ಕಾರವಾರ: ‘ಹೊನ್ನಾವರ ಪೋರ್ಟ್ ಕಂಪನಿ’ಯು ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ತಾಲ್ಲೂಕಿನ ಕಾಸರಕೋಡು ಟೊಂಕಾ ಪ್ರದೇಶದಲ್ಲಿ ವಾಸವಾಗಿದ್ದ ಮೀನುಗಾರರ ಮನೆಗಳನ್ನು ನೂರಾರು ಪೊಲೀಸರು ತೆರವುಗೊಳಿಸಿದ ಘಟನೆ ಇಂದು ಬೆಳಿಗ್ಗೆ ಜರುಗಿದೆ. ಭಾರಿ ಮಳೆಯಲ್ಲೇ ಈ ಕಾರ್ಯಾಚರಣೆಯಲ್ಲಿ ಪೊಲೀಸರು ತೊಡಗಿರುವುದು ಕಂಡು ಬಂದಿದೆ.
ಸುರಿಯುವ ಮಳೆಯನ್ನು ಲೆಕ್ಕಿಸದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಯುವಕರು ಸಮುದ್ರದ ನೀರಿಗಿಳಿದು ಆಕ್ರೋಶಗೊಂಡರು. ಪೊಲೀಸರು ಹಾಗೂ ಸ್ಥಳೀಯರು ಯುವಕರನ್ನು ತಡೆದಿದ್ದು, ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.
ಸ್ಥಳೀಯರಿಂದ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಸ್ಥಳದಲ್ಲಿ ʻನೂರಾರು ಪೊಲೀಸರು ಜಮಾಯಿಸಿದ್ದರು. ನಮ್ಮನ್ನು ಬಲ ಪ್ರಯೋಗದಿಂದ ತೆರವು ಮಾಡಲಾಗುತ್ತಿದೆ. ಮೀನುಗಾರರನ್ನು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ಮಾಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಪಿಪಿಎಲ್ ಕಂಪನಿಯು ವಾಣಿಜ್ಯ ಬಂದರು ನಿರ್ಮಾಣ ಮಾಡುತ್ತಿದೆ. ಸರಕಾರವು ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಮಂಜೂರಿ ಮಾಡಿದೆ. ಸಮುದ್ರ ಕಿನಾರೆ ಬದಿಯಲ್ಲಿ ರಸ್ತೆ ವಿಸ್ತರಣೆ ಮಾಡಲು ಕಾಮಗಾರಿಗಳನ್ನು ಕೈಗೊಂಡಿದ್ದ ಕಂಪನಿಯು ಸ್ಥಳೀಯರ ವಿರೋಧದಿಂದ ಸ್ಥಗಿತಗೊಳಿಸಿತ್ತು.
ಕೋವಿಡ್ ನಿಯಮಗಳು ಜಾರಿಯಲ್ಲಿದ್ದರೂ ಸಹ ಇಂದು ಪೊಲೀಸರು ಮೀನುಗಾರರ ಮೇಲೆ ಬಲಪ್ರಯೋಗ ಮಾಡಿ ಯಾವುದೇ ಸೂಚನೆ ನೀಡದೇ ಯಂತ್ರಗಳ ಸಹಾಯದಿಂದ ಮನೆಗಳು ಮತ್ತು ಮೀನುಗಾರಿಕಾ ಬಲೆಗಳು, ಸಲಕರಣೆಗಳನ್ನು ಇಡುವ ಶೆಡ್‌ಗಳನ್ನು ತೆರವುಗೊಳಿಸಲಾಗುತ್ತಿದೆ.