ಈ ವರ್ಷದ ನವಂಬರಿನಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಾದ ಬಿಹಾರಿನಲ್ಲಿ ಜೂನ್ 24 ರಂದು ಪ್ರಾರಂಭವಾದ ಭಾರತದ ಚುನಾವಣಾ ಆಯೋಗ(ಇಸಿಐ)ದ ‘ವಿಶೇಷ ತೀವ್ರ ಪರಿಷ್ಕರಣೆ’(ಎಸ್‍ಐಆರ್) ಎಂಬುದು ಸುಮಾರು 2ರಿಂದ 3 ಕೋಟಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಬಹುದೇ ಎಂಬ ಭೀತಿಯೊಂದಿಗೆ, ತೀವ್ರ ರಾಜಕೀಯ ಮತ್ತು ಕಾನೂನು ಹೋರಾಟವನ್ನು ಹುಟ್ಟುಹಾಕಿದೆ. ಅದೀಗ ದೇಶದ ಸರ್ವೋಚ್ಚ ನ್ಯಾಯಾಲಯವನ್ನೂ ತಲುಪಿದೆ. ಇಬ್ಬರು ನ್ಯಾಯಾಧೀಶರ ಸುಪ್ರಿಂ ಕೋರ್ಟ್ ಪೀಠ ಚುನಾವಣಾ ಆಯೋಗದ ವಕೀಲರಿಗೆ ಕೆಲವು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದರೂ ಎಸ್‍ಐಆರ್ ಪ್ರಕ್ರಿಯೆಯನ್ನು ಮುಂದುವರೆಸಲು ಅವಕಾಶ ನೀಡಿರುವುದು ಈ ಭೀತಿ ಮುಂದುವರೆಯುವಂತೆ ಮಾಡಿದೆ.
ವೇದರಾಜ. ಎನ್. ಕೆ
ಬಿಹಾರದ ಎಸ್‍ಐಆರ್ ನ್ನು ಆರಂಭಿಸಿರುವ ಮತ್ತು ಅದನ್ನು ನಡೆಸುತ್ತಿರುವ ರೀತಿಗಳೇ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿವೆ. ಇತ್ತೀಚೆಗಷ್ಟೇ ರಾಜ್ಯ ಚುನಾವಣಾ ಯಂತ್ರ ಮತದಾರ ಪಟ್ಟಿಗಳ ಪರಿಷ್ಕರಣೆ ನಡೆಸಿತ್ತು. ‘ವಿಶೇಷ ಸಾರಾಂಶ ಪರಿಷ್ಕರಣೆ’ ಎಂದು ಹೆಸರಿಸಲಾಗಿದ್ದ ಇದು ಜೂನ್ 2024ರಿಂದ ಜನವರಿ 2025ರ ವರೆಗೆ ನಡೆದು ಈಗಾಗಲೇ ಹೊಸ ಮತದಾರ ಪಟ್ಟಿಯನ್ನು ಇನ್ನೇನು ಪ್ರಕಟಿಸುವ ನಿರೀಕ್ಷೆಯಿತ್ತು. ಅದರ ಪ್ರಕಾರ ಬಿಹಾರದ ಮತದಾರರ ಸಂಖ್ಯೆ 7,80,22,933(ದಿ ರಿಪೋರ್ಟರ್ಸ್ ಕಲೆಕ್ಟಿವ್). ಆದರೆ ಇದ್ದಕ್ಕಿದ್ದಂತೆ ಕನಿಷ್ಟ 7 ತಿಂಗಳ ಕೆಲಸ ಕಸದ ಬುಟ್ಟಿ ಸೇರಿದೆ. ಏಕೆಂದರೆ ಜೂನ್ 24 ರಂದು ಚುನಾವಣಾ ಆಯೋಗ ಮತದಾರರ ಪಟ್ಟಿಗಳನ್ನು ಆಮೂಲಾಗ್ರವಾಗಿ ಬದಲಿಸುವ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸುವುದಾಗಿ ಪ್ರಕಟಿಸಿತು.ಮನೆ-ಮನೆಗೆ ಹೋಗಿ ಈ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿತು. “ಕಳೆದ 20 ವರ್ಷಗಳ ದೀರ್ಘ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರಿಸುವುದು, ತೆಗೆಯುವುದು ನಡೆದಿದೆಯಾದ್ದರಿಂದ ಗಹನವಾದ ಬದಲಾವಣೆಗಳು ನಡೆದಿರುವುದನ್ನ ಆಯೋಗ ಗಮನಿಸಿದೆ.
