ಡೆಹ್ರಾಡೂನ್: ಉತ್ತರಖಂಡದ ಕೇದಾರನಾಥ ಯಾತ್ರೆ ಮಾರ್ಗದ ಗೌರಿಕುಂಡ ಬಳಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯ ನಂತರ ದಿಢೀರ್ ಪ್ರವಾಹ ಉಂಟಾಗಿದೆ. ಜಲಪಾತದಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ 3 ಅಂಗಡಿಗಳು ಕೊಚ್ಚಿ ಹೋಗಿದ್ದು 12 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭೀಕರ ಮಳೆ ಮತ್ತು ಗುಡ್ಡಗಳಿಂದ ಬೀಳುತ್ತಿರುವ ಬಂಡೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ
ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ. ಆದರೆ ನಾಪತ್ತೆಯಾದ ಯಾವುದೇ ವ್ಯಕ್ತಿಯೂ ಈವರೆಗೆ ಪತ್ತೆಯಾಗಿಲ್ಲ ಎಂದು ಅಧಿಕಾರಿ ವಿಮಲ್ ರಾವತ್ ತಿಳಿಸಿದ್ದಾರೆ.
ಇದನ್ನೂ ಓದಿ:ಮಸೀದಿಗಳ ಮೇಲೆ ಬೆಂಕಿ ಹಚ್ಚಿದ ಕಿಡಿಗೇಡಿಗಳು : ಹರಿಯಾಣ ಗಲಭೆ
ನೇಪಾಳದ ಕೆಲವರು ಸೇರಿದಂತೆ ನಾಪತ್ತೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದ ಎಂದು ಅವರು ಹೇಳಿದ್ದಾರೆ. ನಾಪತ್ತೆಯಾದವರನ್ನು ಪ್ರಯಾಂಶು ಚಮೋಲಾ (18), ಆಶು(23), ವಿನೋದ್ (26) ಮುಲಾಯಂ (25), ರಣಬೀರ್ ಸಿಂಗ್(28), ಅಮರ್ ಬೋಹ್ರಾ ಅವರ ಪತ್ನಿ ಅನಿತಾ ಬೋಹ್ರ,ಅವರ ಪುತ್ರಿಯರಾದ ರಾಧಿಕಾ ಬೋಹ್ರಾ ಮತ್ತು ಪಿಂಕಿ ಬೊಹ್ರಾ ಎಂದು ಗುರುತಿಸಲಾಗಿದೆ.ಮಕ್ಕಳಾದ ಪೃಥ್ವಿ ಬೋಹ್ರಾ (7),ಜತಿಲ್(6) ಹಾಗೂ ವಕೀಲ್(3) ಸಹ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.