ತಲೆಮರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್‌ ನಲ್ಲಿ ಬಂಧಿಸಿದ ಪೊಲೀಸರು

ಬೆಂಗಳೂರು: ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ವಂಚಕ ಸ್ಯಾಂಟ್ರೊ ರವಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ಗುಜರಾತಿನಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದ ರಾಜಕಾರಣಿಗಳೊಂದಿಗೂ ನಂಟು ಹೊಂದಿರುವ, ಪ್ರಭಾವಿ ಎಂದೇ ಗುರುತಿಸಿಕೊಂಡಿದ್ದ ಸ್ಯಾಂಟ್ರೋ ರವಿ ಎಂದು ಕರೆಯಲ್ಪಡುವ ಕೆ.ಎಸ್‌. ಮಂಜುನಾಥ್‌, ದೇಶದಿಂದ ಪರಾರಿಯಾಗದಂತೆ ಲುಕ್‌ಔಟ್ ನೋಟಿಸು ಹೊರಡಿಸಲಾಗಿತ್ತು. ರವಿಯ ಬಂಧನಕ್ಕಾಗಿ ನಾಲ್ವರು ಎಸ್ಪಿಗಳ ವಿಶೇಷ ತಂಡ ರಚಿಸಲಾಗಿತ್ತು.

ಇದನ್ನು ಓದಿ : ದಲಿತ ಮಹಿಳೆ ಮೇಲೆ ಅತ್ಯಾಚಾರ: ಸ್ಯಾಂಟ್ರೋ ರವಿ ಮೇಲೆ ಕೇಸ್‌ ದಾಖಲು, ರಾಜಕಾರಣಿಗಳ ಶ್ರೀರಕ್ಷೆ..!?

ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತಿನ ರಾಜಧಾನಿ ಅಹಮದಾಬಾದಿನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಸ್ಯಾಂಟ್ರೋ ರವಿ ಮಾಂಸದಂಧೆಯ ಪ್ರಭಾವಿ ವ್ಯಕ್ತಿಯಾಗಿದ್ದನು, ದಶಕಗಳ ಕಾಲ ವೇಶ್ಯಾವಾಟಿಕೆ ನಡೆಸುತ್ತಿದ್ದವನು ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೂ ಕೈ ಹಾಕಿದ್ದನು ಎಂಬ ಆಡಿಯೋ ವೈರಲ್ ಆಗಿತ್ತು.

ತನ್ನನ್ನು ಸುಳ್ಳು ಕೇಸು ದಾಖಲಿಸಿ ಜೈಲಿಗೆ ತಳ್ಳಿದ ಸ್ಯಾಂಟ್ರೋ ರವಿಯ ವಿರುದ್ಧ ಮೂರನೇ ಪತ್ನಿ ದೂರು ನೀಡಿದ್ದರಿಂದ ಮತ್ತೆ ಕಾರ್ಯಪ್ರವೃತ್ತರಾದ ಪೊಲೀಸರು, ಆತನ ಬಂಧನಕ್ಕಾಗಿ ಬಲೆ ಬೀಸಿದ್ದರು. ದೂರು ದಾಖಲಾಗಿ 11 ದಿನಗಳ ಬಳಿಕ ರವಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸಿ ಕೋರ್ಟ್‌ ಮೊರೆ ಹೋಗಿದ್ದ ಸ್ಯಾಂಟ್ರೋ ರವಿಗೆ ಜಾಮೀನು ದೊರೆತಿರಲಿಲ್ಲ. ನೆನ್ನೆ(ಜನವರಿ 12) ರಾಮನಗರದಲ್ಲಿ ಸ್ಯಾಂಟ್ರೋ ರವಿಗಾಗಿ ಪೊಲೀಸರು ನಾಕಾ ಬಂಧಿ ಹಾಕಿ ಕಾಯುತ್ತಿದ್ದರು. ಈ ವೇಳೆ ರವಿ ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡರು. ಇದೀಗ ಸ್ಯಾಂಟ್ರೋ ರವಿ ಬಂಧನವಾಗಿದ್ದು ಆತನ ಕುಕೃತ್ಯದ ಪಟ್ಟಿ ಹೊರ ಬೀಳುವ ನಿರೀಕ್ಷೆ ಇದೆ.

ಇದನ್ನು ಓದಿ: ನಾನು ಬಿಜೆಪಿ ಕಾರ್ಯಕರ್ತ, ವರ್ಗಾವಣೆ ದಂಧೆ ನಿಜ ಎಂದು ಒಪ್ಪಿಕೊಂಡಿದ್ದ ಸ್ಯಾಂಟ್ರೋ ರವಿ

ಸ್ಯಾಂಟ್ರೋ ರವಿ ರಾಜ್ಯ ಅಬಕಾರಿ ಇಲಾಖೆಯ ಮಾಜಿ ಅಧಿಕಾರಿಯ ಮಗ. 1995 ರಿಂದ ಮಾನವ ಕಳ್ಳಸಾಗಣೆದಾರನಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅಪಹರಿಸಿ, ಆಕೆಯ ಮೇಲೆ ದೈಹಿಕ ದೌರ್ಜನ್ಯ ನಡೆಸಿ ಅದನ್ನು ಮುಚ್ಚಿಡಲು ಪ್ರಯತ್ನಿಸಿದ ಕೆಲವು ದಿನಗಳ ನಂತರ ಅವನನ್ನು ಬಂಧಿಸಲಾಗಿತ್ತು, ಆದರೆ ಅನಾರೋಗ್ಯದ ನೆಪದಲ್ಲಿ ಮೈಸೂರು ಮೂಲದ ಕೆ ಆರ್ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಭೂಗತವಾಗಿ ಉಳಿದ ನಂತರ, ಮಂಜುನಾಥ್ ಸ್ಯಾಂಟ್ರೋ ರವಿ ಎಂಬ ಹೆಸರಿನಲ್ಲಿ ಮಹಿಳೆಯರಿಗೆ ಉದ್ಯೋಗದ ಭರವಸೆ ನೀಡಿ ನಂತರ ಅವರನ್ನು ಮಾನವ ಕಳ್ಳಸಾಗಣೆಗೆ ತಳ್ಳಿದ್ದ ಎಂದು ತಿಳಿದು ಬಂದಿದೆ.

ಬಂಧನ ಖಚಿತ ಪಡಿಸಿದ ಎಡಿಜಿಪಿ

ಮೈಸೂರಿನಲ್ಲಿ ಎಡಿಜಿಪಿ ಅಲೋಕ್‌ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯನ್ನು ಮೈಸೂರು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ ಎಂದು ಖಚಿತಪಡಿಸಿದರು. ಆತನನ್ನು ಬಂಧಿಸಲು ವಿವಿಧ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಆತನ ವಿರುದ್ಧ ಜನವರಿ 2ರಂದು ಇಲ್ಲಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು ಎಂದರು.

ಬಂಧನಕ್ಕೆ ಆಗ್ರಹ

ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿಯನ್ನು ಬಂಧಿಸದಿರುವುದಕ್ಕೆ ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಭಟನೆಗಳೂ ನಡೆದಿದ್ದವು. ವಿವಾಹಿತ ಎಂಬುದನ್ನು ಮುಚ್ಚಿಟ್ಟು, ಪರಿಶಿಷ್ಟ ಸಮುದಾಯದ ಮಹಿಳೆಯನ್ನು ವಂಚಿಸಿ ಮದುವೆಯಾಗಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ವರದಕ್ಷಿಣೆ ಕಿರುಕುಳ ನೀಡಿ, ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *