ಹೊಸದಿಲ್ಲಿ: ಮೇ 28 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ನಲ್ಲಿ ಸಭೆ ನಡೆಸಲಿದ್ದಾರೆ. ಕೊರೊನಾ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ ಎಂದು ಹಣಕಾಸು ಸಚಿವರು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿರುವಾಗಲೇ ಈ ಸಭೆ ನಡೆಯಲಿದೆ. ಇದು ಆರು ತಿಂಗಳಿಗೂ ಹೆಚ್ಚು ಸಮಯದ ನಂತರ ನಡೆಯುತ್ತಿರುವ ಮೊದಲ ಸಭೆಯಾಗಿದೆ. ಈ ಹಿಂದೆ 2020ರ ಅಕ್ಟೋಬರ್ 5ರಂದು ಕೊನೆಯ ಬಾರಿಗೆ ಜಿಎಸ್ಟಿ ಕೌನ್ಸಿಲ್ ಸಭೆ ನಡೆದಿತ್ತು. ರಾಜ್ಯ ಹಣಕಾಸು ಸಚಿವರ ಒತ್ತಾಯದ ಮೇರೆಗೆ ಈ ಸಭೆ ನಡೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಹಣಕಾಸು ಸಚಿವರು ಈ ಸಭೆಗಾಗಿ ಒತ್ತಾಯಿಸಿದ್ದರು.
Smt @nsitharaman will chair the 43rd GST Council meeting via video conferencing at 11 AM in New Delhi on 28th May 2021. The meeting will be attended by MOS Shri @ianuragthakur besides Finance Ministers of States & UTs and Senior officers from Union Government & States.
— NSitharamanOffice (@nsitharamanoffc) May 15, 2021
ಈ ವಾರದ ಆರಂಭದಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರಾ, 2021-22ರಲ್ಲಿ ರಾಜ್ಯಗಳಿಗೆ ಮೀಸಲಿಟ್ಟಿರುವ 1.56 ಲಕ್ಷ ಕೋಟಿ ರೂ. ಪರಿಹಾರದ ಹಣವನ್ನು ಹೆಚ್ಚಿಸುವ ನಿರ್ಣಾಯಕ ವಿಷಯದ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದರು.
ಜಿಎಸ್ಟಿ ಸಭೆ ಕರೆಯುವಂತೆ ಇನ್ನೋರ್ವ ಹಣಕಾಸು ಸಚಿವ ಪಂಜಾಬ್ನ ಮನ್ಪ್ರೀತ್ ಬಾದಲ್ ಕೂಡ ಒತ್ತಾಯಿಸಿದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ಕೆಲವು ಬಹುಮುಖ್ಯ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಅವರು ಹೇಳಿದ್ದರು. ಹ್ಯಾಂಡ್ ಸ್ಯಾನಿಟೈಸರ್, ಫೇಸ್ ಮಾಸ್ಕ್, ಗ್ಲೌವ್ಸ್, ಪಿಪಿಇ ಕಿಟ್, ಉಷ್ಣಾಂಶ ಅಳೆಯುವ ಉಪಕರಣ, ಆಕ್ಸಿಮೀಟರ್ ಮತ್ತು ಇತರ ವಸ್ತುಗಳಿಗೆ ಜಿಎಸ್ಟಿ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆಯಾಗಬೇಕಿದೆ ಎಂದಿದ್ದರು.