ತ್ವರಿತ ನಗರೀಕರಣ ಮತ್ತು ಮತ್ತೆ-ಮತ್ತೆ ವಲಸೆ ನಿಯಮಿತ ಪ್ರವೃತ್ತಿಯಾಗಿ ಬಿಟ್ಟಿದೆ”- ಇದು ಈ ‘ತೀವ್ರ’ ಪರಿಷ್ಕರಣೆಗೆ ಆಯೋಗ ಕೊಟ್ಟಿರುವ ಕಾರಣ. ಆದರೆ, ಬಿಹಾರದ ಚುನಾವಣಾ ಕಚೇರಿಯ ದಾಖಲೆಗಳಲ್ಲಿ ಈ ಹಿಂದೆ 2003ರಲ್ಲಿ ತೀವ್ರ ಪರಿಷ್ಕರಣೆಯ ನಂತರ ಕಳೆದ ಎರಡು ದಶಕಗಳಲ್ಲಿ ಇದಕ್ಕೆ ಸಾಕ್ಷಿಯೇನೂ ದೊರೆಯುವುದಿಲ್ಲ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ನ ತನಿಖಾ ಪತ್ರಕರ್ತರು ಹೇಳುತ್ತಾರೆ. ಇತ್ತೀಚಿನ ‘ಸಾರಾಂಶ’ ಪರಿಷ್ಕರಣೆಯ ನಂತರವೂ ಆಯೋಗ ಆ ಪರಿಷ್ಕರಣೆಯಲ್ಲಿ ಏನಾದರೂ ಕುಂದು-ಕೊರತೆಗಳನ್ನು ಆಯೋಗ ದಾಖಲಿಸಿರಲಿಲ್ಲವಂತೆ.
ಆದರೂ, ಬಿಹಾರದ ಮತದಾರ ಪಟ್ಟಿಗಳಲ್ಲಿ ಅಷ್ಟೊಂದು ಕುಂದು ಕೊರತೆಗಳಿದ್ದರೆ, ಕಳೆದ ಎರಡು ದಶಕಗಳಲ್ಲಿ ನಡೆದ ಐದು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಫಲಿತಾಂಶಗಳ ಕತೆ ಏನು ಎಂದೂ ಕೆಲವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪದವಿ, ಇಂಜಿನೀಯರಿಂಗ್ ಬೋಧಕ ವರ್ಗದ ತರಬೇತಿಗೆ ಅಜೀಂ ಪ್ರೇಮ್‌ಜಿಗೆ ಹೊಣೆ – ವ್ಯಾಪಕ ವಿರೋಧ
ಇಷ್ಟೇ ಅಲ್ಲ, ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲೇ ಅಭೂತಪೂರ್ವವಾದ ಈ ‘ತೀವ್ರ’ ಪರಿಷ್ಕರಣೆಗೆ ಆಯೋಗದ ವಿಧಿಸಿದ ಈ ಕೆಳಗಿನ ನಿಬಂಧನೆಗಳು ಮತ್ತು ಬಿಗಿಯಾದ ಗಡುವುಗಳು ಬೇರೆಯದೇ ಪ್ರಶ್ನೆಗಳನ್ನು ಎತ್ತಿವೆ:
1. 2003 ರ ವರೆಗೆ ನೊಂದಾಯಿಸಿದ್ದ ಮತದಾರು , ತಾವು ಆ ವರ್ಷದ ಮತದಾರ ಪಟ್ಟಿಯಲ್ಲಿ ಇದ್ದಿದ್ದ ಬಗ್ಗೆ ಸಾಕ್ಷ್ಯ ಒದಗಿಸಬೇಕು.
2. 2003ರ ಪಟ್ಟಿಯಲ್ಲಿ ಹೆಸರಿರದ 40ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮತದಾರರು, ತಮ್ಮ ಪೌರತ್ವ, ಗುರುತು ಮತ್ತು ನಿವಾಸದ ದಾಖಲೆಗಳನ್ನು ಒದಗಿಸಬೇಕು.
3. 21 ರಿಂದ 40 ವರ್ಷ ವಯಸ್ಸಿನ ಮತದಾರರು ತಮ್ಮ ತಂದೆ-ತಾಯಿ 2003ರ ಪಟ್ಟಿಯಲ್ಲಿ ಮತದಾರರಾಗಿದ್ದ ಬಗ್ಗೆ ಸಾಕ್ಷ್ಯ ಒದಗಿಸಬೇಕು, ಇಲ್ಲವೇ ತಮ್ಮ ಗುರುತು ಮತ್ತು ಪೌರತ್ವವನ್ನು ಮತ್ತು ತಮ್ಮ ತಂದೆ-ತಾಯಿಯ ಗುರುತು ಮತ್ತು ಪೌರತ್ವವನ್ನು ಸಾಬೀತು ಪಡಿಸಬೇಕು.
4. 2004ರ ನಂತರ ಹುಟ್ಟಿದ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರು ಕೂಡ ಇದೇ ರೀತಿಯಲ್ಲಿ ತಮ್ಮ ತಂದೆ-ತಾಯಿ 2003ರ ಪಟ್ಟಿಯಲ್ಲಿ ಮತದಾರರಾಗಿದ್ದ ಬಗ್ಗೆ ಸಾಕ್ಷ್ಯ ಒದಗಿಸಬೇಕು, ಇಲ್ಲವೇ ತಮ್ಮ ಗುರುತು ಮತ್ತು ಪೌರತ್ವದ ಮತ್ತು ತಮ್ಮ ತಂದೆ-ತಾಯಿಯ ಗುರುತು ಮತ್ತು ಪೌರತ್ವದ ದಾಖಲೆಗಳನ್ನು ಕೊಡಬೇಕು.
