‘ಜಾಗತೀಕರಣ ಕ್ಷಾಮ’ಗಳ ಭೀತಿ ಮತ್ತು ರೈತರಿಗೆ ಪ್ರಧಾನಿಗಳ ಸಲಹೆ

ರೈತರ ಹಿತೈಷಿ ಎಂದು ಹೇಳಿಕೊಳ್ಳುವ ಭಾರತದ ಪ್ರಧಾನ ಮಂತ್ರಿಗಳು ರೈತರಿಗೆ ರಫ್ತು ಬೆಳೆಗಳನ್ನು ಬೆಳೆಯುವಂತೆ ಸಲಹೆ ಮಾಡುವುದು, ಅಂದರೆ ಮುಂದುವರೆದ ದೇಶಗಳಲ್ಲಿ ಬೇಡಿಕೆಯಿರುವ ರೊಕ್ಕದ ಬೆಳೆಗಳನ್ನು ಬೆಳೆಯುವತ್ತ ಹೊರಳುವಂತೆ ಸಲಹೆ ಮಾಡುವುದು, ರೈತರನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಹೊಂದಿರುವ ಅರಿವಿನ ಕೊರತೆಯನ್ನುಪ್ರದರ್ಶಿಸುತ್ತದೆ. ಇದರಿಂದ ಕೃಷಿಕರಿಗೆ ಮತ್ತು ಇಡೀ ದೇಶಕ್ಕೆ ಆಹಾರ ಭದ್ರತೆ ನಷ್ಟವಾಗುವ ಅಪಾಯ ಬರಗಾಲದ ರೂಪದಲ್ಲಿ ಪ್ರಕಟಗೊಳ್ಳಬಹುದು ಮತ್ತು ವಾಸ್ತವವಾಗಿ ಅದು ಈಗಾಗಲೇಅನೇಕ ಆಫ್ರಿಕನ್ ದೇಶಗಳಲ್ಲಿ ಸಂಭವಿಸಿದೆ ಎಂಬ ಅರಿವೂ ಅವರಿಗೆ ಇದ್ದಂತಿಲ್ಲ. ಅಲ್ಲದೆ ಈಗ ಟ್ರಂಪ್‍ರಂತವರು ವ್ಯಾಪಾರವನ್ನು ಒಂದು ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವಾಗ ಒಂದು ದೇಶವು ಆಹಾರ ಆಮದನ್ನುಅವಲಂಬಿತವಾಗುವ ಪರಿಸ್ಥಿತಿಯು ನೀತಿ ನಿರೂಪಣೆಯ ದೃಷ್ಟಿಯಲ್ಲಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಅತ್ಯಂತ ಖಚಿತ ಮಾರ್ಗವಾಗುತ್ತದೆ. ಭೀತಿ

-ಪ್ರೊ. ಪ್ರಭಾತ್ಪಟ್ನಾಯಕ್

-ಅನು: ಕೆ.ಎಂ.ನಾಗರಾಜ್

ಭಾರತದ ರೈತರು “ರಫ್ತು-ಆಧಾರಿತ ಬೆಳೆಗಳನ್ನು”ಹೆಚ್ಚಾಗಿ ಬೆಳೆಯಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 11ರಂದು ನವದೆಹಲಿಯಲ್ಲಿ ಹೇಳಿದ್ದಾರೆ. ಇದು ಭಾರತದ ರೈತರು ಆಹಾರ ಧಾನ್ಯಗಳನ್ನು ಬೆಳೆಯುವುದನ್ನು ಬಿಟ್ಟು ಅದರ ಬದಲಾಗಿ ದೇಶವು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕು ಎಂದು ಹೇಳಿದಂತಿತ್ತು. ಇದೇ ವಿಷಯವನ್ನು ವಿಶ್ವಬ್ಯಾಂಕ್‌ ಮತ್ತು ಇತರ ಕೆಲವು ಸಂಸ್ಥೆಗಳು ಕಳೆದ ಕೆಲವು ವರ್ಷಗಳಿಂದ ಹೇಳುತ್ತಲೇ ಬಂದಿವೆ ಮತ್ತು ಸಾಮ್ರಾಜ್ಯಶಾಹಿ ದೇಶಗಳು ಈ ಬಗ್ಗೆ ಒತ್ತಾಯಿಸುತ್ತಲೇ ಬಂದಿವೆ. ಭಾರತ ಅರ್ಥಶಾಸ್ತ್ರಜ್ಞರೂ ಸಹ ಈ ಆಶಯವನ್ನೇ ಪ್ರತಿಧ್ವನಿಸುತ್ತಾರೆ. ಯುಎಸ್‌ ತನ್ನ ರೈತರಿಗೆ ಕೃಷಿ ಉತ್ಪಾದನೆಯ ಒಟ್ಟು ಮೌಲ್ಯದ ಅರ್ಧದಷ್ಟು ಸಬ್ಸಿಡಿಗಳನ್ನು ನೀಡುತ್ತದೆಯಾದ್ದರಿಂದ ಈ ರೈತರು ದೊಡ್ಡಪ್ರಮಾಣದಲ್ಲಿ ಬೆಳೆಯುವ ಆಹಾರ ಧಾನ್ಯಗಳು ಯುಎಸ್‌ಗೆ ಅಧಿಕವಾಗಿ ಉಳಿಯುತ್ತವೆ. ಭೀತಿ

