವ್ಯಾಯಾಮದ ವೇಳೆ ರಕ್ತ ಹಾಗೂ ಆಮ್ಲಜನಕದ ಅಗತ್ಯಗಳನ್ನು ಪೂರೈಸಲು ಹೃದಯ ಹಾಗೂ ಉಸಿರಾಟದ ಗತಿಯೂ ಏರಬೇಕಾಗುತ್ತದೆ, ಹೃದಯದ ಸ್ನಾಯುಗಳಿಗೂ ಹೆಚ್ಚು ರಕ್ತ ಪೂರೈಕೆ ಬೇಕಾಗುತ್ತದೆ. ಅಂತಲ್ಲಿ, ಸಕ್ಕರೆ ಕಾಯಿಲೆಯಿಂದ ಅಥವಾ ಅದಿಲ್ಲದೆಯೂ, ಹೃದಯದ ರಕ್ತನಾಳಗಳಲ್ಲಿ ಅಡಚಣೆಯಿದ್ದವರಲ್ಲಿ ಈ ಹೆಚ್ಚಿದ ಬೇಡಿಕೆಯನ್ನು ಪೂರೈಸಲಾಗದೆ ಹೃದಯಾಘಾತವಾಗಬಹುದು, ಕೆಲವೊಮ್ಮೆ ರಕ್ತನಾಳಗಳಲ್ಲಿ ಶೇಖರವಾಗಿರುವ ಮೇದಸ್ಸಿನ ಪದರವು ಒಮ್ಮೆಗೇ ಕಿತ್ತು ಹೋಗಿ ರಕ್ತನಾಳ ಮುಚ್ಚಿ ಹೋಗಬಹುದು, ರಕ್ತಸಂಚಾರ ಸಾಕಾಗದೆ ಹೃದಯದ ಬಡಿತವನ್ನುಂಟುಮಾಡುವ ಹೃದಯದೊಳಗಿನ ವಿದ್ಯುತ್ ಸಂಚಾರಕ್ಕೆ ಅಡ್ಡಿಯಾಗಬಹುದು ಮತ್ತು ಇವುಗಳಿಂದಾಗಿ ಹೃದಯಸ್ಥಂಭನವಾಗಬಹುದು.
ಇಂಥ ತೀವ್ರ ವ್ಯಾಯಾಮಗಳನ್ನು ಮಾಡುವ ಅಗತ್ಯವೇನಿದೆ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕು. ಯಾರೋ ಮಾಡುತ್ತಾರೆ, ಯಾರೋ ಹೇಳುತ್ತಾರೆ, ಯಾರೋ ವಿಡಿಯೋ ಹಾಕುತ್ತಾರೆ, ಯಾರದೋ ಕೈಕಾಲುಗಳ ಸ್ನಾಯುಗಳು ಸ್ಫುಟವಾಗಿವೆ ಎಂಬ ಕಾರಣಕ್ಕೆ ಇವನ್ನೆಲ್ಲ ಮಾಡಬೇಕೋ ಅಥವಾ ಆರೋಗ್ಯಕ್ಕಾಗಿ ಮಾಡಬೇಕೋ ಎನ್ನುವುದನ್ನು ಯೋಚಿಸಬೇಕು. ಪ್ರತಿನಿತ್ಯ 40-45 ನಿಮಿಷ ವೇಗವಾಗಿ ನಡೆಯುವುದು ಅಥವಾ ಈಜುವುದು ಅತ್ಯುತ್ತಮ ವ್ಯಾಯಾಮವೆಂದೂ, ತೀವ್ರತರದ ವ್ಯಾಯಾಮಗಳಿಗಿಂತಲೂ ಉತ್ತಮವಾದುದೆಂದೂ ಶತಸ್ಸಿದ್ಧವಾಗಿರುವಾಗ ಇಂಥ ಜಿಮ್ ವ್ಯಾಯಾಮಕ್ಕೆ ತೊಡಗುವ ಅಗತ್ಯವೇನು? ಅದರಲ್ಲೂ 40-50 ವರ್ಷಕ್ಕಿಂತ ಮೇಲ್ಪಟ್ಟವರು, ರಕ್ತನಾಳಗಳ ಸಮಸ್ಯೆಯಿರುವ ಸಾಧ್ಯತೆಗಳಿರುವವರು ಆ ಬಗ್ಗೆ ಪರೀಕ್ಷಿಸಿಕೊಳ್ಳದೆ ಇಂಥ ತೀವ್ರ ವ್ಯಾಯಾಮಗಳನ್ನು ಮಾಡುವುದು ಸರಿಯಲ್ಲ.