ಅಂದರೆ, ಜನವರಿ 1, 2003 ರ ವೇಳೆಗೆ ನೋಂದಾಯಿಸಲಾದ 4.96 ಕೋಟಿ ಮತದಾರರೊಂದಿಗೆ, ಬಿಹಾರದ ಎಲ್ಲಾ 7.9 ಕೋಟಿಯಷ್ಟು ಮತದಾರರು ಗಣತಿ ಪ್ರಪತ್ರ(ಫಾರ್ಮ್)ಗಳನ್ನು ಸಲ್ಲಿಸಬೇಕು. ಅವರ ಜನ್ಮ ದಿನಾಂಕ ಮತ್ತು ಸ್ಥಳವನ್ನು ಸಾಬೀತುಪಡಿಸಲು ಹೆಚ್ಚುವರಿ ದಾಖಲೆಗಳನ್ನು ಒದಗಿಸಬೇಕು. 1987 ರ ನಂತರ ಜನಿಸಿದವರಿಗೆ, ಅವರ ಪೋಷಕರು 2003 ರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರ ಗುರುತಿನ ಪುರಾವೆ ಸಹ ಕಡ್ಡಾಯವಾಗಿದೆ.
ಇವನ್ನೆಲ್ಲ ತಮ್ಮ ಗಣನೆ ಪ್ರಪತ್ರದೊಂದಿಗೆ ಸಲ್ಲಿಸಲು ಇರುವ ಅವಧಿ ಕೇವಲ ಒಂದು ತಿಂಗಳು- ಜೂನ್ 26ರಿಂದ ಜುಲೈ 25ರ ಒಳಗೆ. ಆಗಸ್ಟ್ 1, 2025ರಂದು ಕರಡು ಮತದಾರ ಪಟ್ಟಿ ಪ್ರಕಟಿಸಲಾಗುವುದು. ಆ ಬಗ್ಗೆ ಆಕ್ಷೇಪಣೆಗಳು, ಬದಲಾವಣೆಗಳನ್ನು ತಿಳಿಸಲು ಕೊಟ್ಟಿರುವ ಅವಧಿ ಮತ್ತೆ ಒಂದು ತಿಂಗಳು ಮಾತ್ರ. ಆಕ್ಷೇಪಣೆಗಳನ್ನು/ತಪ್ಪುಗಳನ್ನು ಬಿಹಾರ ಚುನಾವಣೆಯ ಅಧಿಸೂಚನೆಯ ಮೊದಲು ಸರಪಡಿಸಲಾಗುತ್ತದೆಯೇ ಎಂಬ ಪ್ರಶ್ನೆಯೂ ಎದ್ದಿದೆ.
2003ರ ಪರಿಷ್ಕರಣೆ ಕಾರ್ಯಕ್ಕೆ ಒಂದು ವರ್ಷದ ವರೆಗೆ ಹಿಡಿಯಿತು, ಇತ್ತೀಚೆಗಷ್ಟೇ, ನಡೆಸಿದ ‘ಸಾರಾಂಶ’ ಪರಿಷ್ಕರಣೆಗೂ ಕನಿಷ್ಟ 7 ತಿಂಗಳು ಬೇಕಾಯಿತು ಎಂಬುದನ್ನು ಇಲ್ಲಿ ಗಮನಿಸಬೇಕು.ಆದರೆ ‘ತೀವ್ರ’ ಪರಿಷ್ಕರಣೆಯನ್ನು ಮೂರೇ ತಿಂಗಳಲ್ಲಿ ಮುಗಿಸಬೇಕಾಗಿದೆ!
ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಆಯೋಗ ಜನನ ಪ್ರಮಾಣಪತ್ರಗಳು, ಪಾಸ್‌ಪೋರ್ಟ್‌ಗಳು ಮತ್ತು ಜಾತಿ ಪ್ರಮಾಣಪತ್ರಗಳಂತಹ 11 ದಾಖಲೆಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಿದೆ, ಆದರೆ ಬಿಹಾರದ ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಅತ್ಯಂತ ಸುಲಭವಾಗಿ ಲಭ್ಯವಿರುವ ಗುರುತಿನ ದಾಖಲೆಗಳಾದ ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ..

ವ್ಯಂಗ್ಯಚಿತ್ರ ಕೃಪೆ:
ಪಿ. ಮಹಮ್ಮದ್
ಈ ದಾಖಲೆಗಳನ್ನು ಹೊರಗಿಡುವುದು, ವಿಶೇಷವಾಗಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮುಸ್ಲಿಮರು ಸೇರಿದಂತೆ ಅಂಚಿನಲ್ಲಿರುವ ಗುಂಪುಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಬಡತನದ ಪ್ರಮಾಣ ಹೆಚ್ಚಿರುವ ರಾಜ್ಯದಲ್ಲಿ ನಗರದ ಜನದಟ್ಟಣೆಯ ಕೊಳೆಗೇರಿಗಳು ಮತ್ತು ಗ್ರಾಮೀಣ ಹೊರವಲಯಗಳಲ್ಲಿ, ಆಗಾಗ ಪ್ರವಾಹಗಳಿಗೆ ಉತ್ತಾಗುವ
ಪ್ರದೇಶಗಳ ಅನೇಕ ನಿವಾಸಿಗಳು ಚುನಾವಣಾ ಆಯೋಗ ಪಟ್ಟಿ ಮಾಡಿದ ದಾಖಲೆಗಳಲ್ಲಿ ಹೆಚ್ಚಿನವನ್ನು ಹೊಂದಿಲ್ಲ.
ಉದ್ಯೋಗವನ್ನು ಅರಸಿ ರಾಜ್ಯದಿಂದ ಹೊರಗೆ ಹೋದವರ ಸಂಖ್ಯೆ 1.76 ಕೋಟಿ ಎಂದು ಅಂದಾಜಿಸಲಾಗಿದೆ, ಇವರು ಊರಿಗೆ ಬಂದು ಒಂದು ತಿಂಗಳೊಳಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸುವುದು ಹರಸಾಹಸವೇ ಸರಿ.
ಇವರೆಲ್ಲರೂ ಮತದಾನದ ಬಹುಮೂಲ್ಯ ಹಕ್ಕನ್ನು ಕಳಕೊಳ್ಳುವ ಸಂಭವವಿದೆ, ಮತ್ತು ಇಂತವರ ಸಂಖ್ಯೆ 2 ರಿಂದ 3 ಕೋಟಿ ಆಗಬಹುದು ಎಂದು ಹೇಳಲಾಗುತ್ತಿದೆ.
ಸುಪ್ರೀಂ ಕೋರ್ಟ್ ವಿಚಾರಣೆ -ಮತದಾರ ಪಟ್ಟಿ ಪರಿಷ್ಕರಣೆಯೇ? ಅಥವ ಪೌರತ್ವ ಪರೀಕ್ಷಣೆಯೇ?
ಈ ಹಿನ್ನೆಲೆಯಲ್ಲಿ ಜುಲೈ 10 ರಂದು ಸುಪ್ರೀಂ ಕೋರ್ಟ್ ಪೀಠ ಈ ಪರಿಷ್ಕರಣೆ ಪ್ರಕ್ರಿಯೆಯನ್ನು ತಡೆಯದಿರುವುದು ಸಹಜವಾಗಿಯೇ ಆತಂಕ ಉಂಟು ಮಾಡಿದೆ. ಆದರೂ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್‍ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಆಯೋಗದ ವಕೀಲರು, ಆಧಾರ್ ಪೌರತ್ವದ ದಸ್ತಾವೇಜು ಅಲ್ಲವಾದ್ದರಿಂದ ಅದನ್ನು ಸ್ವೀಕರಿಸಬಹುದಾದ ದಾಖಲೆಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಸಮರ್ಥಿಸಿಕೊಂಡರೂ, ಆಧಾರ್ನ್ನು ಮಾನ್ಯ ದಾಖಲೆಯಾಗಿ ಸ್ವೀಕರಿಸುವುದನ್ನು ಪರಿಗಣಿಸಬೇಕೆಂದು ಆಯೋಗಕ್ಕೆ ಹೇಳಿದೆ. ಸರಕಾರ ಹಲವಾರು ಪ್ರಮಾಣ ಪತ್ರಗಳಿಗೆ ಆಧಾರ್ ನ್ನು ಪರಿಗಣಿಸುತ್ತಿರುವಾಗ, 11 ದಾಖಲೆಗಳ ಪಟ್ಟಿಯಿಂದ ಅದನ್ನು ಹೊರಗಿಡುವುದು ಸಮಸ್ಯಾತ್ಮಕವಾಗಿದೆ ಎಂದು ಪೀಠ ಒತ್ತಿಹೇಳಿತು. ಅದೇ ರೀತಿಯಲ್ಲಿ ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಕೂಡ ಮಾನ್ಯ ದಾಖಲೆಗಳಾಗಿ ಸ್ವೀಕರಿಸುವುದನ್ನು ಪರಿಗಣಿಸಬೇಕೆಂದೂ ಪೀಠ ಹೇಳಿದೆ. ಆಯೋಗ ಪಟ್ಟಿ ಮಾಡಿರುವ 11 ದಾಖಲೆಗಳೂ ಪೌರತ್ವದ ದಾಖಲೆಗಳೇನಲ್ಲ ಎಂದೂ ಪೀಠ ಟಿಪ್ಪಣಿ ಮಾಡಿತು.
