ಬೆಂಗಳೂರು: ಹಾಸನದ ರಾಜೀವ್ ಮತ್ತು ರತ್ನಾ ನರ್ಸಿಂಗ್ ಕಾಲೇಜು ವಸತಿ ನಿಲಯದಲ್ಲಿ ನಿನ್ನೆ ಕಲುಷಿತ ಆಹಾರ ಸೇವಿಸಿ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಈ ಘಟನೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಖಂಡಿಸಿದೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಹಾಗೂ ರಾಜ್ಯ ಕಾರ್ಯದರ್ಶಿ ಭೀಮನಗೌಡ, ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಘಟನೆಯಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಆಡಳಿತ ಮಂಡಳಿಯ ತೀವ್ರ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಸುಮಾರು 60 ಕಾಲೇಜು ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವಿಸಿ, ತೀವ್ರ ವಾಂತಿ ಭೇದಿ ಕಾಣಿಸಿಕೊಂಡಿರುವುದು ಬೇಸರ ತಂದಿದೆ. ಸಂತ್ರಸ್ತ ವಿದ್ಯಾರ್ಥಿಗಳನ್ನು ರಾಜೀವ್, ಮತ್ತು ಹಿಮ್ಸ್ ಆಸ್ಪತ್ರೆಗಳು ಹಾಗೂ ಕಾಲೇಜು ಒಡೆತನದ ಆಯುರ್ವೇದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶುಚಿತ್ವ ಮತ್ತು ಕಳೆಪ ಗುಣಮಟ್ಟದ ಆಹಾರ ಪೂರೈಕೆಯೇ ಇದಕ್ಕೆ ಮುಖ್ಯವಾದ ಕಾರಣವಾಗಿದೆ. ಒಂದೇ ಹಾಸ್ಟೆಲ್ನಲ್ಲಿ ವಾಸಿಸುವ ರಾಜೀವ್ ಮತ್ತು ರತ್ನಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗಿರುವ ಪರಿಣಾಮ ಈ ಘಟನೆ ಸಂಭವಿಸಿದೆ ಇದಕ್ಕೆ ಹಾಸ್ಟೆಲ್ ವಾರ್ಡನ್ ಸೇರಿ ಸಂಬಂಧಿಸಿದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೆ ಹೊಣೆ ಎಂದು ದೂರಿದ್ದಾರೆ.
ಈ ಘಟನೆಗಳನ್ನು ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ, ನಿರ್ಲಕ್ಷ್ಯ ವಹಿಸುವ ಜವಾಬ್ದಾರಿಯುತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ವಿಫಲರಾದವರ ವಿರುದ್ಧವು ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸುತ್ತೇವೆ. ಹೆಚ್ಚುವರಿಯಾಗಿ, ಸಂಗ್ರಹಿಸಿದ ಆಹಾರ ಮಾದರಿಗಳ ಪರೀಕ್ಷೆಯನ್ನು ಮಾಡಿ ಫಲಿತಾಂಶಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ನಾವು ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಈ ಸಂಶೋಧನೆಗಳ ಆಧಾರದ ಮೇಲೆ ಮುಂದೆ ಇಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ಮುತುವರ್ಜಿಯನ್ನು ವಹಿಸಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ:ವಿದ್ಯಾರ್ಥಿನಿ – ಮಹಿಳೆಯರಿಗೆ ಸೂಕ್ತ ರಕ್ಷಣೆ, ಮುಂಜಾಗೃತ ಕ್ರಮಕ್ಕೆ ಆಗ್ರಹಿಸಿ ಎಸ್ಎಫ್ಐ ಮನವಿ
ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಮಂತ್ರಿಗಳು ಕೂಡಲೇ ಮಧ್ಯೆ ಪ್ರವೇಶ ಮಾಡಿ ಈ ಸಮಸ್ಯೆಯನ್ನು ಪರಿಹರಿಸಿ ತಪಿಸತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು. ಸಂತ್ರಸ್ತ ವಿದ್ಯಾರ್ಥಿಗಳಿಗೆ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸಬೇಕು. ರಾಜ್ಯದಾದ್ಯಂತ ಇರುವ ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸಲು ತುರ್ತು ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಯೋಜನೆಯನ್ನು ರೂಪಿಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.