ಬ್ರುಸೆಲ್ಸ್: ಫಿಫಾ ವಿಶ್ವಕಪ್‌ನಲ್ಲಿ ಭಾನುವಾರ(ನವೆಂಬರ್ 27)ದಂದು ಪಂದ್ಯದಲ್ಲಿ ಮೊರೊಕ್ಕೊ ತಂಡವು ಬೆಲ್ಜಿಯಂ ಅನ್ನು 2–0 ಗೋಲುಗಳಿಂದ ಸೋಲಿಸಿದೆ. ಇದರ ಬೆನ್ನಲ್ಲೇ ಬೆಲ್ಜಿಯಂನ ಫುಟ್ಬಾಲ್ ಅಭಿಮಾನಿಗಳು ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿರುವ ಘಟನೆ ನಡೆದಿದೆ.
ಮೊರೊಕ್ಕೊ ತಂಡ ಕಳೆದ 24 ವರ್ಷಗಳಲ್ಲಿ ವಿಶ್ವಕಪ್ ಪಂದ್ಯಗಳಲ್ಲಿ ಗಳಿಸಿದ ಮೊದಲ ಜಯ ಇದಾಗಿದ್ದು, ಅಲ್ಲಿನ ಅಭಿಮಾನಿಗಳ ಸಂಭ್ರಮ ಮಾಡಿದ್ದಾರೆ. ಆದರೆ, ಬೆಲ್ಜಿಯಂ ತಂಡ ಸೋಲು ಕಂಡಿದ್ದರಿಂದ ಹಿಂಸಾಚಾರಕ್ಕೆ ಇಳಿದಿದ್ದಾರೆ.
ಹಿಂಸಾಚಾರದಲ್ಲಿ ತೊಡಗಿದ ಗುಂಪು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಾಂಧಲೆಗೆ ನಡೆಸಿದ್ದಾರೆ. ಘಟನೆಯಲ್ಲಿ ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಪೊಲೀಸರು ಹಿಂಸಾಚಾರದ ಸ್ಥಳದಲ್ಲಿ ಜಲ ಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸುವ ಮೂಲಕ ಜನರನ್ನು ಚದುರಿಸಿದ್ದಾರೆ. ಈಗಾಗಲೇ ಬೆಲ್ಜಿಯಂನಲ್ಲಿ ಹಲವು ನಿರ್ಬಂಧಗಳನ್ನು ಹೊರಡಿಸಲಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ರಸ್ತೆಯಲ್ಲಿದ್ದ ಕಾರ್, ಬೈಕ್‍ಗಳಿಗೆ ಬೆಂಕಿ ಇಟ್ಟು ಮೊರೊಕ್ಕೊ ದೇಶದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫುಟ್‍ಬಾಲ್ ಅಭಿಮಾನಿಗಳ ಹಿಂಸಾಚಾರ ಹೆಚ್ಚುತ್ತಿದ್ದಂತೆ ಬೆಲ್ಜಿಯಂ ಪೊಲೀಸರು 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಪರಿಸ್ಥಿತಿ ಸಹಜತೆಗೆ ಮರಳಿದೆ. ಸಂಬಂಧಪಟ್ಟ ವಲಯಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಗಲಭೆಕೋರರು ಪೈರೋಟೆಕ್ನಿಕ್ ಮೆಟೀರಿಯಲ್ ಗಳು, ಸ್ಪೋಟಕಗಳು, ಸ್ಟಿಕ್ ಗಳನ್ನು ಬಳಸಿದರು ಮತ್ತು ಹೆದ್ದಾರಿಯಲ್ಲಿ ಬೆಂಕಿ ಹಚ್ಚಿದರು. ಅಲ್ಲದೆ, ಪಟಾಕಿಯಿಂದ ಪತ್ರಕರ್ತರೊಬ್ಬರ ಮುಖಕ್ಕೆ ಗಾಯವಾಗಿದೆ’ ಎಂದು ಪೊಲೀಸ್ ವಕ್ತಾರ ಇಲ್ಸೆ ವ್ಯಾನ್ ಡಿ ಕೀರೆ ಹೇಳಿದ್ದಾರೆ.
ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಮುಂದಾಗಿದ್ದಾರೆ. ಹಿಂಸಾಚಾರ ಸಂಬಂಧ 11 ಜನರನ್ನು ಬಂಧಿಸಿದ್ದಾರೆ. ಅಲ್ಲದೆ, ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ, ಹಿಂಸಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಫಿಫಾ 2022ರ ಪಂದ್ಯದಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾದ ಬೆಲ್ಜಿಯಂ ವಿರುದ್ಧ ಮೊರಾಕ್ಕೊ ತಂಡ 2-0 ಗೋಲುಗಳ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಕಳೆದ 24 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಮೊರಾಕ್ಕೊ ಸಾಧಿಸಿದ ಮೊದಲ ಜಯವಾಗಿದೆ. ಈ ಗೆಲುವಿನೊಂದಿಗೆ ಮೊರಾಕ್ಕೊ “ಎಫ್’ ವಿಭಾಗದ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಹಾಗೂ ಬೆಲ್ಜಿಯಂ ತೃತೀಯ ಸ್ಥಾನಕ್ಕೆ ತಲುಪಿದೆ.