ಈ ಪರಿಷ್ಕರಣೆಯ ಸಮಯ ಮತ್ತು ಅವಧಿಯನ್ನೂ ಸಹ ನ್ಯಾಯಾಲಯವು ಪ್ರಶ್ನಿಸಿತು, ಇದನ್ನು ಚುನಾವಣೆಗಳಿಗೆ ಹತ್ತಿರದಲ್ಲಿ ಏಕೆ ನಡೆಸಲಾಗುತ್ತಿದೆ ಮತ್ತು ಸಾಮಾನ್ಯವಾಗಿ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವ ಜವಾಬ್ದಾರಿಯಾದ ಪೌರತ್ವ ಪರಿಶೀಲನೆಯ ಮೇಲೆ ಆಯೋಗ ಏಕೆ ಗಮನಹರಿಸುತ್ತಿದೆ ಎಂದು ಕೇಳಿತು. ಈ ಪರಿಷ್ಕರಣೆಯ ಅಡಿಯಲ್ಲಿ “ನೀವು ಪೌರತ್ವವನ್ನು ಪರೀಕ್ಷಿಸಬೇಕೆಂದಿದ್ದರೆ, ನೀವು ಬೇಗನೇ ಕಾರ್ಯ ಪ್ರವೃತ್ತರಾಗಬೇಕಿತ್ತು; ಇದೀಗ ವಿಳಂಬವಾಗಿದೆ” ಎನ್ನುತ್ತ ನ್ಯಾಯಪೀಠ “ಮತದಾನದ ಹಕ್ಕು… ಈ ಪ್ರಶ್ನೆ ಒಂದು ಮಹತ್ವದ ಪ್ರಶ್ನೆ ಎಂಬುದರಲ್ಲಿ ಸಂದೇಹವೇ ಇಲ್ಲ, ಇದು ಪ್ರಜಾಪ್ರಭುತ್ವದ ಮೂಲಕ್ಕೇ ಹೋಗುತ್ತದೆ” ಎಂದು ಟಿಪ್ಪಣಿ ಮಾಡಿತು.
ನ್ಯಾಯಪೀಠ ವಿಚಾರಣೆಯ ನಂತರ ಹೊರಡಿಸಿದ ತನ್ನ ಆದೇಶದಲ್ಲಿ ಈ ಪರಿಷ್ಕರಣೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ದು ಹೇಳಿದೆ: 1. ಈ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಅಧಿಕಾರ; 2. ಅದು ಅಂಗೀಕರಿಸಿರುವ ವಿಧಾನ ಮತ್ತು ಅದನ್ನು ಕೈಗೊಂಡಿರುವ ರೀತಿ ಮತ್ತು 3. ಇದನ್ನು ಕೈಗೊಂಡಿರುವ ಸಮಯ- ಇದರಲ್ಲಿ, ಕರಡು ಮತದಾರ ಪಟ್ಟಿಗಳ ಸಿದ್ಧತೆ, ಆಕ್ಷೇಪಣೆಗಳು ಇತ್ಯಾದಿ ಮತ್ತು ಅಂತಿಮ ಮತದಾರ ಪಟ್ಟಿಯ ಪ್ರಕಟಣೆಯ ಸಮಯ ಪಟ್ಟಿಯೂ ಸೇರಿದೆ. ಇವುಗಳ ಬಗ್ಗೆ ವಿಚಾರಣೆಯ ಅಗತ್ಯವಿದೆ. ಆದ್ದರಿಂದ ಮುಂದಿನ ವಿಚಾರಣೆಯನ್ನು, ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲು, ಜುಲೈ 28ಕ್ಕೆ ನಿಗದಿಪಡಿಸಲಾಗಿದೆ, ಜುಲೈ 21 ರೊಳಗೆ ಚುನಾವಣಾ ಆಯೋಗ ಪ್ರತಿ-ಅಫಿಡವಿಟ್ ಸಲ್ಲಿಸತಕ್ಕದ್ದು ಎಂದು ಈ ಆದೇಶದಲ್ಲಿ ಹೇಳಲಾಗಿದೆ.
ಅಲ್ಲದೆ, ಈ ವಿಷಯಗಳು ಕರಡು ಮತದಾರ ಪಟ್ಟಿ ಪ್ರಕಟಣೆಗೆ ನಿಗದಿ ಮಾಡಿರುವ ಆಗಸ್ಟ್ 1 ರೊಳಗೆ ಸೂಕ್ತ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿರುವುದರಿಂದ , ಮಧ್ಯಂತರ ತಡೆಯಾಜ್ಞೆಯನ್ನು ನೀಡಬೇಕಾದ ಸಂದರ್ಭವಿಲ್ಲ,ಅಲ್ಲದೆ ಅರ್ಜಿದಾರರು ಈ ಹಂತದಲ್ಲಿ ಅದನ್ನು ಒತ್ತಾಯ ಮಾಡುತ್ತಿಲ್ಲ ಕೂಡ. ಚುನಾವಣಾ ಆಯೋಗದ ಉತ್ತರವನ್ನು ಅವಲಂಬಿಸಿ ಅರ್ಜಿದಾರರು ಮುಂದಿನ ವಿಚಾರಣೆಯ ಸಂದರ್ಭದಲ್ಲಿ ತಡೆಯಾಜ್ಞೆಗೆ ಒತ್ತಾಯಿಸಬಹುದು ಎಂದು ನ್ಯಾಯ ಪೀಠದ ಆದೇಶ ತಿಳಿಸಿದೆ.
