ಕೋಲಾರ ಫೆ 04 : ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ಹಾಗೂ ಕೇಂದ್ರ ಸರಕಾರದ ಕಾರ್ಪೊರೇಟ್ ಕಂಪನಿಗಳ ಪರವಾದ ಬಜೆಟ್ ವಿರುದ್ಧ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಗಳ ವತಿಯಿಂದ ಫೆ.6 ರಂದು ದೇಶಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ರಸ್ತೆ ತಡೆ ಚಳುವಳಿಯನ್ನು ಹಮ್ಮಿಕೊಂಡಿದೆ ಸಂಘಟನೆಯ ರಾಜ್ಯ ಸಂಯೋಜಕ ಜಿ.ಸಿ. ಬಯ್ಯಾರೆಡ್ಡಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಲ್ಲಿಯಲ್ಲಿ ಹೋರಾಟ ನಿರತ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಖಂಡಿಸಿ ಹಾಗೂ ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಕೇಂದ್ರದ ಬಜೆಟನ್ನು ವಿರೋಧಿಸಿ ಫೆ.6 ಶನಿವಾರ ಮಧ್ಯಾಹ್ನ 12 ರಿಂದ 3.00ಗಂಟೆಯವರೆಗೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹಾದು ಹೋಗುವ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲು ಸಂಯುಕ್ತ ಹೋರಾಟ-ಕರ್ನಾಟಕ ನಿರ್ಧರಿಸಿದ್ದು ಸಾರ್ವಜನಿಕರು ರೈತರು ಬೆಂಬಲಿಸಬೇಕು ಎಂದು ಮನವಿ ಮಾಡಿದರು
ದೇಶದಲ್ಲಿ ಕೃಷಿ ಬಿಕ್ಕಟ್ಟು, ಕೊರೊನ ರೋಗ, ಲಾಕ್ ಡೌನ್ ಇತ್ಯಾದಿ ಕಾರಣಗಳಿಂದ ದೇಶದ ರೈತರು, ಗ್ರಾಮೀಣಾ ಜನತೆ ತೀರ ಗಂಭೀರವಾದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ರೈತಾಪಿ ಕೃಷಿಯನ್ನು ಬಲಪಡಿಸುವುದಕ್ಕೆ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಿಲ್ಲ ಕೃಷಿಪರ ಬಜೆಟ್ ಮಂಡನೆ ನಡೆದಿಲ್ಲ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನನ್ನು ಜಾರಿ ಮಾಡಬೇಕು. ಆದರೆ, ಕಾರ್ಪೊರೇಟ್ ಕಂಪನಿಗಳ ಪರವಾದ ಬಜೆಟನ್ನು ಮಂಡಿಸಿದೆ. ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳ ಆಸ್ತಿಗಳನ್ನು 400 ಪಟ್ಟು ಹೆಚ್ಚಳ ಮಾಡಿಕೊಳ್ಳುವ ನೀತಿಗಳ ಪರವಾದ ಬಜೆಟ್ ಮಂಡನೆ ಮಾಡಲಾಗಿದೆ ಎಂದು ದೂರಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 2022 ಕ್ಕೆ 75 ವರ್ಷಗಳಾಗುತ್ತದೆ ಈ ಸಂದರ್ಭದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿಯವರ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ ಕಳೆದ ಎರಡು ತಿಂಗಳುಗಳಿಂದ ದೆಹಲಿ ಗಡಿಯಲ್ಲಿ, ದೇಶವ್ಯಾಪಿಯ ಅನೇಕ ರೈತರು ಶಾಂತಿಯುತ ಚಳುವಳಿ ನಡೆಸುತ್ತಿದ್ದು, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಕೊಡಲೇ ನಿಲ್ಲಿಸಬೇಕು. ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ವಿದೇಶಗಳ ನಟ, ನಟಿಯರು ರೈತರ ಚಳುವಳಿ ಬಗ್ಗೆ ಸಕಾರಾತ್ಮಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದ ನಟ, ನಟಿಯರು ಮೋದಿ ಪರ ಎನ್ನುವುದು ತೋರ್ಪಡಿಸುತ್ತಿದ್ದಾರೆ ಈ ಚಾರಿತ್ರಿಕ ರೈತ ಹೋರಾಟದ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಾದ ಕೇಂದ್ರ ಸರ್ಕಾರ, ದೇಶದ್ರೋಹಿ ಹಾಗೂ ಭಯೋತ್ಪಾದಕರೆಂದು ಬಿಂಬಿಸುವ ರೀತಿ ನಡೆದುಕೊಳ್ಳುತ್ತಿದೆ. ಮೂರು ಕೃಷಿ ಸಂಬಂಧಿತ ಕಾನೂನುಗಳನ್ನು ರದ್ದು ಮಾಡಬೇಕು. ವಿದ್ಯುತ್ ಮಸೂದೆ 2020ನ್ನು ವಾಪಸ್ಸು ಪಡೆಯಬೇಕು ಹಾಗೂ ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಳೆಯನ್ನು ಖಾತರಿ ಮಾಡುವ ಕಾನೂನನ್ನು ರಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪಿ.ಆರ್ ಸೂರ್ಯನಾರಾಯಣ, ಟಿ.ಎನ್ ರಾಮೇಗೌಡ, ಹೂವಳ್ಳಿ ನಾಗೇಶ್, ಎನ್.ಎನ್.ಶ್ರೀರಾಮ್, ಹಾರೋಹಳ್ಳಿ ರವಿ, ಮುನಿವೆಂಕಟಪ್ಪ ಮತ್ತಿತರರು ಹಾಜರಿದ್ದರು.