ಮೆಸ್ಸಿ ಮ್ಯಾಜಿಕ್‌, ಆರ್ಜೆಂಟೀನಾಕ್ಕೆ ಕಪ್‌ – ವಿಶ್ವದ ಹೃದಯ ಗೆದ್ದ ಎಂಬಪ್ಪೆ..!

ದೋಹಾ : ವಿಶ್ವಕಪ್​ ಫೈನಲ್​ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ ಚಾಂಪಿಯನ್​ ಪಟ್ಟ ಗೆದ್ದುಕೊಂಡಿತು. ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಮತ್ತು ಫ್ರಾನ್ಸ್​ನ ಯುವ ತಾರೆ ಕೈಲಿಯನ್ ಎಂಬಪ್ಪೆ ಅದ್ಭುತ ಆಟ ಪ್ರದರ್ಶಿಸಿದರು. ಮೆಸ್ಸಿ ಎರಡು ಮತ್ತು ಎಂಬಪ್ಪೆ ಮೂರು ಗೋಲು ಗಳಿಸಿ ಅಭಿಮಾನಿಗಳ ಹೃದಯ ಗೆದ್ದರು.

ಇನ್ನೇನು ಆರ್ಜೆಂಟೀನಾ ಗೆದ್ದು ಮೆಸ್ಸಿಗೆ ಸ್ಮರಣೀಯ ವಿದಾಯ ಹೇಳಬೇಕು ಎನ್ನುವಾಗಲೇ ಎಂಬಪೆ ನೀಡಿದ ಅನಿರೀಕ್ಷಿತ ತಿರುಗೇಟು ಕ್ರೀಡಾಭಿಮಾನಿಗಳನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಚಾಂಪಿಯನ್‌ ಆಟದ ಎಲ್ಲ ಅವತಾರಗಳನ್ನೂ ಕಂಡ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಆರ್ಜೆಂಟೀನಾ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮೆಸ್ಸಿ ಮೇನಿಯಾದಲ್ಲಿ ಮುಳುಗಿದ್ದ ಫ‌ುಟ್‌ಬಾಲ್‌ ಜಗತ್ತಿಗೆ ಕೊನೆಯ ನಿಮಿಷದಲ್ಲಿ ಕೈಲಿಯನ್‌ ಎಂಬಪೆ ಮಹಾಘಾತವಿಕ್ಕಿದರು. ಇನ್ನೇನು 2-0 ಅಂತರದಿಂದ ಆರ್ಜೆಂಟೀನಾ ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲೇ ಫ್ರಾನ್ಸ್‌ ತಿರುಗಿ ಬಿತ್ತು. 80ನೇ ನಿಮಿಷದಲ್ಲಿ ಎಂಬಬೆ ಆಟ ತೀವ್ರಗೊಂಡಿತು. ಬಿರುಸು ಪಡೆಯಿತು. ಒಂದೇ ನಿಮಿಷದ ಅಂತರದಲ್ಲಿ 2 ಗೋಲು ಸಿಡಿಸಿ ಪಂದ್ಯವನ್ನು ಹೆಚ್ಚುವರಿ ಅವಧಿಗೆ ಕೊಂಡೊಯ್ದರು. ಇಲ್ಲಿ ಮತ್ತೆ ಮೆಸ್ಸಿ, ಎಂಬಪೆ ಗೋಲು ಸಿಡಿಸಿದರು. ಶೂಟೌಟ್‌ನಲ್ಲಿ ಆರ್ಜೆಂಟೀನಾ ಗೆಲುವಿನ ನಗೆ ಬೀರಿತು.

