ಮಂಗಳೂರು: ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಮೀನುಗಾರಿಕಾ ಬೋಟ್ನಲ್ಲಿ ವ್ಯಕ್ತಿಯೊಬ್ಬರನ್ನು ನೇತುಹಾಕಿ ಹಲ್ಲೆ ನಡೆಸಿದ್ದಾರೆ. ಮೀನುಗಾರರು ವ್ಯಕ್ತಿಯನ್ನು ಉಲ್ಟಾ ನೇತುಹಾಕಿ ಥಳಿಸಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶದ ಬೆಸ್ತ ಸಮುದಾಯದ ವೈಲ ಶೀನು ಎಂದು ಗುರುತಿಸಲಾಗಿದೆ. ಈತನನ್ನು ಇತರ ಮೀನುಗಾರ ಕಾರ್ಮಿಕರು ಬೋಟ್‌ನ ಕ್ರೇನ್‌ಗೆ ಕಾಲು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಹಿಂಸಿಸುತ್ತಿರುವ ಹಾಗೂ ಹೊಡೆಯುವಂತೆ ಪ್ರೇರೇಪಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದು ಕೆಲವು ದಿನಗಳಾಗಿದ್ದು, ಇದರ ವಿಡಿಯೋ ಇದೀಗ ಪೊಲೀಸರಿಗೆ ಲಭಿಸಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 143, 147, 148, 323, 324, 307, 364, 342, 506, 149ರಡಿ ಕೇಸ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಜಕ್ಕೂ ವೈಲ್ ಶೀನು ಮೊಬೈಲ್ ಕದ್ದಿದ್ದರೆ ಆತನನ್ನು ಪೊಲೀಸ್ ಠಾಣೆಗೆ ಹಿಡಿದುಕೊಡಬಹುದಿತ್ತು. ಆದರೆ ಇವರೇ ಶಿಕ್ಷೆಯನ್ನು ನೀಡಿದ್ದು ಎಷ್ಟು ಸರಿ. ಶೀನು ಜೊತೆ ಅಮಾನುಷವಾಗಿ ನಡೆದುಕೊಂಡ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.