ನವದೆಹಲಿ: ಅಲೋಪತಿ ಔಷಧಗಳನ್ನು ಗುರಿಯಾಗಿಟ್ಟುಕೊಂಡು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಪತಂಜಲಿ ಆಯುರ್ವೇದವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದಾರಿತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸದಿದ್ದರೆ 1 ಕೋಟಿ ರೂಪಾಯಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಪೀಠ ಎಚ್ಚರಿಕೆ ನೀಡಿದೆ.
ತನ್ನ ಉತ್ಪನ್ನಗಳು ಕೆಲವು ಕಾಯಿಲೆಗಳನ್ನು “ಗುಣಪಡಿಸುತ್ತದೆ” ಎಂದು ಸುಳ್ಳು ಹೇಳಿಕೆ ನೀಡಿದರೆ 1 ಕೋಟಿ ರೂಪಾಯಿ ದಂಡ ವಿಧಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಪತಂಜಲಿಗೆ ಎಚ್ಚರಿಸಿದೆ.
ಇದನ್ನೂ ಓದಿ: ಉಡುಪಿ ಕಗ್ಗೊಲೆ | ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ; ಕನ್ನಡ ಮಾಧ್ಯಮಗಳ ಸುಳ್ಳು ಬಯಲು!
ಭವಿಷ್ಯದಲ್ಲಿ ಇಂತಹ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವಂತೆ ಪತಂಜಲಿ ಆಯುರ್ವೇದ್‌ಗೆ ನ್ಯಾಯಾಲಯ ಸೂಚಿಸಿದೆ.ಕಂಪೆನಿಯು ಪತ್ರಿಕೆಗಳಲ್ಲಿ ಸಾಂದರ್ಭಿಕ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು ಎಂದು ನ್ಯಾಯಾಲಯ ಹೇಳಿದೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ನಿರ್ದೇಶನ ನೀಡಲಾಗಿದೆ. ಪತಂಜಲಿಯ ತಪ್ಪುದಾರಿಗೆಳೆಯುವ ಜಾಹೀರಾತುಗಳು ಅಲೋಪತಿಯನ್ನು ಅವಹೇಳನ ಮಾಡುತ್ತವೆ ಮತ್ತು ಕೆಲವು ಕಾಯಿಲೆಗಳನ್ನು ಗುಣಪಡಿಸುವ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಕಂಪೆನಿಯ ಈ ಪ್ರತಿಪಾದನೆಗಳನ್ನು ಪರಿಶೀಲಿಸಲಾಗಿಲ್ಲ ಮತ್ತು ಡ್ರಗ್ಸ್ ಮತ್ತು ಅದರ್ ಮ್ಯಾಜಿಕ್ ರೆಮಿಡಿಸ್ ಕಾಯಿದೆ-1954 ಮತ್ತು ಗ್ರಾಹಕ ಸಂರಕ್ಷಣಾ ಕಾಯಿದೆ-2019 ರಂತಹ ಕಾನೂನುಗಳ ನೇರ ಉಲ್ಲಂಘನೆಯಾಗಿದೆ ಎಂದು IMA ವಾದಿಸಿದೆ. ನ್ಯಾಯಾಲಯವು ಈ ನಿಟ್ಟಿನಲ್ಲಿ ಕಾರ್ಯಸಾಧ್ಯವಾದ ಶಿಫಾರಸುಗಳೊಂದಿಗೆ ಹೇಳಿಕೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದು, ಮುಂದಿನ ವಿಚಾರಣೆಯನ್ನು 2024ರ ಫೆಬ್ರವರಿ 5ಕ್ಕೆ ನಿಗದಿಪಡಿಸಿದೆ.
ವಿಡಿಯೊ ನೋಡಿ: ವಿಶ್ವಕಪ್ ಮೇಲೆ ಕಾಲಿಟ್ಟಾಗ ಚುರ್ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? #worldcup2023