ಈ ಅಧಿಕ ಧಾನ್ಯಗಳನ್ನು ಭಾರತದಂತಹ ದೇಶಗಳಿಗೆ ಮಾರಾಟ ಮಾಡಬೇಕಾಗುತ್ತದೆ. ಹಾಗಾಗಿ, ನಮ್ಮಂತಹ ದೇಶಗಳು ತಮ್ಮ ಭೂ ಬಳಕೆಯನ್ನು ಬದಲಾಯಿಸಿಕೊಳ್ಳಬೇಕೆಂದು ಅವರು ಬಯಸುತ್ತಾರೆ. ಅಂದರೆ, ಭಾರತದ ರೈತರು ಆಹಾರ ಧಾನ್ಯಗಳನ್ನು ಬೆಳೆಯುವುದರ ಬದಲು ಈ ದೇಶಗಳಿಗೆ ಅಗತ್ಯವಿರುವ ಮತ್ತು ಅವು ಉತ್ಪಾದಿಸಲಾಗದ ಹಣ್ಣು ಹಂಪಲುಗಳನ್ನು (ರಫ್ತು ಬೆಳೆಗಳನ್ನು) ಬೆಳೆಯಬೇಕೆಂದು ಬಯಸುತ್ತಾರೆ. ಈ ರೀತಿಯಲ್ಲಿ  ರೈತರಿಗೆ ಮೋದಿಯವರು ನೀಡಿದ ಸಲಹೆಯು ಸಾಮ್ರಾಜ್ಯಶಾಹಿಯ ಬೇಡಿಕೆಗಳಿಗೆ ಅನುಗುಣವಾಗಿದೆ. ಭೀತಿ

ಇದನ್ನೂ ಓದಿ: ಕಾನೂನು ಧಿಕ್ಕರಿಸಿದ ಸ್ಕೂಲ್ ವಿರುದ್ಧ ಕ್ರಮಕ್ಕೆ “ಲಂಚ ಬೇಕೆ ಲಂಚ?” ಎಂಬ ವಿನೂತನ ಪ್ರತಿಭಟನೆ

ಭೂಬಳಕೆಯನ್ನು ಈ ರೀತಿಯಲ್ಲಿ ಬದಲಾಯಿಸುವ ಉದ್ದೇಶದಿಂದಲೇ ಮೋದಿ ಸರ್ಕಾರವು ಮೂರು ಕುಖ್ಯಾತ ಕೃಷಿ ಕಾನೂನುಗಳನ್ನು ರೈತರ ಮೇಲೆ ಹೇರಲು ಪ್ರಯತ್ನಿಸಿತ್ತು. ಹಿಂದೆ ಅಸ್ತಿತ್ವದಲ್ಲಿದ್ದ ಕನಿಷ್ಠ ಬೆಂಬಲ ಬೆಲೆಗಳ ವ್ಯವಸ್ಥೆಯಡಿಯಲ್ಲಿ ರೊಕ್ಕದ ಬೆಳೆಗಳಿಗೆ ದೊರಕುತ್ತಿದ್ದ ಬೆಲೆ ಬೆಂಬಲವನ್ನು ತೆಗೆದುಹಾಕಲಾಗಿತ್ತಾದರೂ ಆಹಾರ ಧಾನ್ಯಗಳ ವಿಷಯದಲ್ಲಿ ಬೆಲೆ ಬೆಂಬಲವನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಆದರೆ, ಆಹಾರ ಧಾನ್ಯಗಳ ಉತ್ಪಾದನೆಯ ಮೇಲಿನ ಆಕರ್ಷಣೆಯನ್ನು ಕಡಿಮೆ ಮಾಡುವ ಮೂಲಕ ಭೂ ಬಳಕೆಯಲ್ಲಿ ಬದಲಾವಣೆಯಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಆಹಾರ ಧಾನ್ಯಗಳಿಗೆ ದೊರಕುತ್ತಿದ್ದ ಬೆಲೆ ಬೆಂಬಲವನ್ನು ತೆಗೆದುಹಾಕಲು ಮೂರು ಕುಖ್ಯಾತ ಕೃಷಿ ಕಾನೂನುಗಳ ಮೂಲಕ ಪ್ರಯತ್ನಿಸಲಾಯಿತು. ಭೀತಿ

