ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ವಕೀಲ ಕೆಎಸ್ಎನ್ ರಾಜೇಶ್ ಭಟ್ ವಿರುದ್ಧ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಗಳೂರು ಎಸಿಬಿ, ಲೋಕಾಯುಕ್ತಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ರಾಜೇಶ್ ಭಟ್ ಕಚೇರಿಗೆ, ಉತ್ತರ ಭಾರತ ಮೂಲದ ವಿದ್ಯಾರ್ಥಿನಿ ಇಂಟರ್ನ್‌ಶಿಪ್‌ಗೆ ಬರುತ್ತಿದ್ದರು. ಈ ವೇಳೆ ರಾಜೇಶ್ ಭಟ್, ವಿದ್ಯಾರ್ಥಿನಿಗೆ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ರಾಜೇಶ್ ನಗರದ 12ಕ್ಕೂ ಬ್ಯಾಂಕ್‌ಗಳಿಗೆ ಲೀಗಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಕೀಲ ರಾಜೇಶ್ ಭಟ್ ವಿರುದ್ಧ ಯುವತಿ ನೀಡಿರುವ ದೂರಿನ ಆಧಾರದಲ್ಲಿ, IPC section 354(A), 354(B), 354(C), 376, 511ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ, ವಕೀಲ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ : ಸಂತ್ರಸ್ತೆ ಮತ್ತು ವಕೀಲ ಮಾತನಾಡಿದ್ದಾರೆ ಎನ್ನಲಾದ 11 ನಿಮಿಷ 55 ಸೆಕೆಂಡ್ಸ್ನ ಆಡಿಯೋ ವೈರಲ್ ಆಗಿದೆ. ಇದರಲ್ಲಿ ರಾಜೇಶ್ ಭಟ್, ನಾನು ತಪ್ಪು ಮಾಡಿದ್ದೇನೆ, ಕ್ಷಮಿಸು. ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೇಡಿಕೊಂಡಿದ್ದಾರೆ.
ಆಡಿಯೋದಲ್ಲಿ ಹಲವು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿದೆ. ‘ನನ್ನ ತಪ್ಪು ಕ್ಷಮಿಸಿʼ ಇಂಟರ್ನ್‌ಶಿಪ್‌ಗೆ ದಯವಿಟ್ಟು ನೀನು ಮೊದಲಿನಂತೆ ನಮ್ಮ ಕಚೇರಿಗೆ ಬಾ. ಸಂಜೆ 6 ಗಂಟೆ ಬಳಿಕ ಕಚೇರಿಯಲ್ಲಿ ಕೆಲಸ ಮಾಡಬೇಡ’ ಎಂದು ಸಂತ್ರಸ್ತ ವಿದ್ಯಾರ್ಥಿನಿಗೆ ವಕೀಲ ರಾಜೇಶ್ ಭಟ್ ಕೋರಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ. ‘ನೀವು ರೇಪಿಸ್ಟ್‌ಗಿಂತ ಕಡಿಮೆ ಇಲ್ಲ. ನಾನು ಕಚೇರಿಗೆ ಬರಲ್ಲ, ನಿಮ್ಮ ಮುಖ ನೋಡೋಕೆ ಇಷ್ಟವಿಲ್ಲ’ ಎಂದು ಸಂತ್ರಸ್ತ ಯುವತಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತಂತೆ ವೀಡಿಯೋ ಬಿಡುಗಡೆ ಮಾಡಿರುವ ವಕೀಲ ರಾಜೇಶ್ ಭಟ್ ಇದು ತಮ್ಮ ವಿರುದ್ಧದ ಷಡ್ಯಂತ್ರವಾಗಿದೆ. ಸೆಪ್ಟೆಂಬರ್ 25ರಂದು ನಡೆದಂತ ಘಟನೆ ಇದಾಗಿದ್ದು, ಸೆಪ್ಟೆಂಬರ್ 27ರಂದೇ, ಇಬ್ಬರು ಯುವತಿಯರು ಹಣಕ್ಕಾಗಿ ಬೇಡಿಕೆ ಇಟ್ಟ ಕುರಿತಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆನು. ಆದ್ರೇ ಇದುವರೆಗೆ ಪ್ರಕರಣ ದಾಖಲಿಸಿಲ್ಲ ಎಂದು ತಿಳಿಸಿದರು.
ಇನ್ನೂ ಈ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಇಂಟರ್ ಶಿಪ್ ವಿದ್ಯಾರ್ಥಿನಿ ತಮ್ಮ ಜೊತೆಗೆ ವಕೀಲ ರಾಜೇಶ್ ಭಟ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬುದಾಗಿ ದೂರು ನೀಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸೋದಾಗಿ ತಿಳಿಸಿದ್ದಾರೆ.