ಮೊದಲಾರ್ಧದಲ್ಲಿ ಆರ್ಜೆಂಟೀನಾ ಆಕ್ರಮಣಗೈದರೆ, ದ್ವಿತೀಯಾರ್ಧದ ಕೊನೆಯ ಅವಧಿಯಲ್ಲಿ ಫ್ರಾನ್ಸ್‌ ಪರಾಕ್ರಮಗೈದಿತು. ಚಾಂಪಿಯನ್ನರ ಆಟವನ್ನು ಆಡಿತು. ಪಂದ್ಯ ಹೆಚ್ಚುವರಿ ಅವಧಿಯತ್ತ ಮುಖ ಮಾಡಿತು.
ಕಪ್‌ ಎತ್ತಬೇಕು ಎಂದು ಕನಸು ಕಾಣುತ್ತಿದ್ದ ಮೆಸ್ಸಿಯೇ ಸ್ವತಃ ಮುಂಚೂಣಿಯಲ್ಲಿ ನಿಂತು ಖಾತೆ ತೆರೆಯುವ ಮೂಲಕ ಇಡೀ ತಂಡವನ್ನು ಹುರಿದುಂಬಿಸಿದರು.

ಎಂಬಪ್ಪೆ ಹ್ಯಾಟ್ರಿಕ್ ಗೋಲು : ಪಂದ್ಯದ ದ್ವಿತೀಯಾರ್ಧದಲ್ಲೂ ಫ್ರಾನ್ಸ್ ತಂಡಕ್ಕೆ ನಿರೀಕ್ಷಿತ ರೀತಿಯ ಆಟ ಪ್ರದರ್ಶಿಸಲು ಆರಂಭದಲ್ಲಿ ಸಾಧ್ಯವಾಗಿರಲಿಲ್ಲ. ಆದರೆ ಪಂದ್ಯದ 71 ನೇ ನಿಮಿಷದಲ್ಲಿ ಎಂಬಪ್ಪೆ ಮೊದಲ ಬಾರಿಗೆ ಗೋಲ್‌ಪೋಸ್ಟ್ ಮಾಡಿದರು. ಬಳಿಕ 79ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಎಂಬಪ್ಪೆ, ಗೋಲಾಗಿ ಪರಿವರ್ತಿಸಿ ಫ್ರಾನ್ಸ್‌ನ ಭರವಸೆಯನ್ನು ಜೀವಂತವಾಗಿಟ್ಟರು. ಇಲ್ಲಿಂದ ಫ್ರಾನ್ಸ್ ತಂಡದಲ್ಲಿ ಆತ್ಮವಿಶ್ವಾಸ ಮೂಡಲು ಪ್ರಾರಂಭವಾಯಿತು. ಅದರ ಪರಿಣಾಮ ಮುಂದಿನ ಕೆಲವೇ ನಿಮಿಷಗಳಲ್ಲಿ ಅಂದರೆ ಪಂದ್ಯದ 81ನೇ ನಿಮಿಷದಲ್ಲಿ ಎಂಬಪ್ಪೆ ಅತ್ಯುತ್ತಮ ಗೋಲು ಗಳಿಸಿ ತಂಡವನ್ನು ಸಮಸ್ಥಿತಿಗೆ ತಂದರು. ಆದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಸಹಜವಾಗಿಯೇ ಎಂಬಪ್ಪೆ ಕಣ್ಣಂಚಲ್ಲಿ ನೀರು ಹರಿಯಲಾರಂಭಿಸಿತು.

ಎಂಬಾಪೆಯನ್ನು ಸಂತೈಸಿದ ಫ್ರಾನ್ಸ್‌ ಅಧ್ಯಕ್ಷ: ಪಂದ್ಯದಲ್ಲಿ ಸೋಲು ಕಂಡ ಬಳಿಕ ಬೇಸರದಲ್ಲಿಯೇ ಮೈದಾನದಲ್ಲಿ ಕುಳಿತುಕೊಂಡಿದ್ದ ಕೈಲಿಯನ್‌ ಎಂಬಾಪೆ ಬಳಿ ಬಂದ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌, ಅವರನ್ನು ಸಂತೈಸಿದರು. ಅವರನ್ನು ತಬ್ಬಿಕೊಂಡು ಕೆಲ ಹೊತ್ತು ಮಾತನಾಡಿದರು. ಈ ವೇಳೆ ಎಂಬಾಪೆ ಬಳಿ ಬಂದ ಅರ್ಜೆಂಟೀನಾದ ಗೋಲ್‌ ಕೀಪರ್‌ ಎಮಿನಿಲಿಯೋ ಮಾರ್ಟಿನೆಜ್‌, ಕೂಡ ಕೈಹಿಡಿದು ಸಂತೈಸಿದರು.