ಈ ಕಾನೂನುಗಳ ವಿರುದ್ಧವಾಗಿ ವರ್ಷವಿಡೀ ನಡೆಸಿದ ಆಂದೋಲನದಲ್ಲಿ ರೈತರು ಯಶಸ್ವಿಯಾದರು. ಹಾಗಾಗಿ, ಆಹಾರ ಧಾನ್ಯಗಳಿಗೆ ದೊರಕುತ್ತಿದ್ದ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಮುಂದುವರೆಸಲಾಯಿತು. ಇದು ಸಾಮ್ರಾಜ್ಯಶಾಹಿಗೆ ಮತ್ತು ಮೋದಿ ಸರ್ಕಾರಕ್ಕೆ ಒಂದು ಮುಖಭಂಗವಾಗಿ ಕಂಡಿತು. ಆದರೂ, ಸಾಮ್ರಾಜ್ಯಶಾಹಿಗಳಾಗಲಿ ಅಥವಾ ಮೋದಿ ಸರ್ಕಾರವಾಗಲಿ ತಮ್ಮ ಅಜೆಂಡಾವನ್ನು ಕೈಬಿಟ್ಟಿಲ್ಲ ಎಂಬುದನ್ನು ರಫ್ತು ಬೆಳೆಗಳನ್ನು ಬೆಳೆಯುಂತೆ ಮೋದಿಯವರು ಇತ್ತೀಚೆಗೆ ರೈತರಿಗೆ ಮಾಡಿರುವ ಶಿಫಾರಸು ದೃಢೀಕರಿಸುತ್ತದೆ. ಭೀತಿ

ಪ್ರಧಾನಿಗೆ ಇರದ ಅರಿವು

ರೈತರ ಈ ಆಂದೋಲನ ನಡೆಯುತ್ತಿದ್ದ ಸಮಯದಲ್ಲಿ, ಸರ್ಕಾರೀ ಅರ್ಥಶಾಸ್ತ್ರಜ್ಞರು ಮತ್ತು ವಿಶ್ವಬ್ಯಾಂಕ್ ನಿಲುವಿನ ಅನುಯಾಯಿಗಳು, ಆಹಾರ ಧಾನ್ಯಗಳಿಂದ ರೊಕ್ಕದ ಬೆಳೆಗಳಿಗೆ ಭೂಪ್ರಮಾಣವನ್ನು ಬದಲಾಯಿಸುವುದು ರೈತರ ಹಿತಾಸಕ್ತಿಗಾಗಿಯೇ ಎಂದು ಹೇಳುತ್ತಿದ್ದರು ಮತ್ತು ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ಪದ್ಧತಿ ಇರುವುದರಿಂದಾಗಿಯೇ ಈ ಬದಲಾವಣೆ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದರು. ಆದರೆ, ರೊಕ್ಕದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ತೆಗೆದುಹಾಕುವುದರಿಂದ ವಿಶ್ವ ಮಾರುಕಟ್ಟೆಯಲ್ಲಿ ಈ ಬೆಳೆಗಳ ಬೆಲೆಗಳ ತೀವ್ರ ಏರಿಳಿತಗಳಿಗೆ ತಾವು ಒಡ್ಡಿಕೊಳ್ಳಬೇಕಾಗುತ್ತದೆ ಎಂಬುದು ರೈತರಿಗೆ ಚೆನ್ನಾಗಿ ತಿಳಿದಿತ್ತು.

ಈ ಕಾರಣದಿಂದಾಗಿ ರೊಕ್ಕದ ಬೆಳೆಗಳನ್ನು ಬೆಳೆಯುವ ರೈತರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಿದ್ದರು ಮತ್ತು ಈ ಬೆಳೆಗಳ ಉತ್ಪಾದನೆಗೆ ದೊಡ್ಡ ಮೊತ್ತದ ಸಾಲ ಅಗತ್ಯವಾಗುವುದರಿಂದ ಈ ಅಪಾಯವು ಮತ್ತಷ್ಟು ಹೆಚ್ಚುತ್ತಿತ್ತು. ಹಾಗಾಗಿ ಬೆಲೆಗಳ ಕುಸಿತದ ವರ್ಷಗಳಲ್ಲಿ, ಈ ಬೆಳೆಗಳನ್ನು ಬೆಳೆಯಲು ರೈತರು ತೆಗೆದುಕೊಂಡ ಸಾಲಗಳನ್ನು ಮರುಪಾವತಿಸುವುದು ಸಾಧ್ಯವಾಗದ ಕಾರಣದಿಂದ ಅನೇಕ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಭೀತಿ

ಕಳೆದ ಮೂರು ದಶಕಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಸಂಖ್ಯೆಯ ರೈತರು, ಪ್ರಧಾನವಾಗಿ ರೊಕ್ಕದ ಬೆಳೆ (ಅದನ್ನೇ ವಿಶೇಷವಾಗಿ ಅಲ್ಲದಿದ್ದರೂ) ಬೆಳೆಯುವ ರೈತರು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಹಾರ ಧಾನ್ಯಗಳಿಗೆ ದೊರಕುತ್ತಿದ್ದ ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ಸರ್ಕಾರವು ತೆಗೆದುಹಾಕಿದಾಗ, ಈ ಕ್ರಮವನ್ನು ರೈತರು ವಿರೋಧಿಸಿದರು ಏಕೆಂದರೆ ಅದು ಅವರಿಗೆ ಒದಗುತ್ತಿದ್ದ ಏಕೈಕ ರಕ್ಷಣಾತ್ಮಕ ತಡೆಗೋಡೆಯಾಗಿತ್ತು. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದಾಗ ಕಾದಿರುವ ಭವಿಷ್ಯದ ಬಗ್ಗೆ, ಅವರ ಹಿತೈಷಿ ಎಂದು ಹೇಳಿಕೊಂಡಿರುವ ಪ್ರಧಾನಿಗಿಂತ ಮತ್ತು ವಿಶ್ವಬ್ಯಾಂಕ್ ನಿಲುವನ್ನು ಅನುಸರಿಸುವ ಅರ್ಥಶಾಸ್ತ್ರಜ್ಞರಿಗಿಂತ ಹೆಚ್ಚಿನ ಅರಿವು ಅವರಿಗೆ ಇತ್ತು. ಭೀತಿ

ರೊಕ್ಕದ ಬೆಳೆಗಳ ಬೆಲೆ ಕುಸಿತದ ಅವಧಿಯಲ್ಲಿ ಅವುಗಳನ್ನು ಬೆಳೆಯುವುದಕ್ಕಾಗಿ ಮಾಡಿದ ಸಾಲಗಳ ಮರುಪಾವತಿ ಸಾಧ್ಯವಾಗುವುದಿಲ್ಲ. ಈ ಅಪಾಯದ ಜೊತೆಗೆ, ಆಹಾರ ಧಾನ್ಯಗಳ ಬದಲಾಗಿ ರೊಕ್ಕದ ಬೆಳೆಗಳನ್ನು ತೆಗೆಯುವ ಜಮೀನಿನ ವಿಸ್ತಾರದಲ್ಲಿ ಉಂಟಾಗುವ ಬದಲಾವಣೆಯಲ್ಲಿ ಅಂತರ್ಗತವಾಗಿರುವ ಒಂದು ಅಧಿಕ ಅಪಾಯವೆಂದರೆ, ಅದು ಕೃಷಿಕರಿಗೆ ಮತ್ತು ಇಡೀ ದೇಶಕ್ಕೆ ಆಹಾರ ಭದ್ರತೆ ನಷ್ಟವಾಗುವ ಅಪಾಯ. ಈ ಅಪಾಯವು ಬರಗಾಲದ ರೂಪದಲ್ಲಿ ಪ್ರಕಟಗೊಳ್ಳಬಹುದು ಮತ್ತು ವಾಸ್ತವವಾಗಿ ಅದು ಪ್ರಕಟಗೊಂಡಿರುವುದೂ ಹೌದು. ಇಂಥಹ ಬರಗಾಲಗಳು ಜಾಗತೀಕರಣದ ಆಳ್ವಿಕೆಯಲ್ಲಿ ಆಹಾರ ಧಾನ್ಯಗಳ ಬದಲಾಗಿ ರೊಕ್ಕದ ಬೆಳೆಗಳನ್ನು ತೆಗೆಯುವ ಜಮೀನಿನ ವಿಸ್ತಾರವು ಬದಲಾದ ಅನೇಕ ಆಫ್ರಿಕನ್ ದೇಶಗಳಲ್ಲಿ ಸಂಭವಿಸಿವೆ. The Perilous Passage ಎಂಬ ತಮ್ಮ ಪುಸ್ತಕದಲ್ಲಿ ಅರ್ಥಶಾಸ್ತ್ರಜ್ಞ ಅಮಿಯಾ ಕುಮಾರ್ ಬಾಗ್ಚಿ ಅವರು ಇಂತಹ ಬರಗಾಲಗಳನ್ನು ಬಹಳ ಸೂಕ್ತವಾಗಿ “ಜಾಗತೀಕರಣ ಕ್ಷಾಮಗಳು” ಎಂದು ಕರೆಯುತ್ತಾರೆ.

ಇಂತಹ ಬರಗಾಲಗಳು ಸಂಭವಿಸುವ ಕಾರಣ ಹೀಗಿದೆ: ಒಂದು ದೇಶವು ರೊಕ್ಕದ ಬೆಳೆಗಳನ್ನು ಉತ್ಪಾದಿಸಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡಾಗ, ಅದು ಉತ್ಪಾದಿಸುವ ಮತ್ತು ರಫ್ತು ಮಾಡುವ ಬೆಳೆಗೆ, ಬೆಲೆ ಕುಸಿತದ ವರ್ಷದಲ್ಲಿ, ಈ ಆಮದುಗಳಿಗೆ ಪಾವತಿಸಲು ಅಗತ್ಯವಾಗುವಷ್ಟು ವಿದೇಶಿ ವಿನಿಮಯವನ್ನು ಗಳಿಸುವುದು ಸಾಧ್ಯವಾಗುವುದಿಲ್ಲ. ಏಕೆಂದರೆ, ಆಹಾರ ಧಾನ್ಯಗಳ ಬೆಲೆಗಳ ಏರಿಳಿತಗಳು ರೊಕ್ಕದ ಬೆಳೆಗಳ ಬೆಲೆಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕೆಳ ಮಟ್ಟದಲ್ಲಿ ಇರುತ್ತವೆಯಾದರೂ, ಆ ವರ್ಷದಲ್ಲಿ ಆಹಾರ ಧಾನ್ಯಗಳ ಬೆಲೆಗಳು ದೇಶವು ರಫ್ತು ಮಾಡುವ ನಿರ್ದಿಷ್ಟ ಬೆಳೆಯ ಬೆಲೆ ಕುಸಿತವಾದಷ್ಟು ಕೆಳ ಮಟ್ಟದಲ್ಲಿ ಇರುವುದಿಲ್ಲ. ಆದ್ದರಿಂದ, ದೇಶವು ತನ್ನ ತಲಾ ಆಹಾರ ಧಾನ್ಯ ಲಭ್ಯತೆಯ ಕುಸಿತವನ್ನು ತಡೆಯುವುದು ಸಾಧ್ಯವಾಗುವುದಿಲ್ಲ. ಹಾಗಾಗಿ, ಬರಗಾಲದ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ. ಭೀತಿ

ತಪ್ಪಿಸಲಾಗದ ಬರಗಾಲದ ಸಾಧ್ಯತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಸಾಕಷ್ಟು ಆಹಾರ ಧಾನ್ಯಗಳ ಪೂರೈಕೆಯನ್ನು ದೇಶವು ಹಾಗೂ ಹೀಗೂ ನಿರ್ವಹಿಸುತ್ತದೆ ಎಂದು ಊಹಿಸಿಕೊಂಡರೂ, ಉದಾಹರಣೆಗೆ ಕೆಲವು ದಾನಿ ದೇಶಗಳು ಇಂತಹ ಕಷ್ಟಕರ ವರ್ಷದಲ್ಲಿ “ಆಹಾರ ನೆರವು” ಲಭಿಸುವಂತೆ ಮಾಡುವುದರಿಂದ, ಸಮಸ್ಯೆಯಂತೂ ಇನ್ನೂ ಇದ್ದೇ ಇರುತ್ತದೆ. ಬೆಲೆ ಕುಸಿದಿರುವ ರೊಕ್ಕದ ಬೆಳೆಯನ್ನು ಬೆಳೆಯುವ ರೈತರಿಗೆ “ಆಹಾರ ನೆರವು” ಒಳಹರಿದು ಆಹಾರ ಧಾನ್ಯಗಳು ಲಭ್ಯವಿದ್ದರೂ ಸಹ, ಅವುಗಳನ್ನು ಮಾರುಕಟ್ಟೆಯಲ್ಲಿ ಕೊಳ್ಳುವಷ್ಟು ಹಣ ಅವರಲ್ಲಿ ಇರುವುದಿಲ್ಲ. ಆದ್ದರಿಂದ,”ಆಹಾರ ನೆರವು” ಏರ್ಪಡಿಸುವುದರ ಜೊತೆಗೆ ಸಂಕಷ್ಟದಲ್ಲಿರುವ ಕೃಷಿಕರಿಗೆ ಆಹಾರ ಸಬ್ಸಿಡಿಯನ್ನೂ ನೀಡಬೇಕಾಗುತ್ತದೆ.  ಈ ಸಬ್ಸಿಡಿಯನ್ನು ಸರ್ಕಾರವು ಒಂದು ವೇಳೆ ನೀಡದಿದ್ದರೆ (ಅಥವಾ ಪೀಡಿತ ಜನಸಂಖ್ಯೆಗೆ ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸದಿದ್ದರೆ) ಮತ್ತೆ ಬರಗಾಲದ ಸಾಧ್ಯತೆಗಳನ್ನು ತಪ್ಪಿಸುವುದು ಸಾಧ್ಯವಿಲ್ಲ. ಭೀತಿ

ಇದೇ ರೀತಿಯ ನಿರೀಕ್ಷೆಗಳುಆಹಾರ ಧಾನ್ಯಗಳ ಬದಲು ಅಲ್ಪ ಉದ್ಯೋಗ-ತೀವ್ರ ರೊಕ್ಕದ ಬೆಳೆಗೆ ಬದಲಾದರೆ,ಅಂದರೆ ಬೆಳೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಉದ್ಯೋಗ ಪಡೆಯಬಹುದಾದ ಜನರ ಸಂಖ್ಯೆಯು ಪ್ರತಿ ಎಕರೆಗೂ ಇಳಿಕೆಯಾದರೆ, ಬರಗಾಲ ಪರಿಸ್ಥಿತಿ ಉದ್ಭವಿಸುತ್ತದೆ ಅಥವಾ ಕೊನೆಯ ಪಕ್ಷ ಅಪೌಷ್ಟಿಕತೆ ಏರಿಕೆಯಾಗುತ್ತದೆ.ಬೇಡಿಕೆಯಿರುವಷ್ಟು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ದೇಶವು ಸಾಕಷ್ಟು ವಿದೇಶಿ ವಿನಿಮಯವನ್ನು ಹೊಂದಿದ್ದರೂ ಸಹ, ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳನ್ನು ಕೊಳ್ಳಲು ನಿರುದ್ಯೋಗಿಗಳ ಬಳಿ ಹಣವಿರುವುದಿಲ್ಲ. ಇಂಥಹ ಒಂದು ಸಂದರ್ಭದಲ್ಲಿಯೂ ಸಹ ಬರಗಾಲದಂತಹ ಪರಿಸ್ಥಿತಿ ಉದ್ಭವಿಸುತ್ತದೆ. ಭೀತಿ

ಆದರೆ, ಅದರ ಕಾರಣವು ಹಿಂದೆ ಚರ್ಚಿಸಿದ ಕಾರಣಕ್ಕಿಂತ ಭಿನ್ನವಾಗಿರುತ್ತದೆ. ಈ ಬಗ್ಗೆ ಅಮರ್ತ್ಯ ಸೇನ್ ಕಂಡುಕೊಂಡ ವ್ಯತ್ಯಾಸವನ್ನು ಬಳಸಿಕೊಂಡು ಹೇಳುವುದಾದರೆ, ಇದು “ವಿನಿಮಯ ಅರ್ಹತೆಯ ವೈಫಲ್ಯ”(ಎಫ್‍ಇಇ)ದ ಪ್ರಕರಣವಾಗಿರುತ್ತದೆ (ಆಹಾರವನ್ನು ಕೊಳ್ಳಲು ನಿರುದ್ಯೋಗಿಗಳಿಗೆ ವರಮಾನ ಅಥವಾ “ಅರ್ಹತೆ” ಇಲ್ಲದಿರುವುದರಿಂದ) ಮತ್ತು ಅದು ಈ ಹಿಂದೆ ಪ್ರಸ್ತಾಪಿಸಿದ “ಆಹಾರ ಲಭ್ಯತೆ ಇಳಿಕೆ” (ಎಫ್‍ಎಡಿ)ಪ್ರಕರಣಕ್ಕಿಂತ ಭಿನ್ನವಾಗಿರುತ್ತದೆ. “ವಿನಿಮಯ ಅರ್ಹತೆಯ ವೈಫಲ್ಯ” ಪ್ರಕರಣವು ಸಂಭವಿಸಬಹುದು(ರೊಕ್ಕ ಬೆಳೆಯು ಅಲ್ಪ ಉದ್ಯೋಗ-ತೀವ್ರವಾಗಿದ್ದರೆ, ಉದಾಹರಣೆಗೆ, ತೋಟಗಳಲ್ಲಿ ಬೆಳೆಯುವ ಹಣ್ಣುಗಳ ಸಂದರ್ಭದಲ್ಲಿ ಇದು ನಿಜ), ಆದರೆ,”ಆಹಾರ ಲಭ್ಯತೆ ಇಳಿಕೆ” ಪ್ರಕರಣವು ನಿಜಕ್ಕೂ ಸಂಭವಿಸುತ್ತದೆ. ಭೀತಿ

ಬೆಳೆ ತೆಗೆಯುವ ಜಮೀನಿನ ವಿಸ್ತಾರವನ್ನು ಆಹಾರ ಬೆಳೆಗಳಿಂದ ರೊಕ್ಕದ ಬೆಳೆಗಳಿಗೆ ಬದಲಾಯಿಸುವ ಮೂಲಕ ದೇಶದ ಆಹಾರ ಧಾನ್ಯ ಉತ್ಪಾದನೆಯನ್ನು ಇಳಿಕೆ ಮಾಡುವ ಕ್ರಮವು ದೇಶದ ಆಹಾರ ಭದ್ರತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನವ-ಉದಾರವಾದಿ ಆಳ್ವಿಕೆಯಲ್ಲಿ ಸಂಭವಿಸುವಂತೆ ಮತ್ತು ಜಾಗತಿಕ ದಕ್ಷಿಣದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಆಫ್ರಿಕಾದಲ್ಲಿ ಸಂಭವಿಸಿದಂತೆ, ಬರಗಾಲಗಳು ಸಂಭವಿಸಲು ಅನುಕೂಲಕರವಾಗುವ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಆಹಾರ ಧಾನ್ಯ ಉತ್ಪಾದನೆಯಿಂದ ಹಿಂದೆ ಸರಿಯದ ಕಾರಣದಿಂದ ಇಲ್ಲಿಯವರೆಗೂ ಈ ಸಾಧ್ಯತೆಯಿಂದ ತಪ್ಪಿಸಿಕೊಂಡಿದ್ದ ಭಾರತವು, ಸಾಮ್ರಾಜ್ಯಶಾಹಿ ಒತ್ತಡದಲ್ಲಿ ಸಿಲುಕಿ ತಲೆಬಾಗಿರುವ ತನ್ನ ಪ್ರಧಾನ ಮಂತ್ರಿಯ ಈ ಸಲಹೆಗೆ ರೈತರು ಕಿವಿಗೊಟ್ಟರೆ, ಅವರು ಈ ಸಾಧ್ಯತೆಗೆ ಒಡ್ಡಿಕೊಳ್ಳುತ್ತಾರೆ. ಭೀತಿ

ಸಾಮ್ರಾಜ್ಯಶಾಹಿಗೆ ರಾಜಕೀಯ ಅಸ್ತ್ರ

“ಜಾಗತೀಕರಣ ಕ್ಷಾಮ”ದ ಸಂಭಾವ್ಯತೆಯ ಹೊರತಾಗಿ, ಆಹಾರ ಧಾನ್ಯಗಳ ಮೇಲಿನ ಆಮದು ಅವಲಂಬನೆಯು ಸಂಪೂರ್ಣವಾಗಿ ಸೂಕ್ತವಲ್ಲ ಎಂಬುದಕ್ಕೆ ಒಂದು ಅಧಿಕ ಕಾರಣವೂ ಇದೆ. ತನ್ನ ಆದೇಶಗಳಿಗೆ ತಲೆಬಾಗದ ದೇಶಗಳ ವಿರುದ್ಧ  ಏಕಪಕ್ಷೀಯ ಆರ್ಥಿಕ ನಿರ್ಬಂಧಗಳನ್ನು ಅಮೆರಿಕವು ವ್ಯವಸ್ಥಿತವಾಗಿ ಬಳಸಿದೆ. ಇತರ ಸಾಮ್ರಾಜ್ಯಶಾಹಿ ದೇಶಗಳ ಬೆಂಬಲದೊಂದಿಗೆ ಅಮೆರಿಕವು ಪ್ರಸ್ತುತದಲ್ಲಿ ಏಕಪಕ್ಷೀಯ ನಿರ್ಬಂಧಗಳನ್ನು ವಿಧಿಸಿರುವ ಹಲವಾರು ದೇಶಗಳಲ್ಲಿ ಕ್ಯೂಬಾ, ಇರಾನ್, ರಷ್ಯಾ, ಉತ್ತರ ಕೊರಿಯಾ ಮತ್ತು ವೆನೆಜುವೆಲಾ ಸೇರಿವೆ. ನಿರ್ಬಂಧಗಳು ಹೊಂದಿರುವ ವ್ಯಾಪ್ತಿ ಬದಲಾಗುತ್ತದೆ. ಸಾರಭೂತವಾಗಿ ಸ್ವತಃ ಅಮೆರಿಕವು ನಿರ್ಬಂಧಿತ ದೇಶದೊಂದಿಗೆ ವ್ಯಾಪಾರ ಮಾಡದಿರುವ ರೂಪವನ್ನು ತೆಗೆದುಕೊಳ್ಳುತ್ತವೆ ಮತ್ತು ಇತರ ದೇಶಗಳು ನಿರ್ಬಂಧಿತ ದೇಶದೊಂದಿಗೆ ವ್ಯಾಪಾರ ಮಾಡುವುದನ್ನು ತಡೆಯುತ್ತವೆ. ಭೀತಿ

ಒಂದು ದೇಶವು ಆಹಾರ ಧಾನ್ಯಗಳ ಆಮದಿನ ಮೇಲೆ ಅವಲಂಬಿತವಾಗಿದ್ದರೆ, ಆಗ ಅದರ ವಿರುದ್ಧವಾಗಿ ಅಮೆರಿಕ ಮತ್ತು ಇತರ ಸಾಮ್ರಾಜ್ಯಶಾಹಿ ದೇಶಗಳು ನಿರ್ಬಂಧಗಳನ್ನು ಹೇರಿದಾಗ ಅದು ಒಂದು ಮಾನವ ದುರಂತವನ್ನು ಉಂಟುಮಾಡುತ್ತದೆ. ಈ ನಿರ್ಬಂಧಗಳು ವಿದೇಶದಲ್ಲಿ ಇರಿಸಲಾಗಿರುವ ನಿರ್ಬಂಧಿತ ದೇಶದ ವಿದೇಶಿ ವಿನಿಮಯ ಸ್ವತ್ತುಗಳನ್ನು ಒಂದು ವೇಳೆ ಮುಟ್ಟುಗೋಲು ಹಾಕಿಕೊಳ್ಳುವ ರೂಪವನ್ನು ತೆಗೆದುಕೊಂಡರೆ, ಆಹಾರ ಧಾನ್ಯಗಳನ್ನು ಖರೀದಿಸುವ ಅದರ ಸಾಮರ್ಥ್ಯ ಮತ್ತಷ್ಟು ಕ್ಷೀಣಿಸುತ್ತದೆ ಮತ್ತು ಮಾನವ ದುರಂತ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಇಡೀ ಸಾಮ್ರಾಜ್ಯಶಾಹಿ ಜಗತ್ತಿನ ಆಡಳಿತ ವಲಯಗಳು ಗಾಜಾದಲ್ಲಿ ನಡೆದ ನರಮೇಧವನ್ನು ಸೂಚ್ಯವಾಗಿ ಅನುಮೋದಿಸುವುದರೊಂದಿಗೆ, ಒಂದು ದೇಶವು ಸಾಮ್ರಾಜ್ಯಶಾಹಿಯನ್ನು ಧಿಕ್ಕರಿಸುವ ನಿಲುವನ್ನು ತೆಗೆದುಕೊಂಡರೆ, ಈ ದುರಂತ ಸಂಭವಿಸುವ ಅಪಾಯವು ಇಂದು ಬಹಳಮಟ್ಟಿಗೆ ನಿಜವೂ ಹೌದು. ಭೀತಿ

ವ್ಯಾಪಾರವನ್ನು ವಾಸ್ತವವಾಗಿ ಒಂದು ರಾಜಕೀಯ ಅಸ್ತ್ರವಾಗಿ ಕೊಂಚವೂ ನಾಚಿಕೆ ಇಲ್ಲದೆ ಡೊನಾಲ್ಡ್ ಟ್ರಂಪ್‌ ಬಳಸುತ್ತಿರುವುದರಿಂದ, ಒಂದು ದೇಶವು ಆಹಾರ ಆಮದು-ಅವಲಂಬಿತವಾಗುವ ಪರಿಸ್ಥಿತಿಯು ನೀತಿ ನಿರೂಪಣೆಯ ದೃಷ್ಟಿಯಲ್ಲಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಅತ್ಯಂತ ಖಚಿತ ಮಾರ್ಗವಾಗುತ್ತದೆ. ಈ ರೀತಿಯಲ್ಲಿ ಆಹಾರ ಆಮದು-ಅವಲಂಬನೆಯು ಈಗ ಒಂದು ದೇಶವನ್ನು ಸಾಮ್ರಾಜ್ಯಶಾಹಿಯ ಹಂಗಿನ ಪ್ರಭುತ್ವದ ಸ್ಥಿತಿಗೆ ಇಳಿಸುವ ಸಾಧನವಾಗಿದೆ.

ಭಾರತದ ಪ್ರಧಾನ ಮಂತ್ರಿಯು ತನ್ನ ರೈತರಿಗೆ ರಫ್ತು ಬೆಳೆಗಳನ್ನು ಬೆಳೆಯುವಂತೆ ಸಲಹೆ ಮಾಡುವುದು, ಅಂದರೆ ಮೆಟ್ರೊಪಾಲಿಟನ್‌ ದೇಶಗಳಲ್ಲಿ ಬೇಡಿಕೆಯಿರುವ ರೊಕ್ಕದ ಬೆಳೆಗಳನ್ನು ಬೆಳೆಯುವತ್ತ ಹೊರಳುವಂತೆ ಸಲಹೆ ಮಾಡುವುದು, ರೈತರನ್ನು ಆವರಿಸಿರುವ ಸಮಸ್ಯೆಗಳ ಬಗ್ಗೆ ಅವರು ಹೊಂದಿರುವ ಅರಿವಿನ ಕೊರತೆಯನ್ನು ಮತ್ತು ಅದರಿಂದಾಗಿ ಸಾಮ್ರಾಜ್ಯಶಾಹಿ ಒತ್ತಡಗಳಿಗೆ ಅವರು ಒಳಪಡುವ ರೀತಿಯ ದೌರ್ಬಲ್ಯವನ್ನು ತೋರಿಸುತ್ತದೆ. ಇದಂತೂ ಒಂದು ವಿಸ್ಮಯವೇ ಸರಿ.

ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ಕ್ಲೈಮ್ಯಾಕ್ಸ್‌ನತ್ತ SIT ತನಿಖೆ ; ಫಲಿತಾಂಶಕ್ಕಾಗಿ ಕಾಯೋಣ Janashakthi Media

Donate Janashakthi Media

Leave a Reply

Your email address will not be published. Required fields are marked *