ಆದರೂ, ಜುಲೈ 26 ರ ಗಣತಿ ಫಾರ್ಮ್‍ಗಳನ್ನು ಸಲ್ಲಿಸುವ ಗಡುವು ಸಮೀಪಿಸುತ್ತಿರುವಾಗ, ಪರಿಷ್ಕರಣೆಯನ್ನು ನಿಲ್ಲಿಸಲು ನ್ಯಾಯಾಲಯ ನಿರಾಕರಿಸಿರುವುದು ಅನೇಕರನ್ನು ಆತಂಕಕ್ಕೆ ದೂಡಿದೆ.
ಅಲ್ಲದೆ, ಬುಡಮಟ್ಟದಲ್ಲಿ ಈ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ. ಜುಲೈ 10 ರವರೆಗೆ, ಒಟ್ಟು 5,22,44,956 ಗಣತಿ ಫಾರ್ಮ್ಗಳನ್ನು ಸಂಗ್ರಹಿಸಲಾಗಿದೆ, ಇದು ಬಿಹಾರದಲ್ಲಿ ಒಟ್ಟು 7,89,69,844 (ಸುಮಾರು 7.90 ಕೋಟಿ) ಮತದಾರರಲ್ಲಿ 66.16% ಆಗಿದೆ ಎಂದು ಹೇಳಲಾಗಿದೆ. ಈ ನಡುವೆ ಆಯೋಗದ ಪ್ರಕಟಣೆಗಳು ಗೊಂದಲವನ್ನು ಹೆಚ್ಚಿಸಿವೆ ಎಂದು ಹೇಳಲಾಗಿದೆ. ಮತದಾರರು ಅಗತ್ಯ ದಾಖಲೆಗಳಿಲ್ಲದೆಯೂ ಫಾರ್ಮ್‌ಗಳನ್ನು ಸಲ್ಲಿಸಬಹುದಾಗಿದೆ ಎಂದು ಪಾಟ್ನಾ ಪತ್ರಿಕೆಗಳಲ್ಲಿ ಆಯೋಗದ ಮುಖಪುಟದ ಜಾಹೀರಾತುಗಳು ಪ್ರಕಟವಾಗಿವೆ. ಆದರೆ, ಅತ್ತ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒಗಳು) ಸ್ಥಳೀಯ ತನಿಖೆ ಅಥವಾ ಇತರ ಪುರಾವೆಗಳ ಮೂಲಕ ಅರ್ಹತೆಯನ್ನು ಪರಿಶೀಲಿಸಲಾಗುವುದು ಎಂದು ಹೇಳುತ್ತಿದ್ದಾರಂತೆ. ಅಗತ್ಯ ದಾಖಲೆಗಳಿಲ್ಲದ ಫಾರ್ಮ್‍ಗಳನ್ನು ಏನೆಂದು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ.
ದಾಖಲೆಗಳಿಲ್ಲದೆ ನಾವು ಫಾರ್ಮ್‌ಗಳನ್ನು ಸಲ್ಲಿಸಬಹುದು ಎಂದು ಜಾಹೀರಾತಿನಲ್ಲಿ ಹೇಳಲಾಗಿತ್ತು, ಆದರೆ ಬಿಎಲ್‌ಒ ನನಗೆ ಜನ್ಮ ಪ್ರಮಾಣಪತ್ರ ಬೇಕು, ಇಲ್ಲವಾದರೆ ಗಣನೆ ಮಾಡಲಾಗುವುದಿಲ್ಲ ಎಂದು ಹೇಳಿದರು ಎಂದು ಹಲವು ಮತದಾರರು ದೂರುತ್ತಿದ್ದಾರಂತೆ. ಆಯೋಗದ ಸಾರ್ವಜನಿಕ ಹೇಳಿಕೆಗಳು ಮತ್ತು ಬ್ಲಾಕ್ ಮಟ್ಟದ ಅಧಿಕಾರಿ(ಬಿಎಲ್‍ಒ)ಗಳಿಗೆ ನೀಡಿದ ಸೂಚನೆಗಳ ನಡುವಿನ ವ್ಯತ್ಯಾಸಗಳಿರುವುದು ವರದಿಯಾಗಿದೆ.
ಅಲ್ಲದೆ ಹಲವೆಡೆಗಳಲ್ಲಿ ಕಳಪೆ ಇಂಟರ್ನೆಟ್ ಸಂಪರ್ಕ ಸವಾಲುಗಳನ್ನು ಇನ್ನಷ್ಟು ಹೆಚ್ಚಿಸಿದೆ.

‘ವೋಟ್ ಬಂದಿ’ ರಾಜಕೀಯ?