ಟ್ವಿಟರ್‌ನಲ್ಲಿ ಅಭಿಮಾನಿಗಳ ಗುಣಗಾನ!

‘ಬಹುಶಃ ಇದು ಸಾರ್ವಕಾಲಿಕ ಶ್ರೇಷ್ಠ ವಿಶ್ವಕಪ್‌ ಪಂದ್ಯ. ಎಂಬಾಪೆ ಆಟ ಫ್ರಾನ್ಸ್ ಪರವಾಗಿ ಅತ್ಯದ್ಬುತವಾಗಿತ್ತು. ಆದರೆ, ಇದು ಲಿಯೋನೆಲ್‌ ಮೆಸ್ಸಿ ಅವರು ಕಿರೀಟ ಹೊರುವ ಕ್ಷಣವಾಗಿತ್ತು. ಫಿಫಾ ವಿಶ್ವಕಪ್‌ ಚಾಂಪಿಯನ್‌ ಆಗಿರುವ ಅರ್ಜೆಂಟೀನಾ ತಂಡಕ್ಕೆ ಅಭಿನಂದನೆಗಳು’ ಎಂದು ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

‘ಬೇರೆ ಯಾವುದಾದರೂ ಕ್ರೀಡೆ ನೋಡುವಾಗಿ ಇಷ್ಟು ರೀತಿಯ ಮೈನವಿರೇಳಿಸುವ ಕ್ಷಣಗಳು ಉಂಟಾಗಿದ್ದು ನನಗೆ ನೆನಪಿಲ್ಲ. ಆದರೆ, ಫೈನಲ್‌ ಪಂದ್ಯ ಬಹಳ ಅದ್ಬುತವಾಗಿತ್ತು. ಥ್ಯಾಂಕ್ಸ್‌ ಫುಟ್‌ಬಾಲ್‌’ ಎಂದು ದಿನೇಶ್‌ ಕಾರ್ತಿಕ್‌ ಟ್ವೀಟ್‌ ಮಾಡಿದ್ದಾರೆ.

ಬಹುಶಃ ನೋಡಿದ ಶ್ರೇಷ್ಠ ಪಂದ್ಯಗಳಲ್ಲಿ ಒಂದು. ಅರ್ಜೆಂಟೀನಾ ಹಾಗೂ ಫ್ರಾನ್ಸ್‌ ಅದ್ಭುತವಾಗಿ ಆಡಿದವು. ಈ ಟ್ರೋಫಿ ಮೆಸ್ಸಿಗಿಂತ ಯಾರೂ ಅರ್ಹರಾಗಿರಲಿಲ್ಲ. ನನ್ನ ಪ್ರಾಮಾಣಿಕ ಅಭಿಪ್ರಾಯವೇನೆಂದರೆ, ಮೆಸ್ಸಿ ಫುಟ್‌ಬಾಲ್‌ ಆಡಿದ ಅತ್ಯಂತ ಶ್ರೇಷ್ಠ ಆಟಗಾರ ಎಂದು ಭಾವನೆ. ಎಂತಾ ಅದ್ಭುತ ಕ್ಷಣ’ ಎಂದು ಗೂಗಲ್‌ ಸಿಇಒ ಸುಂದರ್‌ ಪಿಚೈ ಟ್ವೀಟ್‌ ಮಾಡಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *