ಬೀಜ ಮಸೂದೆಯ ವಿರುದ್ಧ ಹೋರಾಟ ಭಾರತದ ರೈತಾಪಿಗಳ ಉಳಿವಿಗೆ ಅತ್ಯಗತ್ಯ – ಎಐಕೆಎಸ್ ಕರೆ

ನವದೆಹಲಿ: ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸಿರುವ ಕರಡು ಬೀಜ ಮಸೂದೆ 2025 ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ಕ್ರಮವಾಗಿದೆ ಎಂದು  ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಖಂಡಿಸಿದೆ.

ಈ ಬೀಜ ಮಸೂದೆಯು ಸಣ್ಣ ರೈತರನ್ನುಅವರ ಜಮೀನುಗಳಿಂದ ಹೊರದಬ್ಬುವ ಮತ್ತು ಭಾರತದ ಬೀಜ ಸಾರ್ವಭೌಮತ್ವವನ್ನು ಕೆಲವೇ ಬಹುರಾಷ್ಟ್ರೀಯ ಮತ್ತು ದೇಶೀಯ ಗುತ್ತೇದಾರಿಗಳಿಗೆ ಒಪ್ಪಿಸುವ ಆರ್‌ಎಸ್‌ಎಸ್-ಬಿಜೆಪಿಯ ಒಟ್ಟಾರೆ ರಾಜಕೀಯ ಯೋಜನೆಯ ಭಾಗವಾಗಿದೆ ಎಂದು ಅದು ಹೇಳಿದೆ. ಇದು ಕಾರ್ಪೊರೇಟ್‍ಗಳು ಮನಬಂದಂತೆ ಬೆಲೆ ನಿರ್ಧರಿಸಲು ಅವಕಾಶ ಒದಗಿಸಿ ಸಾಗುವಳಿಯ ವೆಚ್ಚವನ್ನು ಹೆಚ್ಚಿಸುತದೆ ಎಂದೂ ಅದು ಎಚ್ಚರಿಸಿದೆ.

ಭಾರತದಲ್ಲಿ ಕೃಷಿ ಬಿಕ್ಕಟ್ಟು ಆಳವಾಗುತ್ತಿರುವ ಸಮಯದಲ್ಲಿ ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ಅತ್ಯಂತ ಕಾರ್ಪೊರೇಟ್ ಪರವಾದ ಮಸೂದೆಯನ್ನು ಮುಂದೊತ್ತುತ್ತಿದೆ.. ಕೃಷಿಯ ಮೇಲೆ ಹೆಚ್ಚುತ್ತಿರುವ ಕಾರ್ಪೊರೇಟ್ ನಿಯಂತ್ರಣವು ಕೃಷಿ ಬಿಕ್ಕಟ್ಟು ಮತ್ತು ಕೃಷಿ ಆತ್ಮಹತ್ಯೆಗಳನ್ನು ತೀವ್ರಗೊಳಿಸುತ್ತದೆ ಎಂದು ಹಲವಾರು ವೈಜ್ಞಾನಿಕ ಅಧ್ಯಯನಗಳು ಸ್ಥಾಪಿಸಿವೆ.

ಇದನ್ನೂ ಓದಿ: ಶಾಸಕ – ತಹಸೀಲ್ದಾರ್ ತುಘಲಕ್ ದರ್ಬಾರ್ ನಡೆಸಿ ಶಿಷ್ಟಾಚಾರ ಉಲ್ಲಂಘನೆ: ರೈತ ಸಂಘ ಪ್ರತಿಭಟನೆ

ಈ ಕರಡು ಮಸೂದೆಯು ರೈತರನ್ನು ಹಿಂಡುವುದನ್ನು ಮತ್ತು ಲೂಟಿ ಮಾಡುವುದನ್ನು ಇನ್ನಷ್ಟು ತ್ವರಿತಗೊಳಿಸುವ ಎಲ್ಲ  ಅಗತ್ಯ ಅಂಶಗಳನ್ನು ಹೊಂದಿದೆ ಎಂದಿರುವ ಎಐಕೆಎಸ್,  ಉದಾಹರಣೆಗೆ, ಗುತ್ತೇದಾರಿಗಳು ಬೀಜಗಳ ಬೆಲೆ ನಿರ್ಧಾರದಲ್ಲಿ  ಕೊಳ್ಳೆ ಹೊಡೆಯುವ ರೀತಿಯಲ್ಲಿ   ತೊಡಗಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಹೇಳಿದೆ.

ಬೀಜಗಳಿಗೆ ಸಂಬಂಧಿಸಿದ ಯಾವುದೇ ಹೊಸ ಕಾನೂನು PPVFR  (ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ) ಕಾಯ್ದೆ 2001 ರ ಅಡಿಯಲ್ಲಿ ಈಗಾಗಲೇ ಸ್ಥಾಪಿಸಲಾದ ಪ್ರಗತಿಪರ ಕಾನೂನು ಸುರಕ್ಷತಾ ಕ್ರಮಗಳಿಗೆ ಮತ್ತು CBD (ಜೈವಿಕ ವೈವಿಧ್ಯತೆಯ ಸಮಾವೇಶ) ಮತ್ತು ITPGRFA (ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಅಂತರರಾಷ್ಟ್ರೀಯ ಒಪ್ಪಂದ) ದ ಅಡಿಯಲ್ಲಿ ಭಾರತದ ಅಂತರರಾಷ್ಟ್ರೀಯ ಬದ್ಧತೆಗಳಿಗೆ ಸಕ್ರಿಯವಾಗಿ ಪೂರಕವಾಗಿರಬೇಕೇ ವಿನಹ, ಅವುಗಳಿಗೆ ವಿರುದ್ಧವಾಗಿರಬಾರದು.

ಈ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬದ್ಧತೆಗಳು ಸಾಮೂಹಿಕವಾಗಿ ತಳಿ ಸಂಪನ್ಮೂಲಗಳ ಮೇಲೆ ರಾಷ್ಟ್ರೀಯ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತವೆ ಮತ್ತು ಸ್ಥಳೀಯ ಪ್ರಭೇದಗಳನ್ನು ರಕ್ಷಿಸುತ್ತವೆ. ಹೀಗಾಗಿ ಅವು ರೈತರನ್ನು ತಳಿಗಾರರು, ಸಂರಕ್ಷಕರು ಮತ್ತು ಬೀಜಗಳನ್ನು ಉಳಿಸಲು, ಬಳಸಲು, ವಿನಿಮಯ ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಖಾತರಿಪಡಿಸಿದ ಹಕ್ಕುಗಳನ್ನು ಹೊಂದಿರುವ ಜೀವವೈವಿಧ್ಯದ ಹಕ್ಕುದಾರರು ಗುರುತಿಸುತ್ತವೆ ಎಂಬ ಸಂಗತಿಯತ್ತ ಎಐಕೆಎಸ್ ಗಮನ ಸೆಳೆದಿದೆ.

ಆದರೆ ಬೀಜ ಮಸೂದೆ 2025 ರ ಕರಡು, ಇದಕ್ಕೆ ವ್ಯತಿರಿಕ್ತವಾಗಿ, ವಿಪರೀತ ಕೇಂದ್ರೀಕೃತವಾದ ಮತ್ತು ಕಾರ್ಪೊರೇಟೀಕೃತವಾದ ನಿಯಂತ್ರಕ ವ್ಯವಸ್ಥೆಯನ್ನು ತಂದು ರೈತ-ಕೇಂದ್ರಿತ ರಕ್ಷಣೆಯನ್ನು ದುರ್ಬಲಗೊಳಿಸುವ ಮತ್ತು ಜೀವವೈವಿಧ್ಯ ಸಂರಕ್ಷಣೆ ಮತ್ತು ರೈತರ ಹಕ್ಕುಗಳಿಗಾಗಿ ಭಾರತದ ಕಾನೂನು ಶಿಲ್ಪವನ್ನು ದುರ್ಬಲಗೊಳಿಸುವ ಅಪಾಯವನ್ನುಂಟು ಮಾಡುತ್ತದೆ ಎಂದು ಎಐಕೆಎಸ್‍ ಆತಂಕ ವ್ಯಕ್ತಪಡಿಸಿದೆ. ಈ ಕರಡು ಮಾರುಕಟ್ಟೆ ನಿಯಂತ್ರಣ ಮತ್ತು ಬೀಜ ವ್ಯವಸ್ಥೆಗಳನ್ನು ಕಟ್ಟುನಿಟ್ಟಾದ  ಔಪಚಾರಿಕೀಕರಣಕ್ಕೆ ಒಳಪಡಿಸುವುದನ್ನು ಬೆಂಬಲಿಸುವಂತೆ ಕಂಡುಬರುತ್ತಿದೆ, ಇದು ಸ್ಥಳೀಯ ಪ್ರಭೇದಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ರಾಷ್ಟ್ರೀಯ/ಅಂತರರಾಷ್ಟ್ರೀಯ ಬೀಜ ಜಾಲಗಳನ್ನು ಅಂಚಿಗೆ ತಳ್ಳುವ  ಸಾಧ್ಯತೆಯಿದೆ.

ನಿಖರವಾಗಿ ಹೇಳುವುದಾದರೆ, ಬೀಜ ಮಸೂದೆ 2025 ರ ಹೊಸ ಕರಡು ಭಾರತದ ಬೀಜಗಳ ನಿಯಂತ್ರಣ ವ್ಯವಸ್ಥೆಯನ್ನು ಬದಲಿಸಿ ಬೀಜ ವಲಯದಲ್ಲಿನ ಸಮತೋಲನವನ್ನು ದೊಡ್ಡ ಕಾರ್ಪೊರೇಟ್ ಕುಳಗಳ ಪರವಾಗಿ ಸಕ್ರಿಯವಾಗಿ ಬದಲಾಯಿಸುತ್ತದೆ ಎಂದು ಎಚ್ಚರಿಸಿರುವ ಅಖಿಲ ಭಾರತ ಕಿಸಾನ್‍ ಸಭಾ ಈ ರಾಷ್ಟ್ರವಿರೋಧಿ, ರೈತ ವಿರೋಧಿ ಮತ್ತು ಜನವಿರೋಧಿ ಮಸೂದೆಯ ವಿರುದ್ಧ ರೈತರು ಮತ್ತು ಇತರ ಎಲ್ಲಾ ಪ್ರಜಾಪ್ರಭುತ್ವ ಶಕ್ತಿಗಳು ಒಗ್ಗೂಡಿ ಬೃಹತ್ ಹೋರಾಟವನ್ನು ಪ್ರಾರಂಭಿಸಬೇಕು ಎಂದು ಕರೆ ನೀಡಿದೆ. ಭಾರತೀಯ ರೈತರ ಉಳಿವಿಗೆ ಈ ಹೋರಾಟ ನಿರ್ಣಾಯಕವಾಗಿದೆ ಎಂದು ಅದು ಹೇಳಿದೆ.

ಇದನ್ನೂ ನೋಡಿ: ಬಿಹಾರಕ್ಕೆ ಮತ್ತೆ ‌ನಿತೀಶ್‌ ಕುಮಾರ್! 50:50 ಲೆಕ್ಕಾಚಾರದಲ್ಲಿ ಬಿಜೆಪಿ!!? Janashakthi Media #BiharResults

Donate Janashakthi Media

Leave a Reply

Your email address will not be published. Required fields are marked *