ಮೈಸೂರು: ಕೆಪಿಎಸ್ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ನಡೆಸಿದ್ದ ಆರೋಪ ಮೇಲೆ ಎನ್.ಆರ್. ಸಂಚಾರ ವಿಭಾಗದ ಪಿಎಸ್‌ಐ ಅಶ್ವಿನಿ ಅನಂತಪುರ ಅವರನ್ನು ಅಮಾನತು ಮಾಡಲಾಗಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ದಾಖಲೆಗಳ ಸಮೇತ ಆರೋಪ ಮಾಡಿದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಅಶ್ವಿನಿ ಅನಂತಪುರರನ್ನು ಅಮಾನತು ಮಾಡಿ ಆದೇಶಿಸಿದ್ಧಾರೆ.
ಎಂ. ಲಕ್ಷ್ಮಣ್ ಅವರು ಅಶ್ವಿನಿ ಬಾಗಲಕೋಟೆಯ ಸಂಗಮೇಶ್ ಝಳಕಿ ಜೊತೆ ಹಣದ ವ್ಯವಹಾರದ ಬಗ್ಗೆ ಸಂಭಾಷಣೆ ನಡೆಸಿರೊ ಆಡಿಯೋ ಬಯಲು ಮಾಡಿದ್ಧಾರೆ. ವಾಟ್ಸಾಪ್ ಚಾಟಿಂಗ್, ಬ್ಯಾಂಕ್ ವಿವರಗಳನ್ನು ಬಹಿರಂಗಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆ ಬಾಕಿ ಇರಿಸಿ, ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ಧಾರೆ.
ಪ್ರಕರಣ ಹಿನ್ನಲೆ: ಕೆಪಿಎಸ್‌ಸಿ ಎಫ್‌ಡಿಎ ನೇಮಕಾತಿ ಪ್ರಕ್ರಿಯೆಯಲ್ಲಿ ಬಸವರಾಜು ಎಂಬುವರಿಗೆ ಕೆಲಸ ಕೊಡಿಸಲು ಬಾಗಲಕೋಟೆ ಜಿಲ್ಲೆಯ ಸಂಗಮೇಶ ಝಳಕಿ ಎಂಬುವರ ಜೊತೆ ಆರೋಪಿ ಪಿಎಸ್‌ಐ ಅಶ್ವಿನಿ ಮಾತನಾಡಿದ್ದಾರೆ ಎನ್ನಲಾದ ಮೊಬೈಲ್ ಹಾಗೂ ವಾಟ್ಸ್‌ಆಯಪ್ ಆಡಿಯೊ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಹಣ ಅಕ್ರಮ ವರ್ಗಾವಣೆಯ ಬ್ಯಾಂಕ್ ಸ್ಟೇಟ್‌ಮೆಂಟ್ ಕೂಡ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಆರೋಪ ಮಾಡಿದ್ದರು. ಕೆಪಿಎಸ್ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ಮಾಡಿದ್ದಾರೆ ಎಂದು ಲಕ್ಷ್ಮಣ್ ದಾಖಲೆಗಳ ಸಮೇತ ಆರೋಪ ಮಾಡಿದ್ದರು.