ಬೀದರ್: ಕಾರು ಮತ್ತು ಕಂಟೇನರ್ ನಡುವೆ ಡಿಕ್ಕಿಯಾದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಇಲ್ಲಿ ನಡೆದಿದೆ. ಜಿಲ್ಲೆಯ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಬಂಗೂರ್ ಚೆಕ್ ಪೋಸ್ಟ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಬೀದರ್ ತಾಲೂಕಿನ ಮನ್ನಾಖೆಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರನ್ನು ಹೈದರಾಬಾದ್ನ ಬೇಗಂ ಪೇಟ್ ಪ್ರದೇಶದ ನಿವಾಸಿಗಳೆಂದು ಗುರುತಿಸಲಾಗಿದೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈದರಾಬಾದ್ನಿಂದ ಕಲ್ಬುರ್ಗಿಯ ಗಾಣಗಾಪುರ ದೇವಸ್ಥಾನಕ್ಕೆ ಹೋಗುತ್ತಿದ್ದ ಅಪಘಾತ ನಡೆದಿದೆ. ಮೃತರನ್ನು ಮುಖ್ಯ ಪೊಲೀಸ್ ಪೇದೆ ಜಿ. ಗಿರಿಧರ್ (45), ಅವರ ಪತ್ನಿ ಅನಿತಾ (36), ಅವರ ಮಗ ಮಯಾಂಕ್ (2), ಸೊಸೆಯ ಮಗಳು ಪ್ರಿಯಾಂಕಾ (15) ಮತ್ತು ಕಾರು ಚಾಲಕ ಜಗದೀಶ್ (35) ಎಂದು ಗುರುತಿಸಲಾಗಿದೆ.
ಅಪಘಾತದಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಮಯಾಂಕ್ ಮನ್ನೇಕಹಳ್ಳಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಗಿರಿಧರ್ ಅವರ ಪುತ್ರ ಹರ್ಷವರ್ಧನ್ (12) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೀದರ್ ಪೊಲೀಸರು ನೀಡಿದ ಮಾಹಿತಿಯಂತೆ ಸಂತ್ರಸ್ತರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದರು. ಸಂತ್ರಸ್ತರು ಪ್ರಯಾಣಿಸುತ್ತಿದ್ದ ಕಾರು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಗಿರಿಧರ್ ಅವರ ಸ್ನೇಹಿತ ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಿರಿಧರ್ ಅವರ ಸಂಬಂಧಿಕರಾದ ರಜಿತಾ, ಸರಿತಾ, ಶಾಲಿನಿ ಮತ್ತು ಸರಳಾ ಅವರುಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಹೈದರಾಬಾದ್‌ಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಸತೀಶ್, ವೃತ್ತ ನಿರೀಕ್ಷಕ ಶ್ರೀಕಾಂತ ಅಲ್ಲಾಪುರ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಲ್ಲಪ್ಪ ಮುಗಟೆ ಭೇಟಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.