ಮಂಗಳೂರು: ಲವ್ ಜಿಹಾದ್ ವಿಷಯದ ಮೇಲೆ ಕೇಂದ್ರೀಕರಿಸಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಮಂಗಳೂರಿನಲ್ಲಿ ಸೋಮವಾರ(ಜನವರಿ 02) ‘ಬೂತ್ ವಿಜಯ ಅಭಿಯಾನ’ದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಟೀಲ್ , ರಸ್ತೆ, ಚರಂಡಿ ಅಭಿವೃದ್ಧಿ ಕುರಿತು ಬಿಟ್ಟು, ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದರ ಕುರಿತು ಜನರು ಚರ್ಚೆಯಲ್ಲಿ ತೊಡಗುವಂತೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ನಳೀನ್ ಕುಮಾರ್ ಕಟೀಲ್ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಕಾಂಗ್ರೆಸ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. “ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ; ವೇದವ್ಯಾಸ್ ಕೈ ಎತ್ತಿಲ್ಲ, ನಳೀನ್‌ಕುಮಾರ್ ಕಟೀಲ್ ನಕ್ಕಿಲ್ಲ, ನಳೀನ್‌ಕುಮಾರ್ ನಕ್ಕರೆ ನಿಮಗೇನು ಬಂಗಾರ ಸಿಗಲ್ಲ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್ ಜಿಹಾದ್… ಅದನ್ನು ನಿಲ್ಲಿಸಬೇಕಿದ್ದರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕು” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಲವ್ ಜಿಹಾದ್’ ಹೆಚ್ಚಾಗಲಿದೆ. ಗೋಹತ್ಯೆ ಮತ್ತು ಧಾರ್ಮಿಕ ಮತಾಂತರದ ವಿರುದ್ಧದ ಕಾನೂನುಗಳನ್ನು ಹಿಂಪಡೆಯುತ್ತಾರೆ. ಜನರು ಈಗ ‘ನವ ಕರ್ನಾಟಕ’ ಬೇಕೇ ಅಥವಾ ‘ಭಯೋತ್ಪಾದನೆಯ ನಾಡು ಬೇಕೇ ಎಂಬುದನ್ನು ನಿರ್ಧರಿಸಬೇಕಿದೆ. ಕಾಂಗ್ರೆಸ್ ಭಯೋತ್ಪಾದಕರ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಭಯೋತ್ಪಾದಕರಿಗೆ ಫೀಲ್ಡ್ ಡೇ ಆಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು, “ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ ಸಣ್ಣ ವಿಷಯಗಳಂತೆ. ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ” ಎಂದು ಟ್ವೀಟ್ ಮಾಡಿದೆ.
ಬಿಟ್ ಕಾಯಿನ್ ಹಗರಣ , PSI ಅಕ್ರಮ ,ಕೆಪಿಟಿಸಿಎಲ್ ಅಕ್ರಮ ಸಾಲು ಸಾಲು ನೇಮಕಾತಿ ಅಕ್ರಮಗಳು ,ಗುತ್ತಿಗೆದಾರರ ಆತ್ಮಹತ್ಯೆ ,ರಸ್ತೆ ಗುಂಡಿಯ ಸಾವುಗಳು , ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ ಎಂದು ನಳೀನ್ ಕುಮಾರ್ ಕಟೀಲ್ ಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ಸವಾಲ್ ಹಾಕಿದೆ.