ಬೆಂಗಳೂರು: ಗ್ರಾಹಕರೊಬ್ಬರಿಗೆ ನೀಡಿದ್ದ ಆಹಾರ ಕಳಪೆಯಾಗಿರುವುದನ್ನು ಪ್ರಶ್ನಿಸಿದ್ದಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಬೆಂಗಳೂರು ಕೆಂಪೇಗೌಡ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ದಿ ರಾಮೇಶ್ವರಂ ಕೆಫೆಯ ಮಾಲಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಳಪೆ ಆಹಾರವನ್ನು ನೀಡಲಾಗಿದೆ ಎಂದು ಕೆಫೆಯ ಮಾಲಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ವ್ಯವಸ್ಥಾಪಕ ಸುಮಂತ್ ಲಕ್ಷ್ಮೀನಾರಾಯಣ್ ವಿರುದ್ದ ಗ್ರಾಹಕರೊಬ್ಬರು ದೂರು ನೀಡಿದ್ದಾರೆ. ಕ್ರಿಮಿನಲ್ ಪಿತೂರಿ, ಸುಳ್ಳು ಮಾಹಿತಿ ಒದಗಿಸುವುದು, ಸಾಕ್ಷ್ಯಗಳನ್ನು ರೂಪಿಸುವುದು ಮತ್ತು ಕಲಬೆರಕೆ ಅಥವಾ ಹಾನಿಕಾರಕ ಆಹಾರವನ್ನು ಮಾರಾಟ ಮಾಡುವುದು ಸೇರಿದಂತೆ ಇತರ ಆರೋಪಗಳನ್ನು ಕೆಫೆ ವಿರುದ್ಧ ಹೊರಿಸಲಾಗಿದೆ.
ಇದನ್ನೂ ಓದಿ: ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನ ರದ್ದುಪಡಿಸಿ: ರೈತರು ಒತ್ತಾಯ
ದೂರುದಾರ ನಿಖಿಲ್ ಜು.24ರಂದು ಟರ್ಮಿನಲ್ 1ರಲ್ಲಿ ಗುವಾಹಟಿಗೆ ತೆರಳಲು ತಯಾರಿ ನಡೆಸುತ್ತಿದ್ದಾಗ ಕೆಫೆಯ ವಿಮಾನ ನಿಲ್ದಾಣದ ಕೌಂಟರ್ನಲ್ಲಿ ‘ಪೊಂಗಲ್’ ಮತ್ತು ಫಿಲ್ಟರ್ ಕಾಫಿ ಆರ್ಡರ್ ಮಾಡಿದ್ದರು. ಪೊಂಗಲ್ ನಲ್ಲಿ ಹುಳ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದರು. ಹೋಟೆಲ್ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಿದ್ದೆ ಅವರು ಬದಲಿ ಆಹಾರ ನೀಡುವುದಾಗಿ ತಿಳಿಸಿದರು. ಆದರೆ ಬೋರ್ಡಿಂಗ್ ಗೆ ಆತುರ ಇದ್ದುದರಿಂದ ನಿರಾಕರಿಸಿದ್ದೆ ಎಂದು ನಿಖಿಲ್ ಹೇಳಿದ್ದಾರೆ.
ಇತರ ಗ್ರಾಹಕರು ಚಿತ್ರ, ವೀಡಿಯೊ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ. ನಿಖಿಲ್ ಯಾವುದೇ ಸಮಸ್ಯೆ ಉಂಟುಮಾಡದೆ ಸುಮ್ಮನೆ ಹೊರಟು ಹೋಗಿದ್ದರು. ಆದರೆ, ಆಹಾರದಲ್ಲಿ ಹುಳ ಸಿಕ್ಕಿರುವ ವೀಡಿಯೊ, ಚಿತ್ರಗಳು ಮರುದಿನ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಹೋಟೆಲ್ ನವರು ನಿಖಿಲ್ ವಿರುದ್ದ ಬ್ರಾಂಡ್ ಹೆಸರಿಗೆ ಕಳಂಕ ತಂದಿರುವುದಾಗಿ ಬೆದರಿಕೆಯೊಡ್ಡಿ, 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದರು.
ಕೆಫೆಯ ಆರೋಪಗಳ ಆಧಾರದ ಮೇಲೆ ಪೊಲೀಸರು ನಿಖಿಲ್ ಮತ್ತು ಅವರ ಸ್ನೇಹಿತರನ್ನು ವಿಚಾರಣೆಗೆ ಕರೆಸಿದ್ದರು. ಆದರೆ ನಿಖಿಲ್ ತಾನು ಎಂದಿಗೂ ಪರಿಹಾರ ಅಥವಾ ಮರುಪಾವತಿ ಕೇಳಿಲ್ಲ. ಕೆಫೆ ಮಾಡಿರುವ ಆರೋಪಗಳಿಗೂ ತನಗೂ ಸಂಬಂಧ ಇಲ್ಲ. ಆ ಹೊತ್ತಿನಲ್ಲಿ ವಿಮಾನದಲ್ಲಿದ್ದೆ ಎಂದು ದಾಖಲೆಗಳನ್ನು ತೋರಿಸಿದ್ದರು. ಹಾಗೆಯೇ ನಿಖಿಲ್ ಪ್ರತಿದೂರು ದಾಖಲಿಸಿ, ಈ ಘಟನೆಯನ್ನು ‘ಗಂಭೀರ ಆಹಾರ ಸುರಕ್ಷತೆಯ ವೈಫಲ್ಯ’ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಕೆಫೆಯು ತನ್ನ ವರ್ಚಸ್ಸಿಗೆ ಕಳಂಕ ತರುವ ಮತ್ತು ತನ್ನನ್ನು ಬೆದರಿಸುವ ಸಲುವಾಗಿ ಸುಳ್ಳು ಪ್ರಕರಣವನ್ನು ದಾಖಲಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ನೋಡಿ: ದೇಶದ ಸಂಪತ್ತು ಸೃಷ್ಟಿಸುವ ರೈತ – ಕಾರ್ಮಿಕರ ಹಿತ ರಕ್ಷಿಸಬೇಕಾದವರು ಯಾರು? ಎಸ್. ವರಲಕ್ಷ್ಮಿ ಮಾತುಗಳು Janashakthi
