ಭಾರತದ ಮೊದಲ ಮುಸ್ಲಿಂ ‌ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಜನ್ಮದಿನ

 ಕೆ.ವಾಸುದೇವರೆಡ್ಡಿ

ಇಂದು ಮಾತೆ ಫಾತಿಮಾ ಶೇಕ್ ಅವರ ಜನ್ಮದಿನ.

‘ಭಾರತದ ಮೊದಲ ಶಿಕ್ಷಕಿ’ಯಾಗಿ ಮಾತೆ ಸಾವಿತ್ರಿಬಾಯಿ ರೂಪುಗೊಳ್ಳುವುದರಲ್ಲಿ ಜ್ಯೋತಿಬಾ ಫುಲೆಯವರ ಕೊಡುಗೆ ಎಷ್ಟಿದೆಯೋ ಅಷ್ಟೇ ಕೊಡುಗೆ ಮಾತೆ ಫಾತಿಮಾ ಶೇಕ್ ಅವರದ್ದು ಇದೆ.
ಜಾತಿ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ಫುಲೆ‌ ದಂಪತಿಗಳಿಗೆ ತಮ್ಮ ಕುಟುಂಬ ಮತ್ತು ಸಾಂಪ್ರದಾಯಿಕ ಹಿಂದೂ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಫುಲೆ ದಂಪತಿಗಳನ್ನು ಅವರನ್ನ ಮನೆಯಿಂದ ಹೊರಹಾಕಲಾಗುತ್ತದೆ. ಆಗ ಫುಲೆ‌ ದಂಪತಿಗಳಿಗೆ ಆಶ್ರಯ ಕೊಟ್ಟವರು ಫಾತಿಮಾ ಶೇಕ್ ಮತ್ತು ಅವರ ಸಹೋದರ.

ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಕ್ ಶಿಕ್ಷಕ ತರಬೇತಿ ಪಡೆದಿದ್ದು ಒಂದೇ ಸಂಸ್ಥೆಯಲ್ಲಿ. ಆಗ ಬೆಳೆದ ಅವರಿಬ್ಬರ ಸ್ನೇಹವೇ ಮುಂದೆ ಭಾರತದ ಹೊಸ ಸಾಮಾಜಿಕ ಕ್ರಾಂತಿಗೆ ಕಾರಣವಾಗುತ್ತದೆ. ಸಾವಿತ್ರಿಬಾಯಿ 1848ರಲ್ಲಿ ಮೊಟ್ಟ ಮೊದಲ ಹೆಣ್ಣು ಮಕ್ಕಳ ಶಾಲೆ ಸ್ಥಾಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದವರು ಫಾತಿಮಾ ಶೇಕ್. ಅಷ್ಟೇ ಅಲ್ಲದೆ ಫುಲೆ ದಂಪತಿಗಳು ಸ್ಥಾಪಿಸಿದ ಐದು ಶಾಲೆಗಳಲ್ಲಿಯೂ ಫಾತಿಮಾ ಶಿಕ್ಷಕಿಯಾಗಿ ಕೆಲಸ ಮಾಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಜೊತೆಗೂಡಿ ಹೋರಾಡಿದರು.

ಹಿಂದೂ ಧರ್ಮದ ಸವರ್ಣಿಯ ಸಮುದಾಯದಲ್ಲಿ ಹುಟ್ಟಿದ ಫುಲೆ ದಂಪತಿಗಳು ಹೇಗೆ ಸಂಪ್ರದಾಯಿಕ ಸಮಾಜದಿಂದ ತೀವ್ರ ವಿರೋಧ ಎದುರಿಸಬೇಕಾಯಿತೊ ಹಾಗೆಯೇ ಮುಸ್ಲಿಂ ಸಮುದಾಯದಿಂದ ಬಂದು ಇನ್ನೂರು ವರ್ಷಗಳ ಹಿಂದೆಯೇ ಅಕ್ಷರ ಕಲಿತು ಸಾಮಾಜಿಕ ಹೋರಾಟಕ್ಕೆ ಇಳಿದ ಫಾತಿಮಾ‌ ಶೇಕ್ ಫುಲೆ‌ ದಂಪತಿಗಳಿಗಿಂತಲೂ ಹೆಚ್ಚು ವಿರೋಧ ಎದುರಿಸಿರುತ್ತಾರೆ ಎನ್ನುವುದನ್ನು ನಾವು ಊಹೆ ಮಾಡಿಕೊಳ್ಳಬಹುದು. ಸಾಂಪ್ರದಾಯಿಕ‌ ಸಮಾಜದಲ್ಲಿ ಹೆಣ್ಣಾಗಿ ಹುಟ್ಟಿದ ಕಾರಣಕ್ಕೆ ಮತ್ತು ಹಿಂದೂ ಧರ್ಮಿಯರಲ್ಲದ ಕಾರಣಕ್ಕೆ ಸಾವಿತ್ರಿಬಾಯಿಯವರಿಗಿಂತ ಹೆಚ್ಚು ಸವಾಲುಗಳನ್ನು ಫಾತಿಮಾ ಶೇಕ್ ಎದುರಿಸಿಯೇ ಇರುತ್ತಾರೆ. ಆದರೆ ಫಾತಿಮಾ ಶೇಕ್ ಅವರ ಬದುಕಿನ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲದ ಕಾರಣ ಅವರ ವೈಯಕ್ತಿಕ ಬದುಕಿನ ಕಷ್ಟ ನಷ್ಟಗಳ ಕುರಿತು ನಮಗೆ ಗೊತ್ತಿಲ್ಲ.
ಆದರೆ ಇವತ್ತಿಗೂ ನಮ್ಮ ಸಮಾಜ ಹೆಣ್ಣನ್ನು ಎರಡನೇ ದರ್ಜೆಯ ಲಿಂಗವಾಗಿಯೇ ನೋಡಬಯಸುತ್ತಿದೆ. ಪುರುಷಾಧಿಪತ್ಯ ಇಂದಿಗೂ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಹಾಗಾಗಿ ಇನ್ನೂರು ವರ್ಷಗಳ ಹಿಂದೆ ಈ ತಾಯಂದಿರು ಎಷ್ಟು ಕಷ್ಟ, ಅವಮಾನ ಎದುರಿಸಬಹುದು ಎನ್ನುವುದನ್ನು ನಮ್ಮ‌ಕಣ್ಣ ಮುಂದೆ ತಂದುಕೊಂಡಾಗ ಇವರಿಬ್ಬರ ಮಹತ್ವ ಗೊತ್ತಾಗುತ್ತದೆ.

ಭಾರತದ ಸಾಮಾಜಿಕ ಕ್ರಾಂತಿಯ ಇತಿಹಾಸದಲ್ಲಿ ಸಾವಿತ್ರಿಬಾಯಿಯವರಷ್ಟೇ ದೊಡ್ಡ ಸ್ಥಾನದಲ್ಲಿ ಫಾತಿಮಾ ಶೇಕ್ ಇರುತ್ತದೆ.

Donate Janashakthi Media

Leave a Reply

Your email address will not be published. Required fields are marked *