ರಾಮನಗರ: ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮೈಕ್ರೋ ಫೈನಾನ್ಸ್ ಕಂಪನಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಯೂನಿಟಿ ಸ್ಮಾಲ್ ಫೈನಾನ್ಸ್, ಆಶೀರ್ವಾದ್ ಮೈಕ್ರೋ ಫೈನಾನ್ಸ್, ಸತ್ಯಾ ಮೈಕ್ರೋ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್, ಐಐಎಫ್ ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್, ಎಲ್ ಅಂಡ್ ಟಿ ಫೈನಾನ್ಷಿಯಲ್ ಸರ್ವಿಸ್, ಸೂರ್ಯೋದಯ ಫೈನಾನ್ಸ್ ಹಾಗೂ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಮನಗರ ತಾಲೂಕು ತಿಮ್ಮಯ್ಯನದೊಡ್ಡಿ ಗ್ರಾಮದ ಯಶೋಧಮ್ಮ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ಪುತ್ರ ಕುಮಾರ್ ನೀಡಿದ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು 7 ಮೈಕ್ರೋ ಫೈನಾನ್ಸ್ ಕಂಪನಿಗಳ ಮ್ಯಾನೇಜರ್ ಮತ್ತು ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಣೆಬೆನ್ನೂರು| ಮೈಕ್ರೊ ಫೈನಾನ್ಸ್ ಕಿರುಕುಳ: ಬೇಸತ್ತು ಗ್ರಾಮವನ್ನೇ ತೊರೆದ ಜನ
ದೂರಿನಲ್ಲಿ ಏನಿದೆ ?:
ಮೃತ ಯಶೋಧಮ್ಮ ಪತಿ ಶಿವಲಿಂಗಯ್ಯ 10 ವರ್ಷಗಳ ಹಿಂದೆ ಮರಣ ಹೊಂದಿದ್ದರು. ಈ ದಂಪತಿಗೆ ಪುತ್ರ ಕುಮಾರ್ ಮತ್ತು ಪುತ್ರಿ ವೀಣಾ ಇದ್ದರು. ಪುತ್ರಿಗೆ ಮದುವೆ ಮಾಡಿದ ನಂತರ ಯಶೋಧಮ್ಮ ಪುತ್ರ ಮತ್ತು ಸೊಸೆಯೊಂದಿಗೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಸಂಸಾರಕ್ಕೆಂದು ಯಶೋಧಮ್ಮ ಹಲವು ಸಂಘ ಸಂಸ್ಥೆಗಳಿಂದ ಸಾಲ ಪಡೆದು ಪ್ರತಿ ವಾರ ಹಾಗೂ ತಿಂಗಳಿಗೆ ಹಣ ಕಟ್ಟುತ್ತಿದ್ದರು. ಯೂನಿಟಿ ಸ್ಮಾಲ್ ಫೈನಾನ್ಸ್‌ನಿಂದ 40 ಸಾವಿರ, ಸೂರ್ಯೋದಯ ಫೈನಾನ್ಸ್ ನಿಂದ 40 ಸಾವಿರ, ಸತ್ಯಾ ಮೈಕ್ರೋ ಕ್ಯಾಪಿಟಲ್ ಫೈನಾನ್ಸ್ ನಿಂದ 50 ಸಾವಿರ , ಐಐಎಪ್ ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್ ನಿಂದ 1 ಲಕ್ಷ , ಎಲ್ ಅಂಡ್ ಟಿ ಪೈನಾನ್ಸ್ ನಿಂದ 72,954 ರು., ಆಶೀರ್ವಾದ್ ಫೈನಾನ್ಸ್ ಲಿಮಿಟೆಡ್ ನಿಂದ 1 ಲಕ್ಷ ಹಾಗೂ ಬಿಎಸ್ ಎಸ್ ಮೈಕ್ರೋ ಫೈನಾನ್ಸ್ ನಿಂದ 51 ಸಾವಿರ ರು. ಸಾಲ ಪಡೆದು ಮರು ಪಾವತಿಸುತ್ತಿದ್ದರು.
ಜ.20ರಂದು ಯಶೋಧಮ್ಮ ಮತ್ತು ಕುಮಾರ್ ಮನೆಯಲ್ಲಿರುವಾಗ ಆಶೀರ್ವಾದ್ ಮೈಕ್ರೋ ಫೈನಾನ್ಸ್ ಹಾಗೂ ಸತ್ಯ ಮೈಕ್ರೋ ಕ್ಯಾಪಿಟಲ್ ಫೈನಾನ್ಸ್ ಕಂಪನಿಯವರು ಮನೆ ಬಳಿ ಬಂದು ಈಗಲೇ ಸಾಲ ಮರು ಪಾವತಿಸಿವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಫೈನಾನ್ಸ್ ಸಿಬ್ಬಂದಿ ನೀನು ಸಾಲ ಮಾಡುವಾಗ ಬುದ್ಧಿ ಇರಲ್ಲಿಲ್ಲವಾ. ಈಗ ಸಾಲ ತೀರಿಸೋಕೆ ಆಗದಿದ್ದರೆ ಎಲ್ಲಾದರು ಹೋಗಿ ಸಾಯಿ ಎಂದು ಬೈದಿದ್ದಾರೆ. ಇದರಿಂದ ಯಶೋಧಮ್ಮ ಬೇಸರ ಮಾಡಿಕೊಂಡಿದ್ದಾರೆ. ಪುತ್ರ ಕುಮಾರ್ ಹಣ ಕಟ್ಟುತ್ತೇವೆ ಸಮಯ ಕೊಡುವಂತೆ ಸಿಬ್ಬಂದಿಗೆ ಹೇಳಿ ರಾಮನಗರಕ್ಕೆ ಬಂದಿದ್ದಾರೆ.
ಪೈನಾನ್ಸ್ ಕಂಪನಿಯವರು ಬೈದ ಕಾರಣಕ್ಕೆ ಮನನೊಂದು ಯಶೋಧಮ್ಮ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಯಶೋಧಮ್ಮ ಪುತ್ರ ಕುಮಾರ್ ನೀಡಿದ ದೂರಿನ ಮೇರೆಗೆ 7 ಮೈಕ್ರೋ ಫೈನಾನ್ಸ್ ಕಂಪನಿ ಹಾಗೂ ಸಿಬ್ಬಂದಿ ವಿರುದ್ಧ THE BHARATIYA NYAYA SANHITA (BNS), 2023 (U/s-108,190) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ನೋಡಿ: ಚಾಲಕರು| ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಾವಣಿ ಮಾಡಿಕೊಳ್ಳುವುದು ಹೇಗೆ?