ಒಟ್ಟಾರೆಯಾಗಿ, ಚುನಾವಣಾ ಆಯೋಗದ ಈ ಕ್ರಮದ ಉದ್ದೇಶವೇ ನಿರ್ದಿಷ್ಟ ಜನವಿಭಾಗಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ ಎಂದು ಹಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಬಿಹಾರದ ನಂತರ ಇದನ್ನು ಪಶ್ಚಿಮ ಬಂಗಾಲದಲ್ಲಿ, ನಂತರ ಇಡೀ ದೇಶದಲ್ಲಿ ಪ್ರಯೋಗಿಸಲಾಗುತ್ತದೆ- ಇದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸೀಮಿತಗೊಳಿಸುವ ಮುಂದಿನ ಹೆಜ್ಜೆಯಾಗಲಿದೆ ಮತ್ತು ಎನ್.ಆರ್.ಸಿ.ಯನ್ನು ಹಿಂಬಾಗಿಲಿನಿಂದ ತರುವ ಪ್ರಯತ್ನವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಿಹಾರದಲ್ಲಂತೂ ಜನಸಾಮಾನ್ಯರು ಇದು ತಮ್ಮ ಬದುಕನ್ನೇ ಅಲ್ಲಾಡಿಸಿದ ‘ನೋಟ್ ಬಂದಿ’(ನೋಟುರದ್ಧತಿ) ತರಹ ‘ವೋಟ್ ಬಂದಿ’ ಕಾರ್ಯಾಚರಣೆ ಎಂದು ಹೇಳಲಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಜುಲೈ 9 ರಂದು, ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ದಿನ,ಅದರೊಂದಿಗೇ ದೊಡ್ಡ ಪ್ರಮಾಣದಲ್ಲಿ ‘ವೋಟ್ ಬಂದಿ’ ವಿರುದ್ಧ ಪ್ರತಿಭಟನೆ ಕಂಡಿರುವುದು ಇದಕ್ಕೆ ಸಾಕ್ಷಿ. ‘ಇಂಡಿಯ’ ಬಣದ ರಾಜಕೀಯ ಪಕ್ಷಗಳು ಕರೆ ನೀಡಿದ ಪ್ರತಿಭಟನೆಗೆ ಪಾಟ್ನಾದಲ್ಲಿ ಬೃಹತ್ ಸ್ಪಂದನೆ ವ್ಯಕ್ತಗೊಂಡಿತು.
ಇದನ್ನೂ ನೋಡಿ: ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media
ತುರ್ತು ಪರಿಸ್ಥಿತಿಯ ಮೊದಲಿನ 1974 ರ ಚಳುವಳಿಯ ಉತ್ಸಾಹ ಪಾಟ್ನಾದಲ್ಲಿ ಮರುಕಳಿಸಿದಂತಿತ್ತು ಎಂದು ವರದಿಯಾಗಿದೆ. ‘ಇಂಡಿಯ’ ಬಣದ ರಾಜ್ಯ ಘಟಕದಂತಿರುವ ‘ಮಹಾಗಠ್ ಬಂಧನ್’ ಪಕ್ಷಗಳ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಬಿಹಾರ ವಿಧಾನಸಭೆಯ ಬಳಿಯ ಚುನಾವಣಾ ಆಯೋಗದ ಕಚೇರಿಗೆ ಬೃಹತ್ ಮೆರವಣಿಗೆ ಹೊರಟಿತು. ತೆರೆದ ಜೀಪಿನಲ್ಲಿ, ಸಂಸತ್ತಿನಲ್ಲಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಮತ್ತು ವಿಐಪಿ ನಾಯಕ ಮುಖೇಶ್ ಸಹಾನಿ ನೇತೃತ್ವದಲ್ಲಿ ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ನಡೆಯಿತು.
1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿಗೆ ಧೈರ್ಯದಿಂದ ಸವಾಲುಹಾಕಿದ್ದ ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸ್ಮರಣೆಯಲ್ಲಿ ನಿರ್ಮಿಸಲ್ಪಟ್ಟಿರುವ ಪ್ರಸಿದ್ಧ ಏಳು ಹುತಾತ್ಮರ ಪ್ರತಿಮೆಯ ಬಳಿ ಬಿಹಾರ ವಿಧಾನಸಭಾ ಪ್ರದೇಶಕ್ಕೆ ಪೊಲಿಸ್ ಬ್ಯಾರಿಕೇಡ್ ಹಾಕಲಾಗಿತ್ತು. ಈ ಐತಿಹಾಸಿಕ ಹಿನ್ನೆಲೆಯಲ್ಲಿ, ಮಹಾಗಠಬಂಧನ್ ನಾಯಕರು ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ, ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಭಾರತದ ಕಲ್ಪನೆಯನ್ನು ಎತ್ತಿಹಿಡಿಯಲು ಕರೆ ನೀಡಿದರು.
ಇತ್ತೀಚಿನ ಮಹಾರಾಷ್ಟ್ರ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಚುನಾವಣಾ ಫಲಿತಾಂಶಗಳಲ್ಲಿ ಕೈಚಳಕ ನಡೆಸಿ ಅದನ್ನು ತಮ್ಮ ಪರವಾಗಿ ತಿರುಗಿಸಿಕೊಂಡರು ಎಂಬುದನ್ನು ನೆನಪಿಸುತ್ತ, ಮತದಾರರನ್ನು, ವಿಶೇಷವಾಗಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ವಲಸೆ ಕಾರ್ಮಿಕರು ಮತ್ತು ಇತರ ಅಂಚಿನಲ್ಲಿರುವ ವರ್ಗಗಳ ಮತದಾನದ ಹಕ್ಕನ್ನು ವಂಚಿಸಿ ಅಕ್ರಮವಾಗಿ ಅಧಿಕಾರವನ್ನು ವಶಪಡಿಸಿಕೊಳ್ಳುವ ಹುನ್ನಾರದಿಂದ ಬಿಹಾರದಲ್ಲಿ ಇದೇ ರೀತಿಯ ತಂತ್ರಗಳನ್ನು ಅತ್ಯಂತ ಒರಟು ರೀತಿಯಲ್ಲಿ ಪ್ರಯೋಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಎಚ್ಚರಿಸಿದರು.
ಬಿಜೆಪಿ-ಜೆಡಿ(ಯು) ಮೈತ್ರಿಕೂಟವು ವ್ಯಾಪಕ ಸಾರ್ವಜನಿಕ ಅಸಮಾಧಾನವನ್ನು ಎದುರಿಸುತ್ತಿದೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಘೋರ ಸೋಲನ್ನು ಎದುರಿಸಬೇಕಾಗಿದೆ ಎಂಬ ಬುಡಮಟ್ಟದಿಂದ ಬರುತ್ತಿರುವ ವರದಿಗಳಿಗೆ ಪ್ರತಿಕ್ರಿಯೆಯಾಗಿ, ಅವರು ಈಗ ಚುನಾವಣಾ ಆಯೋಗದ ಸಾಂವಿಧಾನಿಕ ಸ್ವಾಯತ್ತತೆಯನ್ನು ನಾಶಮಾಡಲು ಮತ್ತು ಅದು ಆಳುವ ಪಕ್ಷದ ನಿರ್ದೇಶನಗಳ ಅಡಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದೂ ‘ಇಂಡಿಯ’ ಬಣದ ಮುಖಂಡರು ಜನರನ್ನು ಎಚ್ಚರಿಸಿದರು.
ಈಗ ಜುಲೈ 26 ರ ಗಡುವು ಸಮೀಪಿಸುತ್ತಿದ್ದಂತೆ, ಬಿಹಾರದ ನಿವಾಸಿಗಳ ಆತಂಕ ಹೆಚ್ಚುತ್ತಿದೆ. ಸಾಕ್ಷರತಾ ಪ್ರಮಾಣ ಕಡಿಮೆ ಇರುವ ಮತ್ತು ದಾಖಲೆಗಳ ಲಭ್ಯತೆ ಸೀಮಿತವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ, ಈ ಎಸ್‍ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಭಯದ ವಾತಾವರಣವನ್ನು ಸೃಷ್ಟಿಸಿದೆ. ಜನರು ತಮ್ಮ ಮತವನ್ನು ಮಾತ್ರವಲ್ಲದೆ ತಮ್ಮ ಪಡಿತರ ಮತ್ತು ಪಿಂಚಣಿಗಳನ್ನು ಸಹ ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ ಎಂದು ವರದಿಯಾಗಿದೆ (ನ್ಯೂಸ್ ಕ್ಲಿಕ್, ಜುಲೈ11). ಚುನಾವಣಾ ಆಯೋಗ ಸುಪ್ರಿಂ ಕೋರ್ಟಿನ ಪೀಠ ಸೂಚಿಸಿದಂತೆ ಆಧಾರ್, ಮತದಾರ ಚೀಟಿ ಮತ್ತು ರೇಷನ್ ಕಾರ್ಡನ್ನು ಗುರುತಿನ ದಾಖಲೆಗಳಾಗಿ ಸ್ವೀಕರಿಸಲು ಸಿದ್ಧವಾಗುತ್ತದೆಯೇ, ಇಲ್ಲವಾದರೆ ಸುಪ್ರಿಂ ಕೋರ್ಟ್ ಏನು ಹೇಳಲಿದೆ-ಕಾದು ನೋಡಬೇಕಾಗಿದೆ.

ಅಮ್ಮಾ, ಮತ್ತೆ ನೋಟ್‍ಬಂದಿ..?
ಇಲ್ಲ, ಇದು ವೋಟ್‍ಬಂದಿ
ವ್ಯಂಗ್ಯಚಿತ್ರಕೃಪೆ: ರಾಕೇಶ್ ರಂಜನ್,
ಮೊಲಿಟಿಕ್ಸ್, ಇನ್
